ರಾಜ್ಯ

ಪರಿಶಿಷ್ಟ ಪಂಗಡದವರಿಗೆ ಇರುವ ಶೈಕ್ಷಣಿಕ ಸೌಲಭ್ಯಗಳೇನು? ನೀವೂ ತಿಳಿಯಿರಿ….ನಿಮ್ಮವರಿಗೂ ತಿಳಿಸಿ

ಸರಕಾರ ನ್ಯೂಸ್‌ ಬೆಂಗಳೂರು

ಪರಿಶಿಷ್ಟರ ಕಲ್ಯಾಣಕ್ಕಾಗಿ ಸರ್ಕಾರ ಹಲವಾರು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಆದರೆ, ಬಹುತೇಕರಿಗೆ ಈ ಯೋಜನೆಗಳ ಅರಿವು ಇರುವುದೇ ಇಲ್ಲ. ಹೀಗಾಗಿ ಸಾಕಷ್ಟು ಜನ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ.

ಆದ್ದರಿಂದ ಪರಿಶಿಷ್ಟ ಪಂಗಡದವರ ಶೈಕ್ಷಣಿಕ ಅನುಕೂಲಕ್ಕಾಗಿ ಇರುವ ಯೋಜನೆಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನವೇ ಈ ವರದಿ. ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಡಿ ನಡೆಯುವ ಆಶ್ರಮ ಶಾಲೆಗಳು, ವಿದ್ಯಾರ್ಥಿಗಳ ಸಂಖ್ಯಾಬಲ, ಶಿಕ್ಷಕರು ಹಾಗೂ ಸಿಬ್ಬಂದಿ ವೇತನ ಕುರಿತ ಸವಿವರ ಇಲ್ಲಿದೆ ನೋಡಿ.

ಆಶ್ರಮ ಶಾಲೆಗಳ ವ್ಯವಸ್ಥೆ:

1. ಪರಿಶಿಷ್ಟ ಪಂಗಡಗಳ ಇಲಾಖಾವತಿಯಿಂದ 119 ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಸದರಿ ಶಾಲೆಗಳಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ಉಚಿತ ಊಟ, ವಸತಿ, ಸಮವಸ್ತ್ರ, ಶೂ& ಸಾಕ್ಸ್, ಶುಚಿಕಿಟ್, ಲೇಖನ ಸಾಮಗ್ರಿಗಳು ಇತ್ಯಾದಿ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವ್ಯವಸ್ಥಿತವಾಗಿ ನಿರ್ವಹಿಸಲಾಗುತ್ತಿದೆ.

2. ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗಳು ಬಹುತೇಕ ಹಾಡಿ/ಕಾಲೋನಿಗಳ ವ್ಯಾಪ್ತಿಯಲ್ಲಿರುವುದರಿಂದ ಮಕ್ಕಳು ಶಿಕ್ಷಣವನ್ನು ಮುಂದುವರೆಸಲು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2024-25ನೇ ಸಾಲಿನ ಆಯವ್ಯಯ ಘೋಷಣೆಯಂತೆ 5ನೇ ತರಗತಿಯವರೆಗಿನ ಶಾಲೆಗಳಲ್ಲಿ 6ನೇ ತರಗತಿಯನ್ನು, 7ನೇ ತರಗತಿಯ ಶಾಲೆಗಳಲ್ಲಿ 8ನೇ ತರಗತಿಯನ್ನು ಪ್ರಾರಂಭಿಸಲಾಗಿರುತ್ತದೆ ಹಾಗೂ ಪ್ರತಿ ತರಗತಿಯ ಸಂಖ್ಯಾಬಲವನ್ನು 25 ರಿಂದ 40 ಕ್ಕೆ ಹೆಚ್ಚಿಸಿ ಪ್ರವೇಶ ಕಲ್ಪಿಸಲಾಗಿದೆ.

ಪರಿಶಿಷ್ಟ ಪಂಗಡದವರಿಗೆ ಮಹತ್ವದ ಮಾಹಿತಿ, ಭೂ ಒಡೆತನ ಯೋಜನೆ ಮಾನದಂಡಗಳೇನು? ಅನುಸರಿಸುವ ವಿಧಾನ, ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಡಿಟೇಲ್ಸ್‌

ಶಿಕ್ಷಕರು ಮತ್ತು ವೇತನಾ ಸೌಲಭ್ಯ:

1. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ 444 ಶಿಕ್ಷಕರ ಹುದ್ದೆಗಳ ಪೈಕಿ 200 ಆಶ್ರಮ ಶಾಲಾ ಶಿಕ್ಷಕರ ಹುದ್ದೆಗಳನ್ನು ಅನುಮತಿ ನೀಡಲು ಸರ್ಕಾರದಿಂದ ಅನುಮತಿ ನೀಡಲಾಗಿರುತ್ತದೆ.

2. ಆದರೆ ಹೊಸದಾಗಿ ಯಾವುದೇ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಬಾರದೆಂದು ಸರ್ಕಾರದಿಂದ ಸುತ್ತೋಲೆ ಹೊರಡಿಸಲಾಗಿದ್ದು, ಸದರಿ ಸುತ್ತೋಲೆಯನ್ನು ತೆರವುಗೊಳಿಸಿದ ನಂತರ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು.

3. ಮುಂದುವರೆದು, ಪ್ರಸ್ತುತ ಖಾಲಿ ಇರುವ ಶಿಕ್ಷಕರು ಹಾಗೂ ಇನ್ನಿತರೆ ಹುದ್ದೆಗಳಿಗೆ ಎದುರಾಗಿ ಎರವಲು ಸೇವೆ/ಹೊರಸಂಪನ್ಮೂಲದಿಂದ ಸಿಬ್ಬಂದಿಗಳನ್ನು ಪಡೆದು ಶಾಲೆಗಳನ್ನು ನಿರ್ವಹಿಸಲಾಗುತ್ತಿದೆ.

4. ಸರ್ಕಾರದಿಂದ ಕಾಲಕಾಲಕ್ಕೆ ನಿಗಧಿಪಡಿಸುವ ವೇತನ ಇನ್ನಿತರೆ ಸೇವಾ ಸೌಲಭ್ಯಗಳನ್ನು ನಿಯಮಾನುಸಾರ ನೀಡಲಾಗುತ್ತಿದೆ.

ಖಾಯಂಗೊಳಿಸುವ ಪ್ರಸ್ತಾವನೆ ಸದ್ಯಕ್ಕಿಲ್ಲ:

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಹೊರಸಂಪನ್ಮೂಲದಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕರುಗಳ ಅರೆಕಾಲಿಕ ನೇಮಕಾತಿಯನ್ನು ಖಾಯಂಗೊಳಿಸುವ ಕುರಿತಾಗಿ ಯಾವುದೇ ಪ್ರಸ್ತಾವನೆಗಳು ಇರುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅಧಿವೇಶನದಲ್ಲಿ ಮಾಹಿತಿ ನೀಡಿದ್ದಾರೆ.

error: Content is protected !!