ಈಶ್ವರಪ್ಪ ಅವರ ನೂತನ ಸಂಘಟನೆ ಯಾವುದು ಗೊತ್ತಾ? ಮಹತ್ವದ ಹೆಸರು ಘೋಷಣೆ
ಸರಕಾರ ನ್ಯೂಸ್ ವಿಜಯಪುರ
ತೀವ್ರ ಕುತೂಹಲ ಕೆರಳಿಸಿದ್ದ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರ ನೂತನ ಬ್ರಿಗೇಡ್‌ಗೆ ಕ್ರಾಂತಿವೀರ ಎಂದು ಹೆಸರಿಸಲಾಗಿದ್ದು, ಉದ್ಘಾಟನೆಗೆ ಮುಹೂರ್ತವೂ ನಿಗದಿಗೊಳಿಸಲಾಗಿದೆ.
ಸುಕ್ಷೇತ್ರ ಅರಕೇರಿ ಅಮೋಘಸಿದ್ಧೇಶ್ವರದ ದೇವಸ್ಥಾನದಲ್ಲಿ ಶನಿವಾರ ಸಂಜೆ ಸಾಧುಸಂತರ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಕೆ.ಎಸ್. ಈಶ್ವರಪ್ಪ ಅವರು, ನೂತನ ಸಂಘಟನೆಗೆ ಕ್ರಾಂತಿವೀರ ಬ್ರಿಗೇಡ್ ಎಂದು ಹೆಸರಿಸಲಾಗಿದ್ದು, ಬರುವ ಫೆ. 4 ರಂದು ಬಸವ ಜನ್ಮಭೂಮಿ ಬಸವನಬಾಗೇವಾಡಿಯಲ್ಲಿ ಸ್ವಾಮೀಜಿಗಳ ಪಾದಪೂಜೆಯೊಂದಿಗೆ ಉದ್ಘಾಟನೆಗೊಳ್ಳಲಿದೆ.
ಸಾಧು ಸಂತರ ಸಮ್ಮುಖದಲ್ಲಿ ಹೆಸರು ಘೋಷಣೆಯಾಗಲಿದೆ ಎಂದು ಅರಕೇರಿಯ ಅಮೋಘಸಿದ್ಧೇಶ್ವರ ದೇವಸ್ಥಾನದಲ್ಲಿ ಉದ್ಘಾಟಿಸಲಾಗುವುದೆಂದು ತಿಳಿಸಿದರು.
ರಾಷ್ಟ್ರೀಯತೆ, ಸಾಮಾಜಿಕ ಜಾಗೃತಿ ವಿಚಾರ ದೃಷ್ಠಿಕೋನದೊಂದಿಗೆ ಈ ಬ್ರಿಗೇಡ್ ಸ್ಥಾಪಿಸಲಾಗುತ್ತಿದೆ. ಸಾಧು ಸಂತರ ಸಮ್ಮುಖದಲ್ಲಿ ಮಂಡಳಿ ರಚಿಸಲಾಗಿದೆ. ನಾಡಿನ 50 ಸಾಧು ಸಂತರು ಸಭೆ ನಡೆಸಿ ಈ ಹೆಸರು ಘೋಷಿಸಿದ್ದಾರೆ. ಕಮಿಟಿ ರಚಿಸಲಾಗಿದ್ದು, ಮಾರ್ಗದರ್ಶಕ ಮಂಡಳಿ ಸಹ ರಚಿಸಲಾಗಿದೆ. ಅಲ್ಲದೇ, ಮಖಣಾಪುರದ ಸೋಮೇಶ್ವರ ಸ್ವಾಮೀಜಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದ್ದು, ಬೆಳಗಾವಿಯ ಕವಲಗುಡ್ಡದ ಅಮರೇಶ್ವರ ಸ್ವಾಮೀಜಿ ಪ್ರಧಾನ ಕಾರ್ಯದರ್ಶಿಯಾಗಿ, ಕುಚನೂರಿನ ಮಾಧುಲಿಂಗ ಮಹಾರಾಜರು ಖಜಾಂಚಿಯಾಗಿ, ಗಲಗಲಿಯ ಶ್ರದ್ಧಾನಂದ ಸ್ವಾಮೀಜಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಸಾರ್ವಜನಿಕರು, ಭಕ್ತರು ಮತ್ತೊಂದು ಸಭೆ ನಡೆಸಿ ಪೂರ್ಣ ಪ್ರಮಾಣದ ಸಮಿತಿ ರಚಿಸಲಾಗುವುದು ಎಂದು ತಿಳಿಸಿದರು.
ದ್ವೇಷ ಭಾಷಣ ಮಾಡದಂತೆ ತಡೆ, ಶಾಸಕ ಯತ್ನಾಳ ನೀಡಿದ ಪ್ರತಿಕ್ರಿಯೆ ಏನು ಗೊತ್ತಾ?
ಹಿಂದು ಸಕಲ ಸಮಾಜದವರನ್ನು ಒಳಗೊಂಡ ಹಿಂದು ಬಾಂಧವರ ಸಂಘಟನೆ ಇದಾಗಿದೆ. ಮಠ ಮಂದಿರಗಳಿಗೆ ಸಮಸ್ಯೆಯಾದರೆ ಧ್ವನಿ ಎತ್ತುವುದು, ವಕ್ಫ್ ವಿರುದ್ಧವೂ ಹೋರಾಟ ನಡೆಸಲು ನಿರ್ಧರಿಸಲಾಗುವುದು. ಬಡವರು, ಹಿಂದುಳಿದವರು, ದೀನದಲಿತರಿಗೆ ಸಮಸ್ಯೆಯಾದರೆ ಏನು ಮಾಡಬೇಕೆಂದು ಬ್ರಿಗೇಡ್ ತೀರ್ಮಾನಿಸಲಿದೆ ಎಂದರು.
ಸಣ್ಣ ಸಮಾಜದ ಮಠಗಳು ಸರ್ಕಾರದ ಗಮನಕ್ಕಿಲ್ಲ. ಸಾಮಾಜಿಕ ಚಟುವಟಿಕೆ, ಶೈಕ್ಷಣಿಕ ಚಟುವಟಿಕೆಯಲ್ಲಿ ಸಣ್ಣ ಮಠಗಳ ಪಾತ್ರ ಕಡಿಮೆ ಏನಿಲ್ಲ. ಇಂಥ ಮಠಗಳ ಅಭಿವೃದ್ಧಿಗೆ ಸಾಮಾಜಿಕ ಜಾಗೃತಿ, ರಾಷ್ಟ್ರೀಯ ವಿಚಾರಗಳನ್ನು ಪಸರಿಸುವ ಉದ್ಧೇಶವಿಟ್ಟುಕೊಂಡು ಕ್ರಾಂತೀವೀರ ಬ್ರಿಗೇಡ್ ಕಾರ್ಯನಿರ್ವಹಿಸಲಿದೆ. ಹಾಗಂತ ಬ್ರಿಗೇಡ್‌ಗೂ ರಾಜಕಾರಣಕ್ಕೂ ಯಾವುದೇ ಸಂಬಂಧ ಇಲ್ಲ ಎಂದರು.
ಕ್ರಾಂತಿವೀರ ಬ್ರಿಗೇಡ್‌ನ ಮಾರ್ಗದರ್ಶಕ ಮಂಡಳಿ ಅಧ್ಯಕ್ಷ ಸೋಮೇಶ್ವರ ಸ್ವಾಮೀಜಿ ಮಾತನಾಡಿ, ಉತ್ತರ ಕರ್ನಾಟಕದ ಮಠಗಳಿಗೆ ಸರಿಯಾಗಿ ಜಾಗ, ಮೂಲ ಸೌಕರ್ಯಗಳಿಲ್ಲ. ಅದಕ್ಕಾಗಿ ಉತ್ತರ ಕರ್ನಾಟಕ ಹಿಂದುಳಿದ ಮಠಾಧೀಶರ ಒಕ್ಕೂಟ ಮಾಡಿಕೊಂಡು ಕ್ರಾಂತಿವೀರ ಬ್ರಿಗೇಡ್ ಎಂದು ಹೆಸರಿಟ್ಟಿದ್ದೇವೆ ಎಂದರು.