ಮಳೆಯ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತ, ನೀರಿನಲ್ಲಿ ತೇಲಿ ಹೋದ ವಾಹನಗಳು, ವರುಣನ ರುದ್ರನರ್ತನ ನೀವೇ ನೋಡಿ…
ಸರ್ಕಾರ್ ನ್ಯೂಸ್ ವಿಜಯಪುರ
ವರುಣನ ಆರ್ಭಟಕ್ಕೆ ಬಸಿಲೂರು ಅಕ್ಷರಶಃ ಮಲೆನಾಡಾಗಿರುವುದು ಮಾತ್ರವಲ್ಲ, ಜನಜೀವನವನ್ನು ನರಕಕ್ಕೆ ತಳ್ಳಿದೆ.
ಶನಿವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆಗೆ ಜನ ತಲ್ಲಣಗೊಂಡಿದ್ದಾರೆ. ಸಾಯಂಕಾಲ 4ರಿಂದ ಆರಂಭಗೊಂಡ ಮಳೆ 7 ಗಂಟೆವರೆಗೆ ಬಿಟ್ಟೂ ಬಿಡದೆ ಸುರಿದಿದೆ. ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ. ವಿಜಯಪುರದ ಶಿಕಾರಖಾನೆ ರಸ್ತೆ, ಲಾಲಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ, ಕೆಸಿ ರಸ್ತೆ, ನವಬಾಗ ರಸ್ತೆ, ಶಹಾಪೇಟಿ ಸಂಪೂರ್ಣ ಜಲಾವೃತಗೊಂಡವು.
ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅಪಾರ ಹಾನಿಯುಂಟಾಗಿದೆ. ಅಪ್ಸರಾ ಚಿತ್ರ ಮಂದಿರ ಬಳಿ ಯಥೇಚ್ಚವಾಗಿ ಮಳೆ ನೀರು ಸಂಗ್ರಹಗೊಂಡ ಕಾರಣ ಬೈಕ್, ಕಾರ್ ಮತ್ತಿತರ ವಾಹನಗಳು ಸಂಪೂರ್ಣ ಮುಳುಗಿದವು. ಸ್ಟೇಶನ್ ರಸ್ತೆ ಹಿಂಭಾಗದ ಪ್ರದೇಶದಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ತೀವ್ರ ಸಂಕಷ್ಟಕ್ಕೆ ಸಿಲುಕಿದರು. ರಸ್ತೆ ತುಂಬ ನೀರು ನಿಂತಿದ್ದರಿಂದ ಸಂಚಾರಕ್ಕೆ ಸಂಚಕಾರ ಉಂಟಾಯಿತು. ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿತು. ವ್ಯಾಪಾರಸ್ಥರು ಹಾನಿ ಅನುಭವಿಸಬೇಕಾಯಿತು.
ಮಳೆ ವಾತಾವರಣ ಮುಂದುವರಿದಿದ್ದು ಕೂಡಲೇ ಜಿಲ್ಲಾಡಳಿತ ಸಹಾಯವಾಣಿ ಸ್ಥಾಪಿಸಿ ಜನರಿಗೆ ನೆರವಾಗಬೇಕು. ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ಧಾವಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.