ಬೆಳಗಾವಿವಿಜಯಪುರ

ಸುವರ್ಣಸೌಧದಲ್ಲಿ ಅನುಭವ ಮಂಟಪದ ತೈಲಚಿತ್ರ ಅಳವಡಿಕೆ, ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?

ಬೆಳಗಾವಿ: ಈ ಹಿಂದಿನ ಬಿಜೆಪಿ ಸರ್ಕಾರ ಸುವರ್ಣ ಸೌಧದಲ್ಲಿ ವೀರ ಸಾವರ್ಕರ್ ಅವರ ಫೋಟೊ ಅಳವಡಿಸಿ ಗಮನ ಸೆಳೆದಿದ್ದು, ಇದೀಗ ಪ್ರತ್ಯುತ್ತರವೆಂಬಂತೆ ಕಾಂಗ್ರೆಸ್ ಸರ್ಕಾರ 12ನೇ ಶತಮಾನದ ಅನುಭವ ಮಂಟಪದ ತೈಲಚಿತ್ರ ಅಳವಡಿಸಿ ಗಮನ ಸೆಳೆದಿದೆ.

ಅಸಮಾನತೆ, ಜಾತಿ ವ್ಯವಸ್ಥೆ, ಮನುಷ್ಯ ಶೋಷಣೆಯ ವ್ಯವಸ್ಥೆ ಹೋಗಲಾಡಿಸಿ, ಜಾತಿ ರಹಿತ ಸಮ ಸಮಾಜ ತರಬೇಕು ಎನ್ನುವ ಉದ್ದೇಶದಿಂದ ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನು ಮಾಡಿದರು. ಹೀಗಾಗಿ ಇಂದು ಅವರ ಅನುಭವ ಮಂಟಪದ ತೈಲ ಚಿತ್ರ ಅಳವಡಿಸುವ ಜವಾಬ್ದಾರಿ ಸಿಕ್ಕಿದ್ದು ನನ್ನ ಪುಣ್ಯ ಎಂದು ಸಿಎಂ ಸಿದ್ದರಾಮಯ್ಯ ಸಂತಸ ಮತ್ತು ಹೆಮ್ಮೆ ವ್ಯಕ್ತಪಡಿಸಿದರು.

ಅನುಭವ ಮಂಟಪದ ತೈಲಚಿತ್ರದ ಅನಾವರಣ ನನ್ನ ಕೈಯಿಂದ ಆಗಿರುವುದು ನನ್ನ ಸೌಭಾಗ್ಯ ಎಂದ ಅವರು, 12 ನೇ ಶತಮಾನದಲ್ಲಿ ಅಸಮಾನತೆ, ಜಾತಿ ವ್ಯವಸ್ಥೆ, ಮನುಷ್ಯ ಶೋಷಣೆಯ ವ್ಯವಸ್ಥೆ ಹೋಗಲಾಡಿಸಿ, ಜಾತಿ ರಹಿತ ಸಮ ಸಮಾಜ ತರಬೇಕು ಎನ್ನುವ ಉದ್ದೇಶದಿಂದ ಬಸವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನು ಮಾಡಿದರು. ಮೇಲು-ಕೀಳು ಇರುವುದು, ಮನುಷ್ಯ ತಾರತಮ್ಯ ಇರುವುದು ಧರ್ಮ ಆಗಲು ಸಾಧ್ಯವಿಲ್ಲ. ದಯೆಯೇ ಧರ್ಮದ ಮೂಲ ಎಂದು ಅವಿದ್ಯಾವಂತರಿಗೂ ಅರ್ಥ ಆಗುವಂತೆ ಧರ್ಮವನ್ನು ಬೋಧಿಸಿದರು.

ಮದುವೆ ಕೂಡ ಜಾತಿ ಆಧಾರದಲ್ಲಿ ಏರ್ಪಡಿಸಲಾಗುತ್ತಿತ್ತು. ವ್ಯಕ್ತಿಯ ಯೋಗ್ಯತೆಯನ್ನು ಜಾತಿ, ವರ್ಣ ವ್ಯವಸ್ಥೆ ಆಧಾರದ ಮೇಲೆ ನಿರ್ಧಾರ ಆಗುತ್ತಿತ್ತು. ಪ್ರತಿಭೆ ಕೂಡ ಯೋಗ್ಯತೆ ಆಧಾರದ ಮೇಲೆ ನಿರ್ಧಾರ ಆಗದೆ ಜಾತಿ ಆಧಾರದಲ್ಲಿ ನಿರ್ಧರಿಸಲಾಗುತ್ತಿತ್ತು ಎಂದು ಸಿದ್ದರಾಮಯ್ಯ ವಿವರಿಸಿದರು.

ಅಲ್ಲದೇ, ಆರ್.ಅಶೋಕ, ಅಶ್ವತ್ಥ ನಾರಾಯಣ, ಬಸನಗೌಡ ಪಾಟೀಲ ಯತ್ನಾಳ ಅವರೇ ನೀವೂ ಶೂದ್ರರೇ. ನಿಮ್ಮನ್ನೂ ಸೇರಿಸಿ ಜಿ.ಪರಮೇಶ್ವರ, ಎಚ್.ಕೆ. ಪಾಟೀಲ, ಕೆ.ಎಚ್. ಮುನಿಯಪ್ಪ, ಸಿದ್ದರಾಮಯ್ಯ ಸೇರಿ ಶೂದ್ರರ ಯೋಗ್ಯತೆಯನ್ನು ಜಾತಿ ಆಧಾರದ ಮೇಲೆ ಅಲ್ಲಗಳೆಯಲಾಗುತ್ತಿತ್ತು ಎಂದರು.

ಜಾತಿ ವ್ಯವಸ್ಥೆಯಿಂದ ಲಾಭ ಪಡೆಯುತ್ತಿರುವ ಪಟ್ಟ ಭದ್ರರು ಜಾತಿ ವ್ಯವಸ್ಥೆಯ ಅಸಮಾನತೆಯನ್ನು ಪೋಷಿಸುತ್ತಿದ್ದಾರೆ. ಹುಟ್ಟುವಾಗ ಎಲ್ಲರೂ ವಿಶ್ವ ಮಾನವರೇ ಎಂದು ಕುವೆಂಪು ಹೇಳಿದರೆ, ಕುಲ ಕುಲವೆಂದು ಬಡಿದಾಡದಿರಿ ಎಂದು ಕನಕದಾಸರು ಹೇಳಿದ್ದಾರೆ ಎನ್ನುತ್ತಾ ಇಬ್ಬರ ಉಲ್ಲೇಖಗಳನ್ನೂ ಪ್ರಸ್ತಾಪಿಸಿದರು.

ಇವತ್ತಿನ ವಿಧಾನಸಭೆ, ಇವತ್ತಿನ ಪಾರ್ಲಿಮೆಂಟೇ ಅವತ್ತಿನ ಅನುಭವ ಮಂಟಪ. ಅತ್ಯಂತ ಕೆಳ ಸಮುದಾಯದ ಅಲ್ಲಮ ಪ್ರಭು ಅವರು ಅದರ ಅಧ್ಯಕ್ಷರಾಗಿದ್ದರು. ಎಲ್ಲ ಜಾತಿಯ ಪ್ರತಿನಿಧಿಗಳು, ಮಹಿಳಾ ಪ್ರತಿನಿಧಿ ಶರಣ ಶರಣೆಯರೂ ಅನುಭವ ಮಂಟಪದ ಸದಸ್ಯರಾಗಿದ್ದರು. ಬುದ್ದನ ಕಾಲದಲ್ಲೂ ಈ ರೀತಿಯ ಸರ್ವ ಜಾತಿ , ಸರ್ವ ಧರ್ಮದ ಪ್ರತಿನಿಧಿಗಳನ್ನು ಒಳಗೊಂಡ ಮಂಟಪಗಳಿದ್ದವು ಎಂದು ಚರಿತ್ರೆಯಲ್ಲಿ ಓದಿದ್ದೇವೆ ಎಂದರು.

ಹೀಗಾಗಿ ಅಂಬೇಡ್ಕರ್ ಅವರ ಮಾತಿನ್ನು ನಾವು ಸ್ಮರಿಸಿಕೊಳ್ಳಬೇಕು ಎನ್ನುತ್ತಾ, ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲಾರರು ಎನ್ನುವ ಮಾತನ್ನು ಉಲ್ಲೇಖಿಸಿದರು.

ಶೂದ್ರರು ಮತ್ತು ಮಹಿಳೆಯರಿಗೆ ಶಿಕ್ಷಣವನ್ನು ನಿಷೇಧಿಸಲಾಗಿತ್ತು. ಈ ನಿಷೇಧ ಬಸವಾದಿ ಶರಣರ ಕಾಲದಲ್ಲಿ ಇರಲಿಲ್ಲ ಎಂದರು.
ಜಾತಿ ವ್ಯವಸ್ಥೆಗೆ ಚಲನೆ ಇಲ್ಲ. ನಮ್ಮ ಸಮಾಜ ಚಲನೆ ರಹಿತವಾಗಿದೆ ಎಂದು ಲೋಹಿಯಾ ಮಾತನ್ನು ಮುಖ್ಯಮಂತ್ರಿಗಳು ಉಲ್ಲೇಖಿಸಿದರು. ಆರ್ಥಿಕ ಮತ್ತು ಸಾಮಾಜಿಕ ಚಲನೆ ಸಿಕ್ಕಾಗ ಮಾತ್ರ ಸಮಾಜದ ಚಲನೆ ಸಾಧ್ಯ ಎಂದರು.

ಜಾತಿ ವ್ಯವಸ್ಥೆ ಬಾವಿಯೊಳಗಿನ್ಕಸದಂತೆ. ನೀರು ಸೇದಲು ಕೊಡ ಬಾವಿಗಿಳಿಸಿ ಕದಕಿದಾಗ ಕಸ ಪಕ್ಕಕ್ಕೆ ಸರಿಯುತ್ತದೆ. ನೀರು ಸೇದಿದ ಬಳಿಕ ಮತ್ತೆ ಕಸ ಆವರಿಸಿಕೊಳ್ಳುತ್ತದೆ. ಇದೇ ಜಾತಿ ವ್ಯವಸ್ಥೆ ಎಂದು ವಿಶ್ಲೇಷಿಸಿದರು.

850 ವರ್ಷಗಳ ಹಿಂದೆಯೇ ಬಸವಾದಿ ಶರಣರು ಜಾತಿ ಮೀರಿದ ಸಾಮಾಜಿಕ ವ್ಯವಸ್ಥೆ ರೂಪಿಸಲು ಶ್ರಮಿಸಿದ್ದರು. ಅವರ ಶ್ರಮಕ್ಕೆ ಪ್ರತೀಕವಾದ ಅನುಭವ ಮಂಟಪದ ತೈಲಚಿತ್ರವನ್ನು ನಿಮ್ಮ ಅವಧಿಯಲ್ಲಿ ಅನಾವರಣಗೊಳಿಸಿದ್ದು ಒಳ್ಳೆಯದಾಯಿತು ಎಂದರು

Leave a Reply

Your email address will not be published. Required fields are marked *

error: Content is protected !!