ಸರಣಿ ಕಳ್ಳತನಕ್ಕೆ ಬೆಚ್ಚಿದ ಜನ, ಆತಂಕ ಹೆಚ್ಚಿಸಿದ ಮುಸುಕುಧಾರಿಗಳು….ಎಲ್ಲಿ ಗೊತ್ತಾ?
ಸರ್ಕಾರ್ ನ್ಯೂಸ್ ವಿಜಯಪುರ
ಕೆಲವು ದಿನಗಳ ಹಿಂದಷ್ಟೇ ಗುಮ್ಮಟ ನಗರಿಯ ನಿವಾಸಿಗಳನ್ನು ಬೆಚ್ಚಿ ಬೀಳಿಸಿದ್ದ ಮುಸುಕುಧಾರಿಗಳ ಹಾವಳಿ ಮತ್ತೆ ಶುರುವಾಗಿದ್ದು, ಶನಿವಾರ ನಸುಕಿನ ಜಾವ ಸರಣಿ ಕಳ್ಳತನ ನಡೆಸಿದ್ದಾರೆ.
ವಿಜಯಪುರದ ಕನಕದಾಸ ಬಡಾವಣೆಯಲ್ಲಿ ಒಂದು ಮನೆ ಹಾಗೂ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ಮುಸುಕು ಧರಿಸಿ ಅಂಗಡಿಗಳಿಗೆ ನುಗ್ಗಿದ ಕಳ್ಳರು ನಗದು ಹಾಗೂ ಬೆಲೆಬಾಳುವ ಸಾಮಾಗ್ರಿ ದೋಚಿ ಪರಾರಿಯಾಗಿದ್ದಾರೆ.
ಅಂಗಡಿಯೊಂದರಲ್ಲಿ ಕಳ್ಳತನ ಮಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ತರುಣನಾಗಿದ್ದ, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರುವ ಕಳ್ಳನ ಕರಾಮತ್ತು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಜಲನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಮುಸುಕುಧಾರಿಗಳ ತಂಡವೊಂದು ದೊಣ್ಣೆ ಹಿಡಿದುಕೊಂಡು ಸಂಚರಿಸುವ ಮೂಲಕ ಭಯ ಹುಟ್ಟಿಸಿತ್ತು. ಪೊಲೀಸರು ಕೂಡ ಅಷ್ಟೇ ಚುರುಕಿನ ಕಾರ್ಯಾಚರಣೆ ನಡೆಸಿ ಮುಸುಕುಧಾರಿಗಳನ್ನು ಬಂಧಿಸಿತ್ತು. ಇದೀಗ ಮತ್ತೆ ಮುಸುಕುಧಾರಿಗಳು ಕಳ್ಳತನ ನಡೆಸಿದ್ದಾರೆ.