ತಳವಾರ ಮಹಾಸಭಾ ಹಕ್ಕೊತ್ತಾಯ, ವಿಧಾನ ಸಭೆ ಚುನಾವಣೆಗೆ ಟಿಕೆಟ್ ನೀಡದಿದ್ದರೆ ಏನಾಗಲಿದೆ ಗೊತ್ತಾ..?
ಸರಕಾರ ನ್ಯೂಸ್ ವಿಜಯಪುರ
ಪ್ರಸಕ್ತ ವಿಧಾನ ಸಭೆ ಚುನಾವಣೆಯಲ್ಲಿ ಜಿಲ್ಲೆಯ ಎಂಟು ವಿಧಾನ ಸಭೆ ಕ್ಷೇತ್ರಗಳ ಪೈಕಿ ಮೀಸಲು ಕ್ಷೇತ್ರ ಹೊರತುಪಡಿಸಿ ಯಾವುದಾದರೂ ಒಂದು ಕ್ಷೇತ್ರಕ್ಕೆ ತಳವಾರ ಸಮುದಾಯಕ್ಕೆ ಆದ್ಯತೆ ನೀಡಬೇಕೆಂದು ತಳವಾರ ಮಹಾಸಭಾ ಜಿಲ್ಲಾಧ್ಯಕ್ಷ ಪ್ರಕಾಶ ಎಸ್. ಸೊನ್ನದ ಒತ್ತಾಯಿಸಿದರು.
ಜಿಲ್ಲೆಯ ಪ್ರತಿ ವಿಧಾನ ಸಭೆ ಕ್ಷೇತ್ರದಲ್ಲಿ 25-30 ಸಾವಿರ ತಳವಾರ ಸಮುದಾಯದ ಮತಗಳಿವೆ. ಆದರೆ ಈವರೆಗೂ ಸಮುದಾಯ ನಿರ್ಲಕ್ಷ್ಯ ಕ್ಕೆ ಒಳಗಾಗುತ್ತಾ ಬಂದಿದೆ. ಹೀಗಾಗಿ ಈ ಬಾರಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಸಮುದಾಯದ ನಾಯಕರಿಗೆ ಅವಕಾಶ ಕಲ್ಪಿಸಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಶರಣಪ್ಪ ಸುಣಗಾರ, ಜಿಪಂ ಮಾಜಿ ಸದಸ್ಯೆ ಜ್ಯೋತಿ ಚಂದ್ರಕಾಂತ ಕೋಳಿ ಮತ್ತಿತರರು ಆಕಾಂಕ್ಷಿಗಳಾಗಿದ್ದಾರೆ. ಬಿಜೆಪಿಯಲ್ಲಿ ವಿವೇಕಾನಂದ ಡಬ್ಬಿ, ಅನಿಲ ಜಮಾದಾರ, ಶರಣಪ್ಪ ಕಣಮೇಶ್ವರ ಮತ್ತಿತರರು ಆಕಾಂಕ್ಷಿಗಳಾಗಿದ್ದಾರೆ. ಇದೇ ತೆರನಾಗಿ ಇನ್ನುಳಿದ ಪಕ್ಷಗಳಲ್ಲೂ ಅನೇಕರು ಆಕಾಂಕ್ಷಿಗಳಾಗಿದ್ದಾರೆ. ಹೀಗಾಗಿ ತಳವಾರ ಸಮುದಾಯಕ್ಕೆ ಯಾವ ಪಕ್ಷ ಆದ್ಯತೆ ನೀಡಲಿದೆಯೋ ಆ ಸಮುದಾಯಕ್ಕೆ ಸಮಾಜ ಬೆಂಬಲಿಸಲಿದೆ ಎಂದರು.
ಪ್ರಧಾನ ಕಾರ್ಯದರ್ಶಿ ಸಾಹೇಬಗೌಡ ಬಿರಾದಾರ ಮಾತನಾಡಿ, ತಳವಾರ ಸಮಯದಾಯದಿಂದ ಶರಣಪ್ಪ ಸುಣಗಾರಗೆ ಈ ಹಿಂದೆ ಅವಕಾಶ ಕಲ್ಪಿಸಲಾಗಿತ್ತು. ತದನಂತರ ಕಡೆಗಣಿಸಲಾಗಿದೆ. ಇದೀಗ ಅವರೂ ಸೇರಿದಂತೆ ಅನೇಕರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಅಂಬಣ್ಣ ತಳವಾರ, ಶ್ರೀಮಂತ ಝಳಕಿ, ಭರತ ಕೋಳಿ ಮತ್ತಿತರರಿದ್ದರು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)