ವಿಜಯಪುರ

ರಾಜ್ಯ ಸರ್ಕಾರಕ್ಕೆ ತಟ್ಟಲಿದೆ ನೌಕರರ ಮುಷ್ಕರದ ಬಿಸಿ, ಒಪಿಎಸ್ ಜಾರಿಗೆ ಆಗ್ರಹಿಸಿ ಬೃಹತ್ ಹೋರಾಟಕ್ಕೆ ಸಿದ್ದ…!

ಸರಕಾರ ನ್ಯೂಸ್ ವಿಜಯಪುರ

ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಮತ್ತು ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ
ಮಾ. 1 ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸುರೇಶ ಸಿ.ಶೇಡಶ್ಯಾಳ ತಿಳಿಸಿದರು.

ಈಗಾಗಲೇ ಸಂಘದ ತುರ್ತು ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ
ಈ ಬಗ್ಗೆ 8000 ಚುನಾಯಿತ ಪ್ರತಿ‌ನಿಧಿಗಳ ಸಮ್ಮುಖದಲ್ಲಿ
ನಿರ್ಣಯ ಕೈಗೊಳ್ಳಲಾಗಿದೆ. ಆ ಪ್ರಕಾರ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ರಾಜ್ಯದ 2023-24 ನೇ ಸಾಲಿನ ಆಯವ್ಯಯ ದಲ್ಲಿ ಸರ್ಕಾರಿ ನೌಕರರ ವೇತನ – ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪ ಮಾಡದಿರುವುದು ಸಹಜವಾಗಿಯೇ ನೌಕರರಲ್ಲಿ ನಿರಾಶೆ ಮೂಡಿಸಿದೆ ಎಂದರು.

ರಾಜ್ಯ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗದ ಸೌಲಭ್ಯಗಳನ್ನು 2022 ಜುಲೈ 1 ರಿಂದ ಜಾರಿಗೊಳಿಸಬೇಕಿತ್ತು. ರಾಜ್ಯ ಸರ್ಕಾರಿ ನೌಕರರ ವೇತನ- ಭತ್ಯೆಗಳ ಪರಿಷ್ಕರಣೆಗಾಗಿ ಸರ್ಕಾರ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾದ ಸುಧಾಕರರಾವ್ ಅವರ ಅಧ್ಯಕ್ಷತೆಯಲ್ಲಿ 7 ನೇ ವೇತನ ಆಯೋಗ ರಚಿಸಿದ್ದು ಆಯೋಗದ ಮುಂದೆ ಸಂಘವು ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆಗೆ ಸಂಬಂಧಿಸಿದಂತೆ ವಿಸ್ತೃತ ವರದಿ ಸಿದ್ದಪಡಿಸಿ ಸಲ್ಲಿಸಿತ್ತು. ರಾಜ್ಯ ಸರ್ಕಾರದ ಅಧಿಕಾರಿ, ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರು ಕಾಲಕಾಲಕ್ಕೆ ವೇತನ ಹಾಗೂ ಭತ್ಯೆಗಳನ್ನು ಪರಿಷ್ಕರಣೆಯೊಂದಿಗೆ ಪಡೆಯುವುದು ಅವರ ಮೂಲಭೂತ, ನ್ಯಾಯ ಸಮ್ಮತ ಹಕ್ಕಾಗಿದ್ದು, ಪ್ರಸ್ತುತ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ನೌಕರರು, ಕುಟುಂಬ ನಿರ್ವಹಣೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವುದರಿಂದ ನೌಕರರ ವೇತನ ಪರಿಷ್ಕರಣೆ ಮಾಡಿ ಆರ್ಥಿಕ ವ್ಯತ್ಯಾಸಗಳನ್ನು ಸರಿಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದ್ದಾಗ್ಯೂ ನಿರ್ಲಕ್ಷ್ಯ ವಹಿಸಿರುವುದಕ್ಕೆ ಸಭೆಯು ಒಕ್ಕೋರಲಿನಿಂದ ಸಮ್ಮತಿ ವ್ಯಕ್ತಪಡಿಸಿ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಿ ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಅನಿರ್ಧಿಷ್ಟ ಅವಧಿ ಮುಷ್ಕರಕ್ಕೆ ಕರೆ ನೀಡಲು ನಿರ್ಣಯ ಕೈಗೊಂಡಿದೆ ಎಂದರು‌.

ಪ್ರಮುಖ ಬೇಡಿಕೆಗಳು:

ರಾಜ್ಯ ಸರ್ಕಾರಿ ನೌಕರರು ಹಾಗೂ ಸರ್ಕಾರದ ಅಧೀನಕ್ಕೊಳಪಡುವ ನೌಕರರಿಗೆ 2022 ಜುಲೈ 1 ರಿಂದ ಪರಿಷ್ಕೃತ ವೇತನ, ಭತ್ಯೆಗಳಿಗೆ ಅರ್ಹವಾಗಿದ್ದು, 6 ನೇ ವೇತನ ಆಯೋಗದ ಮಾದರಿಯಂತೆ 7 ನೇ ವೇತನ ಆಯೋಗದಿಂದ ಶೀಘ್ರವಾಗಿ ಮಧ್ಯಂತರ ವರದಿಯನ್ನು ಪಡೆದು, ಚುನಾವಣೆ ನೀತಿ ಸಂಹಿತೆ ಜಾರಿಗೆ ಮೊದಲು ಶೇ. 40 ಫಿಟ್ ಮೆಂಟ್ ಸೌಲಭ್ಯವನ್ನು 2022 ಜುಲೈ 1 ರಿಂದ ಜಾರಿಗೆ ಬರುವಂತೆ ಸರ್ಕಾರಿ ಆದೇಶ ಹೊರಡಿಸಬೇಕು.

ರಾಜ್ಯದ ಎನ್ ಪಿಎಸ್ ನೌಕರರ ಜೀವನ ನಿರ್ವಹಣೆ ಹಾಗೂ ಸಂಧ್ಯಾ ಕಾಲದ ಬದುಕು ಅತ್ಯಂತ ಕಷ್ಟಕರವಾಗಿರುವುದರಿಂದ ಎನ್ ಪಿಎಸ್ ನೌಕರರನ್ನು ಒಪಿಎಸ್ ವ್ಯಾಪ್ತಿಗೆ ತರುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಈಗಾಗಲೇ ಪಂಜಾಬ್, ರಾಜಸ್ಥಾನ, ಛತ್ತೀಸ್ ಘಡ, ಜಾರ್ಖಂಡ್, ಹಿಮಾಚಲ ಪ್ರದೇಶ ಮುಂತಾದ ಕಡೆ ಹಳೆ ಪಿಂಚಣಿ ಯೋಜನೆ ಜಾರಿಗೆ ತಂದಿದ್ದು, ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಯೂ ಎನ್ ಪಿಎಸ್ ಯೋಜನೆ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ರದ್ದುಗೊಳಿಸಬೇಕೆಂಬ ಬೇಡಿಕೆ ಇದೆ ಎಂದರು.

ಜಿಲ್ಲಾ ಕಾರ್ಯ ದರ್ಶಿ ರಾಜಶೇಖರ ಹ.ಧೈವಾಡಿ ಮಾತನಾಡಿ, ನೌಕರರ ಬೇಡಿಕೆ ನ್ಯಾಯಾಮ್ಮತವಾಗಿದ್ದು ರಾಜ್ಯದ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಲಿವೆ ಎಂದರು.
ರಾಜ್ಯ ಪರಿಷತ್ ಸದಸ್ಯ ವಿಜಯಕುಮಾರ ಹತ್ತಿ, ಸಯ್ಯದಜುಬೇರ ಎಸ್. ಕೆರೂರ, ವಿಶ್ವನಾಥ ಬೆಳ್ಳೆನ್ನವರ, ಗಂಗಾಧರ ಜೇವೂರ, ಶಿವರಾಜ ಬಿರಾದಾರ ಮತ್ತಿತರರಿದ್ದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ‌. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!