ಕಾರು ಚಾಲಕನ ಹತ್ಯೆ, ಸಚಿವ ನಿರಾಣಿ ಆರೋಪಕ್ಕೆ ಯತ್ನಾಳ ಪ್ರತಿಕ್ರಿಯೆ ಏನು? ಸಿಎಂಗೆ ಬರೆದ ಪತ್ರದಲ್ಲಿ ಏನಿದೆ?
ಸರಕಾರ್ ನ್ಯೂಸ್ ವಿಜಯಪುರ
ಕಾರು ಚಾಲಕನ ಹತ್ಯೆಗೆ ಸಂಬಂಧಿಸಿದಂತೆ ಸಂಪುಟ ಸಚಿವರು ಮಾಡಿರುವ ಆರೋಪದ ಬಗ್ಗೆ ಸಿಬಿಐ ತನಿಖೆಗೆ ಒಳಪಡಿಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕೆಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಒತ್ತಾಯಿಸಿದ್ದಾರೆ.
ಭಾನುವಾರ ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿರುವ ಅವರು, ಜ. 14ರಂದು ತಮ್ಮ ಸಂಪುಟದ ಕ್ಯಾಬಿನೆಟ್ ದರ್ಜೆಯ ಸಚಿವರೊಬ್ಬರು, ವಿಜಯಪುರದ ಯಾರೋ ಒಬ್ಬ ಕಾರು ಚಾಲಕನ ಕೊಲೆ ಮಾಡಿರುವ ಬಗ್ಗೆ ಮಾಧ್ಯಮದ ಮುಂದೆ ಗಂಭೀರ ಆರೋಪದ ಹೇಳಿಕೆ ನೀಡಿದ್ದು, ಇಂಥ ಸುಳ್ಳು ಆರೋಪದಿಂದ ಸರ್ಕಾರಕ್ಕೆ ಮತ್ತು ಜನತೆಗೆ ತಪ್ಪು ಸಂದೇಶ ರವಾನೆಯಾಗುತದೆ ಎಂದು ಸಚಿವ ಮುರುಗೇಶ ನಿರಾಣಿ ಹೆಸರು ಉಲ್ಲೇಖಿಸದೇ ಸೂಚ್ಯವಾಗಿ ತಿಳಿಸಿದ್ದಾರೆ.
ಮುಂದುವರಿದು ದೇಶದ ಜನತೆಗೆ ಎಲ್ಲ ಸತ್ಯಾಸತ್ಯತೆ ಗೊತ್ತಾಗಬೇಕು. ನಮ್ಮ ರಾಜ್ಯದಲ್ಲಿ ಮತ್ತು ದೇಶದಲ್ಲಿ ನಮ್ಮದೇ ಸರ್ಕಾರವಿರುವುದರಿಂದ ಸತ್ಯಾಸತ್ಯತೆ ತಿಳಿಯಲು, ತಕ್ಷಣ 24 ಗಂಟೆಯಲ್ಲಿಯೇ ಈ ಪ್ರಕರಣದ ಕುರಿತು ತಾವು ಸಿಬಿಐ ತನಿಖೆಗೆ ಒಳಪಡಿಸಲು ಶೀಘ್ರ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದ್ದಾರೆ.
ಈ ರೀತಿ ಸುಳ್ಳು ಆರೋಪ ಮಾಡಿ ಜನತೆಗೆ ತಪ್ಪು ಸಂದೇಶ ನೀಡುವ ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸುತ್ತೇನೆ. ಇಲ್ಲವಾದಲ್ಲಿ ಸುಳ್ಳು ಆರೋಪ ಮಾಡಿದ ಸಚಿವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಒತ್ತಾಯಿಸುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)