ಲಿಂ. ಸಿದ್ಧೇಶ್ವರ ಶ್ರೀಗಳಿಗೆ ಚಿತ್ರ ನಮನ, ಜ್ಞಾನಯೋಗಾಶ್ರಮದಲ್ಲಿ ವಿನೂತನ ಶಿಬಿರ, ಕುಂಚದಲ್ಲಿ ಅರಳಿದ ನಡೆದಾಡುವ ದೇವರು
ಸರಕಾರ್ ನ್ಯೂಸ್ ವಿಜಯಪುರ
ನಡೆದಾಡುವ ದೇವರು ಪರಮಪೂಜ್ಯ ಲಿಂ.ಸಿದ್ಧೇಶ್ವರ ಶ್ರೀಗಳನ್ನು ನಾಡಿನ ಜನ ತಮ್ಮ ತಮ್ಮ ಮನೋಭಿಲಾಷೆಗೆ ಅನುಗುಣವಾಗಿ ನುಡಿನಮನ ಸಲ್ಲಿಸುತ್ತಲೇ ಇದ್ದಾರೆ. ಅದರಲ್ಲಿ ಜಿಲ್ಲೆಯ ಹಿರಿಯ ಕಲಾವಿದರ ಬಳಗವೊಂದು ಲಿಂ. ಸಿದ್ಧೇಶ್ವರ ಶ್ರೀಗಳ ಚಿತ್ರ ಬಿಡಿಸುವ ಮೂಲಕ ಚಿತ್ರನಮನ ಸಲ್ಲಿಸುತ್ತಿದ್ದಾರೆ.
ಜ್ಞಾನಯೋಗಾಶ್ರಮದಲ್ಲಿ ಭಾನುವಾರದಿಂದ ಮೂರು ದಿನ ಚಿತ್ರನಮನ ಶಿಬಿರ ನಡೆಯುತ್ತಿದ್ದು, ಪ್ರಜ್ಞಾನಂದ ಸ್ವಾಮೀಜಿ ಕ್ಯಾನ್ವಾಸ್ ಮೇಲೆ ಬಣ್ಣ ಬಳಿದು ಉದ್ಘಾಟಿಸಿದರು.
ನಿರಾಬಾರಿ, ನಿರ್ಮೋಹಿ, ಪ್ರವಚನಪಟು, ತತ್ವಜ್ಞಾನಿ, ದಾರ್ಶನಿಕ, ಶ್ರೀ ಸಿದ್ಧೇಶ್ವರ ಸ್ವಾಮಿಗಳ ಕುರಿತಾಗಿ ವಿಜ್ಞಾನ ತಂತ್ರಜ್ಞಾನ, ವೇದ ಉಪನಿಷತ್ತು, ಕವಿಗಳ ಸಾಹಿತಿಗಳ, ಶರಣರ, ವಿಜ್ಞಾನಿಗಳ ಎಲ್ಲ ಸಾರವನ್ನು ಬಲ್ಲ ಏಕಮೇವ ಸಾಧಕರು. ನಮ್ಮ ಜೀವಿತಾವಧಿಯಲ್ಲಿ ಅವರಂಥ ಯೋಗಿಯರನ್ನು ಕಾಣುವ ಒಂದು ಯೋಗ ನಮ್ಮದಾಗಿದ್ದು, ಅದು ನಮ್ಮ ನಿಮ್ಮೆಲ್ಲರ ಸೌಭಾಗ್ಯ, ಮಹಾ ಪುಣ್ಯವೇ ಸರಿ ಎಂದರು.
ಕಲಾವಿದರು ತಮ್ಮ ತಮ್ಮ ಮನದಲ್ಲಿ ಕಂಡಂತೆ ಶ್ರೀಗಳನ್ನು ಕುಂಚದಲ್ಲಿ ಅರಳಿಸುತ್ತಿದ್ದಾರೆ. ಸಾಕ್ಷಾತ್ ಸಿದ್ಧೇಶ್ವರ ಶ್ರೀಗಳು ಕಣ್ಮುಂದೆ ಇದ್ದಾರೆಂಬಂತೆ ಚಿತ್ರ ಬಿಡಿಸುತ್ತಿದ್ದಾರೆ. ಅಂದ ಹಾಗೆ ಸೋಮವಾರ ಸಂಜೆ 5ಕ್ಕೆ ಈ ಚಿತ್ರಗಳನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇರಿಸಲಾಗುತ್ತಿದ್ದು ಭಕ್ತರು ಕಣ್ತುಂಬಿಕೊಳ್ಳಬಹುದು.
ಹಿರಿಯ ಕಲಾವಿದ ಪಿ.ಎಸ್. ಕಡೇಮನಿ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಮೇಶ ಚವಾಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾಧರ ಸಾಲಿಯವರು ಚಿತ್ರ ನಮನ ಕವಿತೆಯೊಂದಿಗೆ ವಂದಿಸಿದರು. ನಿವೃತ್ತ ಪ್ರಾಧ್ಯಾಪಕ ಎಂ.ಐ. ಕುಮಟಗಿ, ನಿವೃತ್ತ ಪ್ರಾಚಾರ್ಯ ಗೌಡರ್ ಮಾತನಾಡಿದರು.