ವಿದ್ಯುತ್ ಗ್ರಾಹಕರೇ ಹುಷಾರ್, ಹೆಸ್ಕಾಂನಲ್ಲಿ ಮೋಸ, ಸಿಬ್ಬಂದಿ ವಿರುದ್ದವೇ ದಾಖಲಾಯಿತು ಎಫ್‌ಐಆರ್
ಸರಕಾರ್ ನ್ಯೂಸ್ ವಿಜಯಪುರ
ವಿದ್ಯುತ್ ಬಿಲ್ ಪಾವತಿಸಲು ಸಿಬ್ಬಂದಿಗೆ ಹಣ ಕೊಡುತ್ತಿದ್ದೀರಾ? ಹೆಸ್ಕಾಂ ಸಿಬ್ಬಂದಿ ನಿಮಗೆ ಕೊಡುವ ರಸೀದಿ ಗಮನಿಸಿದ್ದೀರಾ? ರಸೀದಿ ಅಸಲಿಯಾ….ನಕಲಿಯಾ? ಎಂದಾದರೂ ಗಮನಿಸಿದ್ದೀರಾ? ಇಲ್ಲಾ ಸಿಬ್ಬಂದಿ ಹೇಳಿದಷ್ಟು ಹಣ ಕೊಟ್ಟು ಸುಮ್ಮನಾಗಿದ್ದೀರಾ?
ಹಾಗಾದರೆ, ಬಿಲ್ ಪಾವತಿಗೂ ಮುನ್ನ ಈ ವರದಿ ನೋಡಿ…..
ಖೋಟ್ಟಿ ರಸೀದಿ ತಯಾರಿಸಿ ಗ್ರಾಹಕರಿಂದ ವಿದ್ಯುತ್ ಬಿಲ್ ಪಡೆದು ಇಲಾಖೆಗೆ ನಂಬಿಕೆ ದ್ರೋಹ ಮಾಡಿದ್ದಲ್ಲದೇ ಗ್ರಾಹಕರಿಗೆ ಮೋಸ ಮಾಡಿದ ಪ್ರಕರಣ ಬೆಳಕಿಗೆ ಬಂದಿದ್ದು, ಖುದ್ದು ಹೆಸ್ಕಾಂ ಅಧಿಕಾರಿಗಳೇ ತಮ್ಮ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ವಿಜಯಪುರದ ಹೆಸ್ಕಾಂ ನಗರ ಉಪ ವಿಭಾಗ-1ರ ಕಿರಿಯ ಸಹಾಯಕಿ ಶಿಲ್ಪಾ ಲಕ್ಷ್ಮಣ ಹೊಸೂರ ಎಂಬುವವರ ವಿರುದ್ಧ ಇಂಥದ್ದೊಂದು ದೂರು ದಾಖಲಾಗಿದ್ದು, ಒಟ್ಟು 38734 ರೂಪಾಯಿ ದುರ್ಬಳಿಕೆ ಮಾಡಿಕೊಂಡಿರುವ ಆಪಾದನೆ ವ್ಯಕ್ತವಾಗಿದೆ.
ಮೂಲ ರಸೀದಿ ಥರದ್ದೇ ನಕಲಿ ರಸೀದಿ ತಯಾರಿಸಿ ಗ್ರಾಹಕರಿಗೆ ನೀಡಿರುವ ಶಿಲ್ಪಾ ಹಳೇ ಬಿಲ್ ಬಾಕಿ ಇದೆ ಎಂದು ಹಣ ಪಡೆದಿದ್ದಾರೆ. ಹಣವನ್ನೂ ಇಲಾಖೆಗೂ ಕಟ್ಟದೇ ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಈ ಬಗ್ಗೆ ಗ್ರಾಹಕರೊಬ್ಬರು ಹಳೆ ಬಿಲ್ ಸಂದಾಯ ಮಾಡಿದರೂ ಬಾಕಿ ಇದೆ ಎಂದು ತೋರಿಸುತ್ತಿದೆ ಎಂದು ಹೆಸ್ಕಾಂಗೆ ಬಂದು ವಿಚಾರಿಸಲಾಗಿ ಅಸಲಿಯತ್ತು ಗೊತ್ತಾಗಿದೆ. ಬಳಿಕ ಬಿಲ್‌ಗಳನ್ನು ಪಾವತಿಸಲಾಗಿ ಶಿಲ್ಪಾಳ ಕೈಬರಹ ಎಂಬುದು ಗಮನಕ್ಕೆ ಬಂದಿದೆ.
ಇಂಥ ನಾಲ್ಕು ರಸೀದಿಗಳಲ್ಲಿ ಒಟ್ಟು 38734 ರೂಪಾಯಿ ಗ್ರಾಹಕರಿಂದ ಪಡೆದು ದುರ್ಬಳಕೆ ಮಾಡಿಕೊಂಡಿದ್ದಾರೆ. ಆ ಮೂಲಕ ಕಂಪನಿಗೆ ನಂಬಿಕೆ ದ್ರೋಹ ಮಾಡಿದ್ದಾರೆ. ಖೊಟ್ಟಿ ರಸೀದಿ ತಯಾರಿಸಿ ಗ್ರಾಹಕರ ಬಿಲ್‌ನಲ್ಲಿ ಇರುವಷ್ಟೇ ಮೊತ್ತ ನಕಲು ಪ್ರತಿಯಲ್ಲಿ ಖೊಟ್ಟಿ ಆರ್‌ಆರ್ ನಂಬರ್ ಮತ್ತು ಕಡಿಮೆ ಹಣ ನಮೂದಿಸಿ ಖೊಟ್ಟಿ ಬಿಲ್ ಸೃಷ್ಠಿ ಮಾಡಿ ಮೋಸ ಹಾಗೂ ನಂಬಿಕೆ ದ್ರೋಹ ಎಸಗಿದ್ದಾಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ರಾಜಶೇಖರ ರಾಚಪ್ಪ ಹಂಡಿ ಗಾಂಧಿ ಚೌಕ್ ಠಾಣೆಗೆ ದೂರು ನೀಡಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)