ಸಿದ್ಧೇಶ್ವರ ಶ್ರೀ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ, ಪೂಜ್ಯರ ಪ್ರತಿಕ್ರಿಯೆಯೇ ರೋಮಾಂಚಕ….!
ಸರಕಾರ್ ನ್ಯೂಸ್ ವಿಜಯಪುರ
ಸಹಸ್ರಮಾನದ ಸಂತ, ನಡೆದಾಡುವ ದೇವರು, ಪರಮಪೂಜ್ಯ ಸಿದ್ಧೇಶ್ವರ ಶ್ರೀಗಳ ಆರೋಗ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ವಿಚಾರಿಸಿದರಲ್ಲದೇ, ಪೂಜ್ಯರಿಗೆ ಹೆಚ್ಚಿನ ಚಿಕಿತ್ಸೆಗೆ ಅನುಕೂಲ ಮಾಡಿಕೊಡುವುದಾಗಿ ಹೇಳಿದ್ದಾರೆ. ಆದರೆ, ಮೋದಿ ಹೇಳಿಕೆಗೆ ಸಿದ್ಧೇಶ್ವರ ಶ್ರೀಗಳು ಕೈಮುಗಿದು ಮೌನವಾಗಿಯೇ ಕೃತಜ್ಞತೆ ಸೂಚಿಸಿದ್ದಾರೆ.
ಶನಿವಾರ ರಾತ್ರಿ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಇಂಥದ್ದೊಂದು ಸನ್ನಿವೇಶ ನಡೆದಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವು ರಾಜ್ಯ ನಾಯಕರು ಸಾಕ್ಷೀಕರಿಸಿದರು.
ಸಚಿವ ಪ್ರಲ್ಹಾದ ಜೋಶಿ ತಮ್ಮ ಮೊಬೈಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿದ್ಧೇಶ್ವರ ಸ್ವಾಮೀಜಿ ಅವರೊಂದಿಗೆ ಮಾತನಾಡಿಸಿದ್ದಾರೆ. ಪ್ರಧಾನಿ ಅವರು ಆರೋಗ್ಯ ವಿಚಾರಿಸಿ ಹೆಚ್ಚಿನ ಚಿಕಿತ್ಸೆಗೆ ಅನುಕೂಲ ಮಾಡಿಕೊಡುವ ಬಗ್ಗೆ ಹೇಳಿದಾಗ ಪೂಜ್ಯರು ಕೈಮುಗಿದರಷ್ಟೆ ಎಂದು ಸಿಎಂ ಬೊಮ್ಮಾಯಿ ಹಾಗೂ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಆರೋಗ್ಯ ಕಳವಳಕಾರಿ ಎಂಬ ವಿಷಯ ತಿಳಿದು ಬಂದೆ. ಪ್ರತಿ ದಿನ ಅವರ ಆರೋಗ್ಯ ವಿಚಾರಿಸುತ್ತಲೇ ಇದ್ದೆ. ಕಳೆದೆರೆಡು ದಿನಗಳ ಹಿಂದೆ ಬಹಳಷ್ಟು ಮಾತನಾಡಲು ಆಗಲಿಲ್ಲ. ಹೀಗಾಗಿ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿ ಪ್ರಲ್ಹಾದ ಜೋಶಿ ಅವರು ಬಂದಿದ್ದೇವೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿಕೊಡಲಾಗಿ ಪೂಜ್ಯ ರು ಅಚ್ಚರಿಯ ರೀತಿಯಲ್ಲಿ ಪ್ರತಿಕ್ರಿಯಿಸಿದರು. ಪ್ರಧಾನಿ ಅವರು ಆರೋಗ್ಯ ರಕ್ಷಣೆಗೆ ಏನಾದರೂ ಸಹಾಯ ಕೇಳಲಾಗಿ ಪೂಜ್ಯರು ಕೈ ಮುಗಿದು ಕೃತಜ್ಞತೆ ಸೂಚಿಸಿದರು. ಆಧುನಿಕ ಕಾಲದಲ್ಲಿ ನಿಜವಾದ ವೈರಾಗ್ಯ ಜೀವಿಯನ್ನು ನೋಡುವ ಭಾಗ್ಯ ನಮ್ಮದಾಯಿತು ಎಂದರು.
ಸಚಿವ ಪ್ರಲ್ಹಾದ ಜೋಶಿ ಮಾತನಾಡಿ, ವೈರಾಗ್ಯ ಮೂರ್ತಿ, ನಡೆದಾಡುವ ದೇವರು, ನಮಗೆ ಮಾರ್ಗದರ್ಶನ, ಪ್ರೇರಣೆ ಕೊಟ್ಟವರು ಸಿದ್ದೇಶ್ವರ ಶ್ರೀಗಳು. ನುಡಿದಂತೆ ನಡೆದ ಆದರ್ಶವಾದಿಗಳು. ಅವರ ಆರೋಗ್ಯ ಕಳವಳಕಾರಿ ಎಂಬುದು ತಿಳಿದು ಬರಬೇಕಾಯಿತು. ಇಂದು ಆಕ್ಸಿಜನ್ ಸ್ವಲ್ಪ ಕಡಿಮೆ ಆಗಿದೆ ಎಂದು ತಿಳಿದು ಧಾವಿಸಿ ಬಂದಿದ್ದೇವೆ. ಪ್ರಧಾನ ಮಂತ್ರಿಗಳು ನನ್ನ ಬಳಿ ವಿಚಾರಿಸಿ ಪೂಜ್ಯರ ಆರೋಗ್ಯದ ವಿವರ ಪಡೆದಿದ್ದರು. ಇದೀಗ ಅವರು ಮಾತನಾಡಿ ಅದ್ಭುತ ಸಂತ ಸಿದ್ದೇಶ್ವರ ಶ್ರೀಗಳು ಎಂದು ಕೊಂಡಾಡಿದರು. ಅಲ್ಲದೇ ಅವರ ಜೊತೆ ಮಾತನಾಡಿದರು. ಎರಡು ಶಬ್ದ ಮಾತನಾಡಿ ಚಿಕಿತ್ಸೆಗೆ ವ್ಯವಸ್ಥೆ ಮಾಡುವುದಾಗಿ ಪ್ರಧಾನಿ ಮೋದಿ ಅವರು ಹೇಳಲಾಗಿ ಕೈ ಮುಗಿದು ಕೃತಜ್ಞತೆ ಸಲ್ಲಿಸಿದರಷ್ಟೆ. ಅಮಿತ್ ಷಾ ಕೂಡ ಕಳವಳ ವ್ಯಕ್ತಪಡಿಸಿದೆ ಎಂದರು.
ಸಚಿವ ಗೋವಿಂದ ಕಾರಜೋಳ, ಶಾಸಕರಾದ ಅರವಿಂದ ಬೆಲ್ಲದ, ರಮೇಶ ಭೂಸನೂರ, ಕಲಬುರಗಿಯ ಮುಖಂಡ ಗುರುನಾಥ ಕೊಳ್ಳೂರ ಮತ್ತಿತರರಿದ್ದರು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)