ನಮ್ಮ ವಿಜಯಪುರ

ವಿಜಯಪುರ ಅಂತಿಮ ಮತದಾರರ ಪಟ್ಟಿ ಪ್ರಕಟ, ಎಂಟು ಕ್ಷೇತ್ರಗಳ ಮತದಾರರ ವಿವರ ಇಲ್ಲಿದೆ ನೋಡಿ….

ಸರಕಾರ್ ನ್ಯೂಸ್ ವಿಜಯಪುರ

ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು 2023ರ ಜನವರಿ 5ರಂದು ಪ್ರಕಟಿಸಲಾಗಿದ್ದು, ಜಿಲ್ಲೆಯಲ್ಲಿ 9,39,813 ಗಂಡು, 8,98,405 ಹೆಣ್ಣು ಹಾಗೂ 234 ಇತರೆ ಸೇರಿದಂತೆ ಒಟ್ಟು 18,38,452 ಮತದಾರರಿದ್ದು, ಪ್ರಕಟಿತ ಅಂತಿಮ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು ಮತದಾರರು ಪರಿಶೀಲಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲೆಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಂತಿಮ ಮತದಾರರ ಪಟ್ಟಿ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಕರಡು ಮತದಾರರ ಪಟ್ಟಿಯನ್ನು ದಿನಾಂಕ : 09-11-2022 ರಂದು ಪ್ರಕಟಿಸಿ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ : 08-12-2022ರವರೆಗೆ ಅವಕಾಶ ಕಲ್ಪಿಸಲಾಗಿತ್ತು. ಈ ಅವಧಿಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಮತದಾರ ಪಟ್ಟಿಯಿಂದ ಹೆಸರು ತೆಗೆದು ಹಾಕುವುದು, ತಿದ್ದುಪಡಿ, ವರ್ಗಾವಣೆಗೆ ಸಂಬಂಧಿಸಿದ ನಮೂನೆ-6, ನಮೂನೆ-7, ನಮೂನೆ-8 ಅರ್ಜಿಗಳನ್ನು ಸ್ವೀಕರಿಸಿ ದಿನಾಂಕ : 26-12-2022ರವರೆಗೆ ಕಾಲಾವಕಾಶ ನಿಗದಿಪಡಿಸಲಾಗಿತ್ತು. ಎಲ್ಲ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ಇತ್ಯರ್ಥಗೊಳಿಸಿ ಅಂತಿಮ ಮತದಾರರ ಪಟ್ಟಿಯಯನ್ನು ಪ್ರಕಟಿಸಲಾಗಿದ್ದು, ಈ ಅವಧಿಯಲ್ಲಿ ಹೆಚ್ಚುವರಿಯಾಗಿ 40,058 ಮತದಾರರು ಹೆಚ್ಚುವರಿಯಾಗಿ ಸೇರ್ಪಡೆಯಾಗಿರುತ್ತಾರೆ ಎಂದು ಅವರು ತಿಳಿಸಿದರು.

ವಿಧಾನ ಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಮುಖ್ಯಚುನಾವಣಾಧಿಕಾರಿಗಳು ಕರ್ನಾಟಕ ರಾಜ್ಯ ಇವರ ಅಧಿಕೃತ ಜಾಲತಾಣದಲ್ಲಿ ಲಭ್ಯವಿದ್ದು, ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಕುರಿತು ಪರಿಶೀಲಿಸಿಕೊಳ್ಳಬಹುದಾಗಿದೆ ಹಾಗೂ ಹಕ್ಕು ಮತ್ತು ಆಕ್ಷೇಪಣೆ ಅವಧಿಯಲ್ಲಿ ಸೇರ್ಪಡೆ ಹಾಗೂ ತೆಗೆದು ಹಾಕಲಾದ ವಿವರವನ್ನು ಮುಖ್ಯ ಚುನಾವಣಾಧಿಕಾರಿಗಳ ವೆಬ್‍ಸೈಟ್‍ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದರು.

18,38,452 ಮತದಾರರು:

ಜಿಲ್ಲೆಯ ವಿಧಾನಸಭಾವಾರು ಅಂತಿಮ ಮತದಾರರ ಪಟ್ಟಿಯಲ್ಲಿರುವಂತೆ 26-ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದಲ್ಲಿ 1,06,875 ಗಂಡು, 1,03,451 ಹೆಣ್ಣು ಹಾಗೂ 22 ಇತರೆ ಮತದಾರರು ಸೇರಿದಂತೆ ಒಟ್ಟು 2,10,348 ಮತದಾರರಿದ್ದಾರೆ.

ಅದರಂತೆ 27-ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಲ್ಲಿ 1,09,749 ಗಂಡು, 1,03,393 ಹೆಣ್ಣು ಹಾಗೂ 31 ಇತರೆ ಮತದಾರರು ಸೇರಿದಂತೆ 2,13,173 ಮತದಾರರಿದ್ದಾರೆ. 28-ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರದಲ್ಲಿ 1,04,484 ಗಂಡು, 1,00,186 ಹೆಣ್ಣು ಹಾಗೂ 11 ಇತರೆ ಮತದಾರರು ಸೇರಿದಂತೆ ಒಟ್ಟು 2,04,681 ಮತದಾರರಿದ್ದಾರೆ.

29-ಬಬಲೇಶ್ವರ ವಿಧಾನಸಭಾ ಮತಕ್ಷೇತ್ರದಲ್ಲಿ 1,08,463 ಗಂಡು, 1,03,961 ಹೆಣ್ಣು ಹಾಗೂ 4 ಇತರೆ ಮತದಾರರು ಸೇರಿದಂತೆ ಒಟ್ಟು 2,12,428 ಮತದಾರರಿದ್ದಾರೆ. 30-ಬಿಜಾಪುರ ನಗರ ವಿಧಾನಸಭಾ ಮತಕ್ಷೇತ್ರದಲ್ಲಿ 1,31,459 ಗಂಡು, 1,33,161 ಹೆಣ್ಣು ಹಾಗೂ 94 ಇತರೆ ಮತದಾರರು ಸೇರಿದಂತೆ ಒಟ್ಟು 2,64,714 ಮತದಾರರಿದ್ದಾರೆ.

31-ನಾಗಠಾಣ ವಿಧಾನಸಭಾ ಮತಕ್ಷೇತ್ರದಲ್ಲಿ 1,35,836 ಗಂಡು, 1,28,082 ಹೆಣ್ಣು ಹಾಗೂ 27 ಇತರೆ ಮತದಾರರು ಸೇರಿದಂತೆ 2,63,945 ಮತದಾರರಿದ್ದಾರೆ.

32-ಇಂಡಿ ವಿಧಾನಸಭಾ ಮತಕ್ಷೇತ್ರದಲ್ಲಿ 1,22,997 ಗಂಡು, 1,14,382 ಹೆಣ್ಣು ಹಾಗೂ 18 ಇತರೆ ಮತದಾರರು ಸೇರಿದಂತೆ 2,37,397 ಮತದಾರರಿದ್ದಾರೆ ಮತ್ತು

33-ಸಿಂದಗಿ ವಿಧಾನಸಭಾ ಮತಕ್ಷೇತ್ರದಲ್ಲಿ 1,19,950 ಗಂಡು, 1,11,789 ಹೆಣ್ಣು ಹಾಗೂ 27 ಇತರೆ ಮತದಾರರು ಸೇರಿದಂತೆ ಒಟ್ಟು 2,31,766 ಮತದಾರರಿದ್ದು, ಒಟ್ಟು ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರದಲ್ಲಿ 9,39,813 ಗಂಡು, 8,98,405 ಹೆಣ್ಣು ಹಾಗೂ 234 ಇತರೆ ಮತದಾರರು ಸೇರಿದಂತೆ ಒಟ್ಟು 18,38,452 ಮತದಾರರಿದ್ದಾರೆ.

2072 ಮತಗಟ್ಟೆಗಳು:

ವಿಜಯಪುರ ಜಿಲ್ಲೆಯಲ್ಲಿ ಪ್ರಸ್ತುತ 2072 ಮತಗಟ್ಟೆಗಳು ಅಸ್ತಿತ್ವದಲ್ಲಿದ್ದು, ಅದರಂತೆ ವಿಧಾನಸಭಾವಾರು ಮುದ್ದೇಬಿಹಾಳ ಮತಕ್ಷೇತ್ರದಲ್ಲಿ 241 ಮತಗಟ್ಟೆಗಳು, ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ 252 ಮತಗಟ್ಟೆಗಳು, ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಈ ಮೊದಲು 233 ಮತಗಟ್ಟೆಗಳಿದ್ದು, ಪ್ರಸ್ತುತ ಅಂತಿಮವಾಗಿ 232 ಮತಗಟ್ಟೆಗಳು ಅಸ್ತಿತ್ವದಲ್ಲಿವೆ.

ಬಬಲೇಶ್ವರ ಮತಕ್ಷೇತ್ರದಲ್ಲಿ ಈ ಮೊದಲು 253 ಮತಗಟ್ಟೆಗಳಿದ್ದು, ಪ್ರಸ್ತುತ ಅಂತಿಮವಾಗಿ 243 ಮತಗಟ್ಟೆಗಳು ಅಸ್ವಿತ್ವದಲ್ಲಿವೆ. ಬಿಜಾಪುರ ನಗರ ಮತಕ್ಷೆತ್ರದಲ್ಲಿ ಈ ಮೊದಲು 279 ಮತಗಟ್ಟೆಗಳಿದ್ದು, ಪ್ರಸ್ತುತ ಅಂತಿಮವಾಗಿ 269 ಮತಗಟ್ಟೆಗಳು ಅಸ್ವಿತ್ವದಲ್ಲಿವೆ. ನಾಗಠಾಣ ಮತಕ್ಷೇತ್ರದಲ್ಲಿ ಈ ಮೊದಲು 305 ಮತಗಟ್ಟೆಗಳಿದ್ದವು, ಪ್ರಸ್ತುತ ಅಂತಿಮವಾಗಿ 296 ಮತಗಟ್ಟೆಗಳಿವೆ. ಇಂಡಿ ಮತಕ್ಷೇತ್ರದಲ್ಲಿ ಈ ಮೊದಲು 274 ಮತಗಟ್ಟೆಗಳಿದ್ದು, ಅಂತಿಮವಾಗಿ 268 ಮತಗಟ್ಟೆಗಳು ಅಸ್ತಿತ್ವದಲ್ಲಿವೆ ಹಾಗೂ ಸಿಂದಗಿ ಮತಕ್ಷೇತ್ರದಲ್ಲಿ 271 ಮತಗಟ್ಟೆಗಳು ಸೇರಿದಂತೆ ಜಿಲ್ಲೆಯಲ್ಲಿ 2072 ಮತಗಟ್ಟೆಗಳು ಅಂತಿಮವಾಗಿ ಅಸ್ತಿತ್ವದಲ್ಲಿವೆ ಎಂದು ತಿಳಿಸಿದರು.

ನಿರಂತರ ಮತದಾರ ಪಟ್ಟಿ ಪರಿಷ್ಕರಣೆ:

ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದ ನಂತರವೂ ಸಹ ಪರಿಷ್ಕರಣೆ ಕಾರ್ಯ ಮುಂದುವರೆಯಲಿದ್ದು, ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಿಂದ ನಿರ್ದೇಶನ ಬಂದ ಕೂಡಲೇ ಹೊಸ ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ, ಮತದಾರ ಪಟ್ಟಿಯಿಂದ ಹೆಸರು ಕೈಬಿಡುವುದು ಹಾಗೂ ಇತರೆ ಸೇವೆಗಳಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಮತದಾರರಾಗಿ

ನೋಂದಣಿಗೆ ಅವಧಿ:

ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಲು ಈ ಮೊದಲು ವರ್ಷಕ್ಕೆ ಒಂದು ಬಾರಿ ಮಾತ್ರ ಅವಕಾಶವಿತ್ತು. ಆದರೆ ಪ್ರಸ್ತುತ ಚುನಾವಣಾ ಆಯೋಗ ಜನವರಿ 01, ಏಪ್ರಿಲ್ 01, ಜುಲೈ 01 ಹಾಗೂ ಅಕ್ಟೊಬರ್ 01 ಸೇರಿದಂತೆ 4 ಬಾರಿ 18 ವರ್ಷ ಪೂರೈಸಿದ ಅರ್ಹ ಮತದಾರರು ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಅವಕಾಶ ನೀಡಿದ್ದು, ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ಸ್ಥಳಾಂತರ ಇತ್ಯಾದಿಗಳಿಗಾಗಿ ಆನ್‍ಲೈನ್ ಪ್ಲಾಟ್‍ಫಾರ್ಮಗಳಾದ ವಿಎಚ್‍ಎ, ಎನ್‍ವಿಎಸ್‍ಪಿ ಹಾಗೂ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸಂಪರ್ಕಿಸಿ ಗರುಡ ತಂತ್ರಾಂಶ ಮೂಲಕವೂ ಕೂಡ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಚುನಾವಣಾ ತಹಶೀಲ್ದಾರರಾದ ಶ್ರೀಮತಿ ಶಾಂತಲಾ ಚಂದನ, ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳಾದ ಚನ್ನಬಸಪ್ಪ ನಂದರಗಿ, ಎಚ್.ಎಸ್.ದಳವಾಯಿ, ಎಂ.ಕೆ.ಬಾಗಾಯತ್, ನಿತೇಶ ತೊರವಿ, ಅನಿರುದ್ದ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!