ಬಬಲೇಶ್ವರ ನೀರಾವರಿಗೆ ಇದುವೇ ಸಾಕ್ಷಿ, ಎಂ.ಬಿ. ಪಾಟೀಲರ ಸಾಧನೆಗೆ ಕೈಗನ್ನಡಿ, ಒಂದೇ ಗ್ರಾಮದಲ್ಲಿ ಕಬ್ಬಿನ ಇಳುವರಿ ಕೇಳಿದರೆ ಶಾಕ್ ಆಗುತ್ತೀರಿ?
ವಿಜಯಪುರ: ಬಬಲೇಶ್ವರ ಕ್ಷೇತ್ರದಲ್ಲಿ ನೀರಾವರಿಯಿಂದಾದ ಅನುಕೂಲತೆ ಬಗ್ಗೆ ಇದೀಗ ಜನ ಕೊಂಡಾಡುತ್ತಿದ್ದು ಒಂದೇ ಗ್ರಾಮದಲ್ಲಿ ಕಬ್ಬಿನ ಇಳುವರಿ ಕೇಳಿ ಜನ ಹುಬ್ಬೇರಿಸುತ್ತಿದ್ದಾರೆ.
ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್‌ಎಚ್ ಗ್ರಾಮದಲ್ಲಿ ಪ್ರಸಕ್ತ ಸಾಲಿನಲ್ಲಿ 50 ಸಾವಿರ ಟನ್ ಕಬ್ಬು ಉತ್ಪಾದಿಸಲಾಗಿದ್ದು ಅಂದಾಜು 150 ಕೋಟಿ ರೂ.ಮೌಲ್ಯದ ಇಳುವರಿ ಬಂದಿದೆ. ನೂರಾರು ಕೋಟಿ ಆದಾಯ ಗಳಿಸಿದ್ದಾರೆ. ಇದಕ್ಕೆಲ್ಲ ಮಾಜಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರ ನೀರಾವರಿ ಸಾಧನೆಯೇ ಕಾರಣ ಎಂದು ಜನ ಕೊಂಡಾಡುತ್ತಿದ್ದಾರೆ.
ಅಂದಹಾಗೆ ಈ ಹೊಗಳಿಕೆ ಕೇಳಿ ಬಂದಿದ್ದು ಸೋಮವಾರ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್‌ಎಚ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವ ಹಾಗೂ ಯಾತ್ರಾ ನಿವಾಸದ ಉದ್ಘಾಟನೆ ಸಮಾರಂಭದಲ್ಲಿ.
ಸಭೆ ಆರಂಭದಲ್ಲಿಯೇ ಗ್ರಾಮಸ್ಥರು ಇಂಥದ್ದೊಂದು ವಿಷಯ ಪ್ರಸ್ತಾಪಿಸಿದರು. ಬಳಿಕ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಂ.ಬಿ. ಪಾಟೀಲ, 2013 ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ನ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ ನೀಡಿದ ಕೊಡುಗೆ ಅಪಾರ. ಅಂದಿನ ನೀರಾವರಿ ಯೋಜನೆಗಳ ಫಲವಾಗಿ ಒಂದೇ ಗ್ರಾಮದಲ್ಲಿ 150 ಕೋಟಿ ರೂ.ಮೌಲ್ಯದ ಕಬ್ಬು ಈ ಭಾಗದಲ್ಲಿ ಬೆಳೆಯಲಾಗಿದೆ. ಹಿಂದುಳಿದ ಜಿಲ್ಲೆ ಬಂಗಾರದ ನಾಡು ಆಗಲು ಸಿದ್ದರಾಮಯ್ಯ ಅವರೇ ಕಾರಣ. ತುಬಚಿ ಬಬಲೇಶ್ವರ, ನಾಗರಬೆಟ್ಟ ಮುಂತಾದ ಏತ ನೀರಾವರಿ ಯೋಜನೆ ಆಗಿದ್ದು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ. ಅಂದು ನನಗೆ ನೀರಾವರಿ ಮಂತ್ರಿ ಮಾಡುವ ಮೂಲಕ ಈ ಭಾಗದ ನೀರಾವರಿಗೆ ಶ್ರಮಿಸಿದರು. ಮುಂಬರುವ ದಿನಗಳಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮತ್ತದೇ ಜನಪ್ರಿಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಆಶಿಸಿದರು.
ಅಭಿನವ ಸಿದ್ದಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕ ಆನಂದ ನ್ಯಾಮಗೌಡ, ವಿಪ ಸದಸ್ಯರಾದ ಸುನೀಲಗೌಡ ಪಾಟೀಲ, ಆರ್.ಬಿ. ತಿಮ್ಮಾಪುರ, ಪ್ರಕಾಶ ರಾಠೋಡ, ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ಸಿ.ಎಸ್. ನಾಡಗೌಡ, ರಾಜು ಆಲಗೂರ, ವಿಠಲ ಕಟಕದೋಂಡ, ಮುಖಂಡರಾದ ಹಮೀದ್ ಮುಶ್ರೀಫ್, ಅಶೋಕ ಮನಗೂಳಿ, ಸುಭಾಷ ಛಾಯಾಗೋಳ, ಬಿ.ಎಸ್. ಪಾಟೀಲ ಯಾಳಗಿ ಮತ್ತಿತರರಿದ್ದರು. ರಮೇಶ ಬಡ್ರಿ ನಿರೂಪಿಸಿದರು.