ರಾಜ್ಯ

ಬಬಲೇಶ್ವರದಲ್ಲಿ ಸಿದ್ದರಾಮಯ್ಯ ವಾಗ್ದಾನ, ಅಧಿಕಾರಕ್ಕೆ ಬಂದರೆ ಸಂಪೂರ್ಣ ನೀರಾವರಿ, ನುಡಿದಂತೆ ನಡೆದಿದ್ದೇವೆ, ಮತ್ತೆ ನಡೆಯುತ್ತೇವೆ…!

ವಿಜಯಪುರ: ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ವರ್ಷಕ್ಕೆ 10 ಸಾವಿರ ಕೋಟಿ ರೂ.ಗಳಂತೆ ಐದು ವರ್ಷದಲ್ಲಿ 50 ಸಾವಿರ ಕೋಟಿ ರೂ.ಅನುದಾನ ನೀಡುವ ವಿಷಯದಲ್ಲಿ ನುಡಿದಂತೆ ನಡೆದಿದ್ದೇವೆ. ಇದೀಗ ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ಎಷ್ಟೇ ಅನುದಾನ ಖರ್ಚಾಗಲಿ ಪೂರ್ಣಗೊಳಿಸುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾನ ಮಾಡಿದರು.
ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್‌ಎಚ್ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವ ಹಾಗೂ ಯಾತ್ರಾ ನಿವಾಸದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಈ ಹಿಂದೆ ಅಧಿಕಾರಕ್ಕೆ ಬಂದಾಗ ರಾಜ್ಯದ ಎಲ್ಲ ನೀರಾವರಿ ಯೋಜನೆಗೆ 50 ಸಾವಿರ ಕೋಟಿ ರೂ.ಅನುದಾನದ ಅವಶ್ಯಕತೆ ಇರುವುದು ಗೊತ್ತಾಯಿತು. ಅದರಂತೆ ಪ್ರತಿ ವರ್ಷ 10 ಸಾವಿರ ಕೋಟಿ ರೂ.ಗಳಂತೆ ಐದು ವರ್ಷಕ್ಕೆ 50 ಸಾವಿರ ಕೋಟಿ ರೂ.ಅನುದಾನ ನೀಡಲಾಯಿತು. ಒಳ್ಳೆಯ ನೀರಾವರಿ ಮಂತ್ರಿ ಸಿಕ್ಕಿದ್ದರಿಂದ ನಮ್ಮ ಆಶಯ ಈಡೇರಿಸಲು ಸಾಧ್ಯವಾಯಿತು ಎಂದು ಅಂದಿನ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದರು.
ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ರಾಜ್ಯದ ನೀರಾವರಿ ಯೋಜನೆಗೆ 1.50 ಲಕ್ಷ ಕೋಟಿ ರೂ.ಅನುದಾನ ನೀಡುವುದಾಗಿ ತಿಳಿಸಿತ್ತು. ಅಷ್ಟು ಹಣ ಖರ್ಚು ಮಾಡಿದ್ದರೆ ಕೃಷ್ಣಾ ಮೇಲ್ದಂಡೆ ಯೋಜನೆ, ಮೇಕೆದಾಟು ಹೀಗೆ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸಬಹುದಿತ್ತು. ಆದರೆ ನುಡಿದಂತೆ ನಡೆಯಿತಾ? ಎಂದು ಪ್ರಶ್ನಿಸಿದರು.
ನಾವು ಹಾಗಲ್ಲ. ಕೊಟ್ಟ ಮಾತಿಗೆ ತಪ್ಪಿ ನಡೆಯುವುದಿಲ್ಲ. ಬೇಕಾದರೆ ಈ ಹಿಂದಿನ ನಮ್ಮ ಪ್ರಣಾಳಿಕೆ ತೆಗೆದು ನೋಡಿ 160 ಭರವಸೆಗಳಲ್ಲಿ ಬಹುತೇಕ ಬೇಡಿಕೆ ಈಡೇರಿಸಿದ್ದೇವೆ. ಆ ಮೂಲಕ ನುಡಿದಂತೆ ನಡೆದಿದ್ದೇವೆ. ಇದೀಗ ಮತ್ತೆ ಅಧಿಕಾರಕ್ಕೆ ಬಂದರೆ ಐದು ವರ್ಷದಲ್ಲಿ ಎಲ್ಲ ನೀರಾವರಿ ಮುಗಿಸಿ ಜನರಿಗೆ ನೀರು ಕೊಡುತ್ತೇವೆ. ಎಷ್ಟೇ ಖರ್ಚಾಗಲಿ ಅನುದಾನ ಒದಗಿಸುತ್ತೇವೆ ಎಂದರು.

error: Content is protected !!