ಬಸವ ಜಯಂತಿ-ರಂಜಾನ್ ಶುಭ ಕೋರಿದ ಸಿದ್ದರಾಮಯ್ಯ, ಬಬಲೇಶ್ವರದ ಕ್ಷೇತ್ರದಲ್ಲಿ ಬಸವ ಸಂದೇಶ ರವಾನೆ, ಸಿದ್ದು ಹೇಳಿದ ಸಾಮರಸ್ಯದ ಪಾಠದ ಸಾರಾಂಶ ಇಲ್ಲಿದೆ ನೋಡಿ…
ವಿಜಯಪುರ: ಬಸವೇಶ್ವರ ಜಯಂತಿ ಹಾಗೂ ರಂಜಾನ್ ಒಟ್ಟಿಗೆ ಬಂದಿದ್ದು ಈ ನಾಡಿನ ಜನತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಬಸವಜಯಂತಿ ಹಾಗೂ ರಂಜಾನ್ ಹಬ್ಬದ ಶುಭಾಷಗಳನ್ನು ತಿಳಿಸಿದರು.
ಜಾತ್ರೆಗಳು, ಹಬ್ಬ-ಹರಿದಿನಗಳು ಭಾರತೀಯ ಸಂಪ್ರದಾಯದ ಸಂಕೇತ. ಅನೇಕ ವರ್ಷಗಳಿಂದ ಈ ಆಚರಣೆಗಳು ನಡೆದು ಬಂದಿದೆ. ನಾವೆಲ್ಲ ಹಿಂದುಗಳು. ಹಿಂದು ಸಂಪ್ರದಾಯದಂತೆ ಅನೇಕ ಜಾತ್ರೆ, ಹಬ್ಬಗಳನ್ನು ಆಚರಿಸುತ್ತೇವೆ. ಎಲ್ಲರೂ ಸಂತೋಷದಿಂದ ಪಾಲ್ಗೊಳ್ಳುತ್ತೇವೆ. ಎಲ್ಲ ಜಾತಿ ಧರ್ಮದರು ಭಾಗವಹಿಸುತ್ತಾರೆ. ಹೀಗೆ ಸಮಾಜದಲ್ಲಿ ಸಾಮರಸ್ಯ ಇರಬೇಕು. ಈ ಸಾಮರಸ್ಯ ಕಾಪಾಡಲು ಎಲ್ಲರೂ ಜಾತಿ, ಧರ್ಮ ಬಿಟ್ಟು ಇಂಥ ಜಾತ್ರೆ, ಉರುಸು, ಕ್ರಿಸ್‌ಮಸ್ ಹಬ್ಬಗಳಲ್ಲಿ ಭಾಗವಹಿಸಬೇಕೆಂದರು.
ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್‌ಎಚ್ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಸಿದ್ಧಲಿಂಗೇಶ್ವರ ಕಮರಿಮಠದ ಜಾತ್ರಾ ಮಹೋತ್ಸವ ಹಾಗೂ ಯಾತ್ರಾ ನಿವಾಸದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಭಾರತ ವೈವಿಧ್ಯತೆಗಳಿಂದ ಕೂಡಿದ ದೇಶ. ಎಲ್ಲ, ಜಾತಿ, ಧರ್ಮದವರು ಇಲ್ಲಿದ್ದಾರೆ. ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದೇವೆ. ಆದರೆ ಕೆಲವರು ಜಾತಿ, ಧರ್ಮದ ಆಧಾರದ ಮೇಲೆ ಸಮಾಜ ವಿಭಜಿಸುತ್ತಿದ್ದಾರೆಂದರು.
ಮನುಷ್ಯ ಕಾಯಿಲೆ ಬಂದಾಗ ಇಂಥದ್ದೇ ಧರ್ಮ ಜಾತಿಯವರ ರಕ್ತ ತಂದು ಕೊಡಿ ಎಂದು ಹೇಳಲಾಗುತ್ತದಾ? ಆ ಸಮಯದಲ್ಲಿ ಯಾರದ್ದೇ ರಕ್ತ ಆದರೂ ಪಡೆದು ಬದುಕುತ್ತೇವೆ. ಬದುಕಿದ ಮೇಲೆ ಜಾತಿ ಧರ್ಮ ಹೇಳುವ ಪ್ರವೃತ್ತಿ ಬಿಡಬೇಕು. ಇಲ್ಲವಾದಲ್ಲಿ ನಾವು ಮನುಷ್ಯರಾಗಿ ಬಾಳಲಾಗಲ್ಲ. ಮನುಷ್ಯರಿಗಾಗಿ ಧರ್ಮ. ಧರ್ಮಕ್ಕಾಗಿ ಮನುಷ್ಯ ಅಲ್ಲ ಎಂದರು.
ಬಸವಣ್ಣನ ಫೋಟೋ ಪೂಜೆ ಮಾಡಿದರೆ ಸಾಲದು. ಅವರ ವಿಚಾರ ಪಾಲಿಸಬೇಕು. ನಾನು ಸಿಎಂ ಆದಾಗ ಪ್ರಮಾಣ ವಚನ ಸ್ವೀಕರಿಸಿದ್ದು ಬಸವ ಜಯಂತಿಯ ದಿನ. ಯಾಕೆಂದರೆ ನಮ್ಮ ಸಂವಿಧಾನ ಕೂಡ ಸಮಾನತೆ ಹೇಳುತ್ತದೆ. ಬಸವಾದಿ ಶರಣರು ಕೂಡ ಸಮ ಸಮಾಜದ ಕನಸು ಕಂಡಿದ್ದರು. ಹೀಗಾಗಿ ಅಂದು ಪ್ರಮಾಣ ವಚನ ಸ್ವೀಕರಿಸಿದೆ ಎಂದರು.
ಬಸವಣ್ಣನವರು ಅನುಭವ ಮಂಟಪ ಮಾಡಿ ಅಲ್ಲಮನನ್ನು ಅಧ್ಯಕ್ಷರನ್ನಾಗಿ ಮಾಡಿದರು. ಅನುಭವ ಮಂಟಪದಲ್ಲಿ ಎಲ್ಲರೂ ಸಮಾನರಾಗಿದ್ದರು. ಯಾರೂ ಮೇಲು ಕೀಳು ಇರಲಿಲ್ಲ. ಬಸವಾದಿ ಶರಣರು ಕಾಯಕ ಮತ್ತು ದಾಸೋಹ ತತ್ವ ಸಾರಿದರು. ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ವಿತರಣೆ. ಶರಣರ ಸಮಾಜದಲ್ಲಿ ಮೈಗಳ್ಳರು ಇರಬಾರದು. ಕಾಯಕ ಮಾಡಬೇಕು. ಅದರಿಂದ ಬಂದ ಉತ್ಪನ್ನ ಎಲ್ಲರೂ ಸಮಾನವಾಗಿ ಅನುಭವಿಸಬೇಕೆಂದು ಬಸವಾದಿ ಶರಣರು ಹೇಳಿದರು. ಹೀಗಾಗಿ ನಾನು ಸಿಎಂ ಆದ ಬಳಿಕ ಎಲ್ಲ ಜಾತಿ ಅವರು ಎರಡು ಹೊತ್ತು ಊಟ ಮಾಡಲು ಏಳು ಕೆಜಿ ಅಕ್ಕಿ ಉಚಿತವಾಗಿ ನೀಡಿದೆ. 1.25 ಕೋಟಿ ಕುಟುಂಬಗಳ ಸುಮಾರು 4.30 ಕೋಟಿ ಜನ ಅಂದರೆ ಎಲ್ಲ ಜಾತಿಯ ಬಡಜನರಿಗೆ ಉಚಿತವಾಗಿ ಪಡಿತರ ಹಂಚಿಕೆ ಮಾಡಿದೆ ಎಂದರು.