ವಿಜಯಪುರ

ಕೆರೆ ತುಂಬುವ ಕಾಮಗಾರಿಯ ಲೋಕಾರ್ಪಣೆ, ನೀರಾವರಿಯಿಂದ ರೈತರ ಶ್ರೀಮಂತಿಕೆ ಹಚ್ಚಲಿದೆ ಎಂದ ಸಚಿವ ಗೋವಿಂದ ಕಾರಜೋಳ, ಕಾರ್ಯಕ್ರಮದ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ…

ಸರಕಾರ್ ನ್ಯೂಸ್ ಇಂಡಿ
ಸಕಲ ಜೀವರಾಶಿಗಳಿಗೆ ಆಹಾರ ಮತ್ತು ನೀರು ಅತ್ಯವಶ್ಯಕ. ಪ್ರಪಂಚದಲ್ಲಿ ಅತ್ಯ ಅಮೂಲ್ಯವಾದ ನೀರಿನ ಸಂರಕ್ಷಣೆಯ ನಿಟ್ಟಿನಲ್ಲಿ 260 ಎಕರೆಯ ಐತಿಹಾಸಿಕ ಅಥರ್ಗಾ ಕೆರೆ ತುಂಬಿಸಿರುವುದರಿಂದ ಈ ಭಾಗದ ಶ್ರೀಮಂತಿಕೆಯ ಗತವೈಭವ ಮರಳಿ ಬರಲಿದೆ ಎಂದು ಜಲಸಂಪನ್ಮೂಲ ಸಚಿವರಾದ ಗೋವಿಂದ ಎಂ.ಕಾರಜೊಳ ಅವರು ಹೇಳಿದರು.

ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ಅಥರ್ಗಾ ಗ್ರಾಮದಲ್ಲಿ ಮುಳವಾಡ ಏತ ನೀರಾವರಿ ಹಂತ-3ರ ಅಡಿಯಲ್ಲಿ ಬರುವ ತಿಡಗುಂದಿ ಶಾಖಾ ಕಾಲುವೆಯ ಕಿ.ಮೀ.48.00 ರಿಂದ 65.58ರ ಪೈಪ್‍ಲೈನ್ ಜಾಲದಿಂದ ರಾಜನಾಳ (ಅಥರ್ಗಾ), ತಡವಲಗಾ ಹಾಗೂ ಹಂಜಗಿ ಕೆರೆ ತುಂಬುವ ಕಾಮಗಾರಿಯ ಲೋಕಾರ್ಪಣೆ ಮತ್ತು ರಾಜನಾಳ ಕೆರೆಗೆ ಬಾಗಿನ ಅರ್ಪಿಸಿ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಐತಿಹಾಸಿಕ ಕೆರೆಗಳನ್ನು ತುಂಬಿಸುವುದರಿಂದ ಅಥರ್ಗಾ ಸೇರಿದಂತೆ ಸುತ್ತಮುತ್ತಲಿನ 15 ಗ್ರಾಮಗಳಿಗೂ ಅನುಕೂಲವಾಗಲಿದೆ. ಈ ಹಿಂದೆ ಈ ಭಾಗದಲ್ಲಿ ಕುಡಿಯುವ ನೀರಿಗೂ ತತ್ವಾರವಿತ್ತು. ದುರಾಸೆಯಿಂದ ಮನುಷ್ಯ ಜಲಮೂಲಗಳು ಕಲುಷಿತಗೊಳಿಸಿ, ಅರಣ್ಯ ಸಂಪತ್ತು ನಾಶವಾಗುತ್ತಿದೆ. ಈ ಜಲಮೂಲಗಳ ರಕ್ಷಣೆಯಾಗದಿದ್ದಲ್ಲಿ ಮಾನವರೊಂದಿಗೆ ಸಕಲ ಜೀವರಾಶಿಗಳಿಗೂ ಆಪತ್ತು ಬರಲಿದೆ. ಈ ನಿಟ್ಟಿನಲ್ಲಿ ಸರ್ಕಾರವು ಸಹ ಹಲವು ಯೋಜನೆಗಳನ್ನು ಜಾರಿಗೊಳಿಸಿ ಜಲಮೂಲಗಳ ರಕ್ಷಣೆ-ಅಭಿವೃದ್ದಿಪಡಿಸುವಲ್ಲಿ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ನೀರಿನಲ್ಲಿ ಅತ್ಯಂತ ಶ್ರೀಮಂತ ರಾಜ್ಯವಾಗಿದೆ. 66ಲಕ್ಷ ಹೆಕ್ಟೇರ್ ಭೂಮಿಗೆ ನೀರು ಒದಗಿಸುವ ಜಲಮೂಲಗಳು ರಾಜ್ಯದಲ್ಲಿವೆ. ಬೃಹತ್ ನೀರಾವರಿ ನೀರಾವರಿ ಇಲಾಖೆಯಿಂದ 40 ಲಕ್ಷ ಹೆಕ್ಟೇರ್ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 7 ಲಕ್ಷ ಹೆಕ್ಟೇರ್ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ರೈತರು ಸಹ ಸ್ವ ಮೂಲದಿಂದ ಬೊರವೆಲ್, ಬಾವಿ, ಕೆರೆ-ಹಳ್ಳಗಳ ಮೂಲಕ 16 ಲಕ್ಷ ಹೆಕ್ಟೇರ್ ನೀರಾವರಿಗೊಳಪಡಿಸುವ ಮೂಲಕ ನೀರಿನ ಸದ್ಭಳಕೆ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಸಂಸ್ಕೃತಿ, ಸಂಸ್ಕಾರವಂತರಾಗಿ ಬದುಕಬೇಕು. ಉತ್ತಮ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಜನಮಾನಸದಲ್ಲಿ ಉಳಿಯುಂವತಾಗಬೇಕು. ಈ ನಿಟ್ಟಿನಲ್ಲಿ ಉತ್ತರ ಕರ್ನಾಟಕದ 5700 ಕೋಟಿ ರೂ. ಗಳ ನೀರಾವರಿ ಯೋಜನೆಗಳಿಗೆ ಈಗಾಗಲೇ ಮಂಜೂರಾತಿ ನೀಡಲಾಗಿದೆ ಎಂದು ಹೇಳಿದರು.

ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ-3ರಡಿ ಭೂಮಿ ಕಳೆದುಕೊಳ್ಳುವ ಮೂಲಕ ದೇಶದ ಅತ್ಯಂತ ಮಹತ್ವದ ಯೋಜನೆಗೆ ತ್ಯಾಗ ಮಾಡುವ ರೈತರು ಮತ್ತು ನಾಗರೀಕರಿಗೆ ನ್ಯಾಯಬದ್ಧ ಪರಿಹಾರ ಒದಗಿಸಲು ಜಮೀನುಗಳಿಗೆ ಏಕರೂಪದ ಬೆಲೆ ನಿಗದಿಪಡಿಸಿ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ 14 ಗ್ರಾಮಗಳು ಕೊಲ್ಹಾರ ತಾಲ್ಲೂಕಿನ 6 ಗ್ರಾಮಗಳು, ನಿಡಗುಂದಿ ತಾಲ್ಲೂಕಿನ 9 ಗ್ರಾಮಗಳ ಮುಳಗಡೆ ಹೊಂದಲಿರುವ ಜಮೀನುಗಳಿಗೆ ಒಣ ಬೇಸಾಯ ಭೂಮಿಗೆ 20 ಲಕ್ಷ ರೂಪಾಯಿ ಹಾಗೂ ನೀರಾವರಿ/ಬಾಗಾಯತ್ ಭೂಮಿಗೆ 24 ಲಕ್ಷ ರೂಪಾಯಿ ಮತ್ತು ಕಟ್ಟಡಗಳಿಗೆ ಸವಕಳಿರಹಿತವಾಗಿ ಪ್ರತಿಶತ 20% ರಷ್ಟು ಹೆಚ್ಚುವರಿ ಮೊತ್ತವನ್ನು ಸೇರಿಸಿ, ಪರಿಹಾರವನ್ನು ಒದಗಿಸಲು ಕ್ರಮ ವಹಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ವಿಮಾನ ನಿಲ್ದಾಣ ಸ್ಥಾಪನೆಯಿಂದಾಗಿ ಮುಂಬರುವ ದಿನಗಳಲ್ಲಿ ವಿಜಯಪುರ ಜಿಲ್ಲೆ ಅತ್ಯಂತ ಶ್ರೀಮಂತ ಜಿಲ್ಲೆಯಾಗಲಿದೆ ಎಂದು ಹೇಳಿದರು.

ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಮಾತನಾಡಿ,. ಅಭಿವೃದ್ದಿ ಕಾರ್ಯದಲ್ಲಿ ಪಕ್ಷಾತೀತವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುವುದು ನಮ್ಮ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಈ ಭಾಗದ ಅಭಿವೃದ್ದಿ ಕಾರ್ಯಗಳಿಗೆ ಸ್ಪಂದಿಸಿ ಹಲವು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಕೃಷ್ಣೆಯ ನೀರು ಭೀಮೆಯನ್ನು ಸಮೀಪಿಸುತ್ತಿದೆ. ಈ ಭಾಗದ ಜನರ ಬೇಡಿಕೆ-ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಗಮನ ಸೆಳೆದಿದ್ದೇನೆ. ತಿಡಗುಂದಿ 50-60 ಕಿ.ಮೀ. ಕೆನಾಲ್ ಶೀಘ್ರದಲ್ಲಿ ಲೋಕಾರ್ಪನೆಗೊಳ್ಳಲಿದೆ. ಹೋರ್ತಿ ರೇವಣಸಿದ್ದೇಶ್ವರ ಯೋಜನೆಯಿಂದ ಇಂಡಿ ಹಾಗೂ ಚಡಚಣ ಭಾಗದ ರೈತರಿಗೆ ಅತ್ಯಂತ ಸಹಕಾರಿಯಾಗಲಿದೆ. ಈ ಯೋಜನೆ ಕಾರ್ಯಗತಗೊಂಡಲ್ಲಿ ಈ ಭಾಗ ಸಮೃದ್ದಿಯಾಗಲಿದೆ. ಈ ಭಾಗದ 16 ಗ್ರಾಮಗಳಿಗೆ ನೀರೊದಗಿಸುವ 200 ಕೋಟಿ ರೂ. ವೆಚ್ಚದ 19 ಕೆರೆಗಳ ತುಂಬುವ ಯೋಜನೆಗೆ ಸರ್ಕಾರ ಮಂಜೂರಾತಿ ನೀಡಿದೆ ಎಂದು ಹೇಳಿದರು.

ಭೀಮಾಶಂಕರ ಸಕ್ಕರೆ ಕಾರ್ಖಾನೆ, ಲಿಂಬೆ ಅಭಿವೃದ್ದಿ ಮಂಡಳಿ ಸ್ಥಾಪನೆ, ಕೃಷಿ ವಿಜ್ಞಾನ ಕೇಂದ್ರ ತಾಲೂಕಿನಲ್ಲಿ ಆರಂಭಿಸುವ ಮೂಲಕ ತಾಲೂಕಿನ ಅಭಿವೃದ್ದಿ ಪರ್ವ ಪ್ರಾರಂಭಿಸಲಾಗಿದೆ ಎಂದು ಹೇಳಿದರು.

ಸಂಸದ ರಮೇಶ ಜಿಗಜಿಣಗಿ ಅವರು ಮಾತನಾಡಿ, ಈ ಭಾಗದ ನಾಲ್ಕು ಕೆರೆಗಳನ್ನು ಒಂದು ನೂರು ಕೋಟಿ ವೆಚ್ಚ ನೀರು ತುಂಬಿಸುವ ಯೋಜನೆ ಕೇವಲ 9 ತಿಂಗಳಲ್ಲಿ ಪೂರ್ಣಗೊಳಿಸಲಾಗಿದೆ. ಅದರಂತೆ ಈ ಭಾಗದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು, ಕೇಂದ್ರದಿಂದ ಸಾಕಷ್ಟು ಅನುದಾನ ಒದಗಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ನಾನು ಸಂಸದನಾದ ಮೇಲೆ ಕೇಂದ್ರ ಸರ್ಕಾರ ಜಿಲ್ಲೆಯಲ್ಲಿ 17 ಬಾಂದಾರ್ ಕಂ ಬ್ರಿಜ್ ಕಾಮಗಾರಿಗಳಿಗೆ ಮಂಜೂರಾತಿ ನೀಡಿದೆ. ತಾಂಬಾ ಗ್ರಾಮದಲ್ಲಿ 7.55 ಕೊಟಿ ರೂ. ವೆಚ್ಚದಲ್ಲಿ ಬಾಂದಾರ್ ಬ್ರಿಜ್, ಗೊರನಾಳ ಗ್ರಾಮಕ್ಕೆ 2ಕೋಟಿಗೂ ಹೆಚ್ಚಿನ ವೆಚ್ಚದ, ಹಾವಿನಾಳ ಗ್ರಾಮಕ್ಕೆ 8.55 ಕೋಟಿ ರೂ.ವೆಚ್ಚದ ಬ್ರಿಜ್ ಕಂ ಬ್ಯಾರೇಜ್, ಚಡಚಣ, ಇಂಡಿ ತಾಲೂಕಿಗೆ 6 ಬ್ಯಾರೇಜ್ ಮತ್ತು ಬ್ರಿಜ್‍ಗಳ ನಿರ್ಮಾಣಕ್ಕೆ ಮಂಜೂರಾತಿ ನೀಡಿದೆ ಎಂದು ಹೇಳಿದರು.

ಸಚಿವರನ್ನು, ಸಂಸದರನ್ನು ಶಾಸಕರನ್ನು ಪೂರ್ಣ ಕುಂಭದೊಂದಿಗೆ ಎತ್ತಿನ ಗಾಡಿ, ವಾದ್ಯ ಡೊಳ್ಳುಗಳಿಂದ ಗ್ರಾಮಸ್ಥರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ, ಅಥರ್ಗಾ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಸುವರ್ಣಾ ಕುಲಪ್ಪ ಶಿವೂರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ಇಂಡಿ ತಹಶೀಲ್ದಾರ ನಾಗಯ್ಯ ಹಿರೇಮಠ, ಇಂಡಿ ತಾಲೂಕ ಕಾರ್ಯನಿರ್ವಹಣಾಧಿಕಾರಿ ಸುನೀಲ ಮದ್ದೀನ, ಮುಖಂಡರು, ಅಥರ್ಗಾ ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

error: Content is protected !!