ಎಸ್‌ಸಿ ನಕಲಿ ಜಾತಿ ಪ್ರಮಾಣ ಪತ್ರ, ದಾಖಲಾಯಿತು ಮತ್ತೊಂದು ಎಫ್‌ಐಆರ್, ಬ್ಯಾಂಕ್ ನಿರ್ದೇಶನಕನಾಗಿದ್ದವನ ಅಸಲಿಯತ್ತು ಬಯಲು
ಸರಕಾರ್ ನ್ಯೂಸ್ ವಿಜಯಪುರ
ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸರ್ಕಾರದ ಸೌಲಭ್ಯ ಪಡೆಯಲು ಮುಂದಾಗಿದ್ದ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಓರ್ವನ ಮೇಲೆ ಎಫ್‌ಐಆರ್ ದಾಖಲಾಗಿದೆ.
ವಿಜಯಪುರದ ಖಾಜಾ ಅಮೀನ್ ದರ್ಗಾ ಬಳಿಯ ನಿವಾಸಿ ಸಾಬಣ್ಣ ಸಿದ್ದಣ್ಣ ಭೋವಿ ಎಂಬುವರ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಮೂಲತಃ ಹಿಂದು ಬೋಯಿ ಜಾತಿ(ಪ್ರವರ್ಗ-1)ಗೆ ಸೇರಿರುವ ಇವರು ಪರಿಶಿಷ್ಟ ಜಾತಿಯ ಹಿಂದು ಭೋವಿ (ವಡ್ಡರ) ಎಂದು ಸುಳ್ಳು ಜಾತಿ ನೋಂದಾಯಿಸಿ ಸರ್ಕಾರದ ಸವಲತ್ತು ಪಡೆದುಕೊಂಡು ಪರಿಶಿಷ್ಟ ಜಾತಿ ಜನರಿಗೆ ಸಿಗುವ ಸೌಲಭ್ಯಗಳನ್ನು ತನಗೆ ಹಾಗೂ ತನ್ನ ಮಕ್ಕಳಿಗೆ ಸಿಗಲಿ ಎನ್ನುವ ದುರುದ್ದೇಶದಿಂದ ತಾನು ಪರಿಶಿಷ್ಟ ಜಾತಿಯ ಹಿಂದೂ ಭೋವಿ ಜಾತಿಗೆ ಸೇರಿರುತ್ತೇನೆಂದು ಸುಳ್ಳು ಕಾಗದ ಪತ್ರ ಸೃಷ್ಠಿಸಿದ್ದಾರೆ. ಅಲ್ಲದೇ ಸುಳ್ಳು ಘೋಷಣೆಗಳನ್ನು ಮಾಡಿ ತಹಸೀಲ್ದಾರ್ ಕಚೇರಿಯಿಂದ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ.
ಚುನಾವಣೆಗೂ ಸ್ಪರ್ಧೆ:
ಪರಿಶಿಷ್ಟ ಜಾತಿ ಖೋಟಾದಡಿ ಶ್ರೀ ಶಿದ್ದೇಶ್ವರ ಬ್ಯಾಂಕ್ ಚುನಾವಣೆಯಲ್ಲಿ 3 ಬಾರಿ ಸ್ಪರ್ಧಿಸಿ ನಿರ್ದೇಶಕರಾಗಿ ಆಯ್ಕೆಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಆ ಮೂಲಕ ಸರ್ಕಾರಕ್ಕೆ ಮೋಸ ಮಾಡಿದ್ದಾರೆ. ಹೀಗಾಗಿ ಇವರ ಮೇಲೆ ಹಾಗೂ ಇವರಿಗೆ ಜಾತಿ ಪ್ರಮಾಣ ಪತ್ರ ನೀಡಿದ ಅಂದಿನ ತಹಸೀಲ್ದಾರ್ ಹಾಗೂ ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳ ಮೇಲೆ ಗೋಳಗುಮ್ಮಟ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)