ನಮ್ಮ ವಿಜಯಪುರ

ಆನ್‌ಲೈನ್‌ ವಂಚಕಿ ಸೆರೆ ಸಿಕ್ಕಿದ್ದು ಹೇಗೆ? ಎಂಟು ಖಾಕಿಧಾರಿಗಳ 5 ದಿನದ ಕಾರ್ಯಾಚರಣೆ ಹೇಗಿತ್ತು ಗೊತ್ತಾ? ನಿಮ್ಮ ಸರಕಾರ್‌ ನ್ಯೂಸ್‌ ಬಿಚ್ಚಿಡುತ್ತಿರುವ ಹಂತ ಹಂತವಾದ ಮಾಹಿತಿ ಇಲ್ಲಿದೆ ನೋಡಿ…..

ಸರಕಾರ್‌ ನ್ಯೂಸ್‌ ವಿಜಯಪುರ

ಫೇಸ್‌ಬುಕ್‌ ನಲ್ಲಿ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿ ಅಮಾಯಕನೋರ್ವನನ್ನು ವಂಚಿಸಿ ಅಂದಾಜು 40 ಲಕ್ಷ ರೂಪಾಯಿ ಪೀಕಿದ್ದ ಮಹಿಳೆಯ ಬಂಧನದ ಕಾರ್ಯಾಚಾರಣೆ ಮೈ ನವಿರೇಳುಸುತ್ತದೆ !

ಎಸ್‌…!!!!! ರಾಜ್ಯಾದ್ಯಂತ ಸದ್ದು ಮಾಡಿದ್ದ ಸಿಂದಗಿ ತಾಲೂಕಿನ ಬಗಲೂರು ಗ್ರಾಮದ  ನಿವಾಸಿ ಪರಮೇಶ್ವರ ನಾನಾಗೌಡ ಹಿಪ್ಪರಗಿಯ ಪ್ರಕರಣವನ್ನು ಕೇವಲ 5 ದಿನದಲ್ಲಿ ಭೇದಿಸಿರುವ ಪೊಲೀಸರು ವಂಚಕಿ ಮಂಜುಳಾನ್ನು ಬಂಧಿಸಿ ಹಣ ಮುಟ್ಟುಗೋಲು ಹಾಕಿದ ರೀತಿ ಎಂಥವರನ್ನೂ ನಿಬ್ಬೆರಗಾಗಿಸುತ್ತದೆ.

ಅಂದಹಾಗೆ, ಪೊಲೀಸರ ಕಾರ್ಯಾಚರಣೆ ಹೇಗಿತ್ತು? ವಂಚಕಿಯ ಮೂಲ ಹಿಡಿದುಕೊಂಡು ಹಾಸನಕ್ಕೆ ತೆರಳಿದ ತನಿಖಾ ತಂಡಕ್ಕೆ ಯಶಸ್ಸು ಸಿಕ್ಕಿದ್ದು ಹೇಗೆ? ತನಿಖಾಧಿಕಾರಿಗಳ ಕೈಗೆ ವಂಚಕಿ ಸಿಕ್ಕಿಬಿದ್ದಿದ್ದು ಹೇಗೆ? ಎಂಬ ಇಂಚಿಂಚು ವಿವರ ಇಲ್ಲಿದೆ ನೋಡಿ……

ಹಂತ-1 ಪ್ರಕರಣ ದಾಖಲು

2022 ಜೂ. 29ರಂದು ಬೆಳಗ್ಗೆ 9.10ಕ್ಕೆ ಸಿಂದಗಿಯಲ್ಲಿದ್ದ ಪರಮೇಶ್ವರಗೆ ಮಂಜುಳಾ ಕೆ.ಆರ್. ಎಂಬ ಫೇಸ್‌ಬುಕ್ ಐಡಿಯಿಂದ ಫ್ರೆಂಡ್ ರಿಕ್ವೆಸ್ಟ್ ಬರುತ್ತದೆ. ಅದನ್ನು ಕನ್‌ಫರ್ಮ್ ಮಾಡಲಾಗಿ ಮೆಸೆಂಜರ್‌ನಲ್ಲಿ ‘ಹೈ’ ಎಂಬ ಸಂದೇಶ ಬರುತ್ತದೆ. ಅಲ್ಲಿಂದ ಪರಮೇಶ್ವರ ಹಾಗೂ ಮಂಜುಳಾ ಪ್ರತಿ ದಿನ ಮೆಸೇಜ್ ಮಾಡುತ್ತಾ ಬಂದಿದ್ದಾರೆ.  ಕೆಲ ದಿನಗಳ ಬಳಿಕ ಪರಮೇಶ್ವರಗೆ ಫೋನ್ ಮಾಡಿದ ಮಂಜುಳಾ ತಾನು ಐಎಎಸ್ ಪರೀಕ್ಷೆ ಪಾಸ್ ಮಾಡಿದ್ದು, ಡಿಸಿ ಪೋಸ್ಟ್ ಸಿಗುತ್ತದೆ. ಸದ್ಯ ಹಾಸನದಲ್ಲಿದ್ದು ನನಗೆ ನೋಡಿಕೊಳ್ಳುವವರು ಯಾರೂ ಇಲ್ಲ. ಅದಕ್ಕೆ ಬೆಂಗಳೂರಿಗೆ ಹೋಗಬೇಕು. ಅಲ್ಲಿ ಖರ್ಚಿಗೆ ಹಣ ಇಲ್ಲ. ಹಣಕಾಸಿನ ಸಹಾಯ ಮಾಡಿದರೆ ಮದುವೆಯಾಗುತ್ತೇನೆಂದು ಹೇಳಿದ್ದಾಳೆ. ಅದನ್ನೇ ನಂಬಿದ ಪರಮೇಶ್ವರ ಹಂತ ಹಂತವಾಗಿ 40,86,800 ರೂಪಾಯಿಗಳನ್ನು ಮಂಜುಳಾ ಖಾತೆಗೆ ರವಾನಿಸಿದ್ದಾನೆ. ಅಲ್ಲದೇ, ಫೋನ್ ಪೇ ಹಣ ಸೇರಿ ಒಟ್ಟು 41,26,800 ರೂ. ಮಂಜುಳಾಗೆ ನೀಡಿದ್ದಾನೆ. ಆ ಬಳಿಕ ಮಂಜುಳಾ ಹತ್ತಿರವೇ ತನ್ನ ಖರ್ಚಿಗೆ ಹಣವಿಲ್ಲವೆಂದು ಮರಳಿ 2,21,930 ರೂ. ವಾಪಸ್ ಪಡೆದಿದ್ದಾನೆ. ಮಂಜುಳಾ ಮತ್ತೆ ಮತ್ತೆ ಹಣಕ್ಕೆ ಬೇಡಿಕೆ ಇರಿಸುತ್ತಿದ್ದರಿಂದ ಪರಮೇಶ್ವರಗೆ ಸಂಶಯ ಬಂದು ತಾನು ಮೋಸಹೋಗುತ್ತಿರುವುದಾಗಿ ತಿಳಿದು ಇದೀಗ ಅಂದರೆ ನ.15ರಂದು ಆಕೆಯ ಮೇಲೆ ವಿಜಯಪುರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.

ಹಂತ -2 ತನಿಖಾ ತಂಡ ನಿಯೋಜನೆ

ಪರಮೇಶ್ವರನ ಅಪರೂಪದ ಪ್ರಕರಣವನ್ನು ದಾಖಲಿಸಿಕೊಂಡ ವಿಜಯಪುರ ಸಿಇಎನ್‌ ಠಾಣೆ ಪೊಲೀಸರು ಚುರುಕಿನ ಕಾರ್ಯಾಚರಣೆಗೆ ಇಳಿದಿದ್ದಾರೆ. ಎಸ್‌ಪಿ ಎಚ್‌.ಡಿ. ಆನಂದಕುಮಾರ ಅವರು ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ಸುಮಾರು 8 ಜನರ ತಂಡ ರಚಿಸಿದ್ದಾರೆ. ಚಾಲಾಕಿ ಅಧಿಕಾರಿ ಸಿಪಿಐ ರಮೇಶ ಅವಜಿ ಟೆಕ್ನಿಕಲ್‌ ಎವಿಡೆನ್ಸ್ ಗಳಾದ ಮೊಬೈಲ್‌ ಸಿಡಿಆರ್‌ ಲೋಕೇಶನ್‌ ಹಾಗೂ ಮೊಬೈಲ್‌ ಸಿಎಂ ಸಬ್‌ಕ್ರೈಬರ್‌ ಹಾಗೂ ಬ್ಯಾಂಕ್‌ ಕೆವೈಸಿ ಮಾಹಿತಿ ಕಲೆ ಹಾಕಿ ಮಂಜುಳಾ ಪತ್ತೆಗೆ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣ ತಾಲೂಕಿನ ದಾಸರಳ್ಳಿಗೆ ಲಗ್ಗೆ ಇರಿಸಿದ್ದಾರೆ. ಅಲ್ಲಿ ಮಂಜುಳಾ ತನ್ನ ಗಂಡನೊಂದಿಗೆ ವಾಸವಾಗಿದ್ದು ಆಕೆಗೆ ಖೆಡ್ಡಾ ತೋಡಿದ ಪರಿ ನಿಜಕ್ಕೂ ನಿಬ್ಬೆರಗಾಗಿಸುವಂಥದ್ದು.

ಹಂತ-3 ದಾಸರಳ್ಳಿಗೆ ದೌಡು

ಮೂಲತಃ ಹಾಸನ ಜಿಲ್ಲೆಯ ಚನ್ನರಾಯ ಪಟ್ಟಣದ ದಾಸರಹಳ್ಳಿ ಗ್ರಾಮದ ಮಹಿಳೆ ಮಂಜುಳಾ ಕೆ.ಆರ್.  ಗೃಹಿಣಿಯಾಗಿದ್ದು ಈಕೆಗೆ ಇಬ್ಬರು ಮಕ್ಕಳಿದ್ದಾರೆ ಎಂಬುದು ತನಿಖೆ ತಂಡಕ್ಕೆ ಗೊತ್ತಾಗಿದೆ. ಪತಿ ಸ್ವಾಮಿ ಉದ್ಯೋಗ ಮಾಡಿಕೊಂಡಿದ್ದಾರೆ. ಉದ್ಯೋಗ ಇಂದರೆ ಬೇರೇನಲ್ಲ…..ಇಂಥದ್ದೇ ಸಾಲ, ಬಡ್ಡಿ, ವಂಚನೆಯ ದಂಧೆ ಎನ್ನಲಡ್ಡಿಯಿಲ್ಲ. ಮಂಜುಳಾ ಹೇಳಿಕೊಳ್ಳಲು ಅಂತ ರೂಪವತಿಯೇನಲ್ಲ. ಆಗಲೇ ಇಬ್ಬರು ಮಕ್ಕಳಿದ್ದಾರೆ ಎಂದರೆ ಹೇಗಿರಬಹುದು ಎಂದು ನೀವೇ ಊಹಿಸಿ. ಇರಲಿ ಈ ಮಂಜುಳಾ ಎರಡು ಫೇಸ್‌ಬುಕ್‌ ಐಡಿ ಕ್ರಿಯೇಟ್‌ ಮಾಡಿ ಒಂದಕ್ಕೆ ತನ್ನ ಹೆಸರು ಇರಿಸಿದ್ದು ಇನ್ನೊಂದಕ್ಕೆ ದಿವ್ಯಾ ಎಂದು ಹೆಸರಿಟ್ಟಿದ್ದಾಳೆ. ಈ ದಿವ್ಯಾ ಎಂಬ ನಕಲಿ ಫೇಸ್‌ಬುಕ್‌ ಖಾತೆಗೆ ಸುಂದರಿಯೊಬ್ಬಳ ಫೋಟೊ ಇಟ್ಟುಸಿಂದಗಿ ತಾಲೂಕಿನ ಬಗಲೂರ ಗ್ರಾಮದ ಯುವಕ ಪರಮೇಶ್ವರನಿಗೆ ಫ್ರೆಂಡ್‌ ಫ್ರೆಂಡ್‌ ರಿಕ್ವೆಸ್ಟ್‌ ಕಳುಹಿಸಿದ್ದಾಳೆ. ಪಾಪ ಪರಮೇಶ್ವರ ದಿವ್ಯಾ ಎಂಬ ಅಸಾಧಾರಣ ಸುಂದರಿಯ ಫೋಟೊ ನೋಡಿ ಯಾಮಾರಿದ್ದಾನೆ ಎಂಬುದು ದಾಸರಳ್ಳಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಪೊಲೀಸ್‌ ತನಿಖಾ ತಂಡಕ್ಕೆ ಡಿಟೇಲ್ಸ್‌ ಸಿಕ್ಕಿದೆ.

ಹಂತ-4 ಖೆಡ್ಡಾ ತೋಡಿದ ಖಾಕಿ ಪಡೆ

ವಂಚನೆಯನ್ನೇ ವೃತ್ತಿಯನ್ನಾಗಿಸಿಕೊಂಡಿರುವ ಮಂಜುಳಾ ಕೆ.ಆರ್.‌ ಅಲಿಯಾಸ್‌ ದಿವ್ಯಾ ಈಗಾಗಲೇ ಹಲವು ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಅದರಲ್ಲಿ ಅತ್ಯಾಚಾರದ ಆರೋಪದ ಪ್ರಕರಣಗಳೂ ದಾಖಲಾಗಿವೆ. ಸ್ವಂತ ಜಮೀನು ತೋರಿಸಿ ಮಾರಾಟಕ್ಕಿದೆ ಎಂದು ಸಾಕಷ್ಟು ಜನರಿಂದ ಹಣ ಪೀಕಿರುವ ಪ್ರಕರಣ ಕೂಡ ಇದ್ದು ಸ್ಥಳೀಯರಿಗೆ ಈಕೆಯ ವರ್ತನೆ ತಲೆನೋವಾಗಿ ಪರಿಣಮಿಸಿದೆ. ಈಕೆಯ ಎಲ್ಲ ಕೃತ್ಯಗಳಿಗೆ ಗಂಡ ಸ್ವಾಮಿಯ ಸಾಥ್‌ ಕೂಡ ಇರುವುದು ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಎಲ್ಲ ಮಾಹಿತಿ ಆಧರಿಸಿ ಆವತ್ತು ಇದ್ದಕ್ಕಿದ್ದಂತೆ ಪೊಲೀಸರು ಮಂಜುಳಾ ಬಂಧನಕ್ಕೆ ಜಾಲ ಬೀಸಿದೆ.

ಹಂತ-5 ನಾನವಳ್ಳಲ್ಲ ನಾನವಳಲ್ಲ….

ನ.18ನೇ ತಾರೀಖು ಮಂಜುಳಾ ಮಾಡಿದ ವಂಚನೆ ಪ್ರಕರಣದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತದೆ. ರಾಜ್ಯಾದ್ಯಂತ ಈ ವರದಿ ಸಂಚಲನ ಮೂಡಿಸುತ್ತದೆ. ಮೊದಲೇ ಈಕೆಯಿಂದ ಬೇಸತ್ತಿದ್ದ ದಾಸರಳ್ಳಿಯ ಹುಡುಗರು ಆ ವರದಿಯ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿಸುತ್ತಾರೆ. ಇದರಿಂದ ಆಕ್ರೋಶಗೊಂಡ ಮಂಜುಳಾ ಪತಿ ಸ್ವಾಮಿ  ಆ ಹುಡುಗರ ಮೇಲೆ ರೇಗುತ್ತಾನೆ. ಆಗ ಆ ಹುಡುಗರು ಸ್ವಾಮಿಗೆ ಹಿಗ್ಗಾ ಮುಗ್ಗಾ ಥಳಿಸುತ್ತಾರೆ. ಗಾಯಗೊಂಡ ಸ್ವಾಮಿ ಆಸ್ಪತ್ರೆಗೆ ದಾಖಲಾಗುತ್ತಾನೆ. ಆವತ್ತು ಮಂಜುಳಾ ಪತಿಯನ್ನು ಮಾತನಾಡಿಸಲು ಇನ್ನೇನು ಆಸ್ಪತ್ರೆಗೆ ಹೋಗಲು ಸಿದ್ದಳಾಗುತ್ತಿದ್ದಂತೆ ಎದುರಿಗೆ ಸಿಪಿಐ ರಮೇಶ ಅವಜಿ ನೇತೃತ್ವದ ತನಿಖಾ ತಂಡ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ಬಿಡುತ್ತದೆ. ಖಾಕಿಧಾರಿಗಳನ್ನು ಕಂಡ ಮಂಜುಳಾ ಬೆಚ್ಚಿ ಬೀಳುವುದು ಮಾತ್ರವಲ್ಲ….ನಾನವಳಲ್ಲ….ನಾನವಳಲ್ಲ ಎಂದು ಅಬ್ಬರಿಸುತ್ತಾಳೆ. ಹಾಗಾದರೆ ಆಕೆ ಯಾರು? ಅದೇ ಆ ಪರಮೇಶ್ವರನನ್ನು ವಂಚಿಸಿದ ವಂಚಕಿ? ಎಂಬ ಪ್ರಶ್ನೆಗೆ ಪೊಲೀಸರಿಗೆ ವಿಚಾರಣೆ ವೇಳೆ ಅಸಲಿಯತ್ತು ಗೊತ್ತಾಗುತ್ತದೆ. ದಿವ್ಯಾ ಎಂಬ ಹೆಸರಿನಿಂದ ಮಂಜುಳಾ ಮಾಡಿದ ಕಿತಾಪತಿ ತಿಳಿದು ಅವಜಿ ಅರೆಸ್ಟ್‌ ಮಾಡಿಕೊಂಡು ಸೀದಾ ವಿಜಯಪುರಕ್ಕೆ ಬರುತ್ತಾರೆ.

ಹಂತ-6 ವಿಚಾರಣೆ ವೇಳೆ ಗೊತ್ತಾಗಿದ್ದೇನು?

ಪರಮೇಶ್ವರನಿಗೆ ವಂಚಿಸಿದ ಹಣದಲ್ಲಿಯೇ ಮಂಜುಳಾ 100 ಗ್ರಾಂ ಚಿನ್ನಾಭರಣ, ಒಂದು ಸೆಕೆಂಡ್‌ ಹ್ಯಾಂಡ್‌ ಹುಂಡೈ ಕಂಪನಿಯ ಸ್ಯಾಂಟ್ರೋ ಕಾರ್‌ ಹಾಗೂ ಬಜಾಜ್‌ ಸಿಟಿ ಹಂಡ್ರೆಡ್‌ ಮೋಟರ್‌ ಸೈಕಲ್‌ ಖರೀದಿಸಿದ್ದಾರೆ. ಅಲ್ಲದೇ ದಾಸರಹಳ್ಳಿಯಲ್ಲಿ ಐಶಾರಾಮಿ ಮನೆ ನಿರ್ಮಿಸಿದ್ದಲ್ಲದೇ ತನ್ನ ಪತಿಯ ಜೊತೆಗೆ ಕೂಡಿ ಸ್ವಾಮಿ ಫೈನಾನ್ಸ್‌ ಹೆಸರಿನ ಫೈನಾನ್ಸ್‌ ಕಂಪನಿ ತೆರೆದು ಸಾರ್ವಜನಿಕರಿಗೆ ಸಾಲ ನೀಡಿದ್ದಾರೆ. ಇನ್ನುಳಿದ ಹಣ ಬಂಗಾರದ ಒಡವೆಗೆ ಮಾಡಿಸಿಕೊಳ್ಳಲು ಖರ್ಚು ಮಾಡಿದ್ದಾರೆ. ವಿಚಾರಣೆ ವೇಳೆ ಮಂಜುಳಾ ಈ ಎಲ್ಲ ವಿವರಗಳನ್ನು ಬಾಯಿಬಿಟ್ಟಿದ್ದಾಳೆ. ಆಕೆಯ ಫೆಡರಲ್‌ ಬ್ಯಾಂಕ್‌ ಖಾತೆಯನ್ನು ಮುಟ್ಟುಗೋಲು ಹಾಕಿದ್ದು, ಅದರಲ್ಲಿ 6 ಲಕ್ಷ ಹಣ ವಶಕ್ಕೆ ಪಡೆದಿದ್ದು ಈ ವಿಷಯ ತಿಳಿಯುತ್ತಲೇ ಪಾಪ ಪರಮೇಶ್ವರ ಸಿಪಿಐ ರಮೇಶ ಅವಜಿ ಹಾಗೂ ಇಡೀ ಪೊಲೀಸ್‌ ಇಲಾಖೆಗೆ ಸಾಷ್ಟಾಂಗ ನಮಸ್ಕಾರ ಹಾಕಿದ್ದಾನೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್‌ ನ್ಯೂಸ್‌ ಸಬ್‌ ಸ್ಕ್ರೈಬ್‌ ಮಾಡಿ. ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!