ಕಾಲಿಗೆ ಹೇಸಿಗೆ ಹತ್ತಿದೆ ಎಂದು ಯಾಮಾರಿಸಿ ಹಣ ಲೂಟಿ, ಮೂರು ಲಕ್ಷ ರೂಪಾಯಿ ಪಂಗನಾಮ
ಸರಕಾರ್ ನ್ಯೂಸ್ ಮುದ್ದೇಬಿಹಾಳ
ಕಾಲಿಗೆ ಹೇಸಿಗೆ ಹತ್ತಿದೆ ಎಂದು ಯಾಮಾರಿಸಿ ಎಕ್ಟಿವಾ ಮೋಟರ್ ಸೈಕಲ್‌ನ ಡಿಕ್ಕಿಯಲ್ಲಿರಿಸಿದ್ದ 3 ಲಕ್ಷ ರೂಪಾಯಿ ಎಗರಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮುದ್ದೇಬಿಹಾಳದ ಗಣೇಶ ನಗರದ ಮುಖ್ಯರಸ್ತೆಯಲ್ಲಿರುವ ನಿವಾಸಿ ರವೀಂದ್ರ ಕರವೀರಪ್ಪ ಪಟ್ಟಣಶೆಟ್ಟಿ ಎಂಬುವವರು ಹಣ ಕಳೆದುಕೊಂಡಿದ್ದು, ನ. 30ರಂದು ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನ. 8ರಂದೇ ಈ ಪ್ರಕರಣ ನಡೆದಿದ್ದು, ಹಣ ಹುಡುಕಾಡಿ ಬೇಸತ್ತು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಏನಿದು ಪ್ರಕರಣ?
ನ. 8ರಂದು ಬೆಳಗ್ಗೆ 11.45ರ ಸುಮಾರಿಗೆ ರವೀಂದ್ರ ಹಿರೋ ಹೊಂಡಾ ಕಂಪನಿಯ ಬಿಳಿ ಬಣ್ಣದ ಎಕ್ಟಿವಾ ಮೋಟರ್ ಸೈಕಲ್ ತೆಗೆದುಕೊಂಡು ಎಸ್‌ಬಿಐ ಬ್ಯಾಂಕ್‌ನಲ್ಲಿರುವ ತಮ್ಮ ಖಾತೆಯಿಂದ ಹಣ ಡ್ರಾ ಮಾಡಿಕೊಂಡು ಸಿದ್ಧಸಿರಿ ಬ್ಯಾಂಕ್‌ನಲ್ಲಿರುವ ಮಗಳ ಹೆಸರಿನಲ್ಲಿ ಎಫ್ ಮಾಡಲೆಂದು ತೀರ್ಮಾನಿಸಿ ಮನೆಯಿಂದ ಹೊರಬಿದ್ದಿದ್ದಾರೆ. ಬಳಿಕ ಎಸ್‌ಬಿಐ ಬ್ಯಾಂಕ್‌ನಿಂದ 3 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ಅದನ್ನು ಮೋಟರ್ ಸೈಕಲ್ ಡಿಕ್ಕಿಯಲ್ಲಿರಿಸಿ ಮನೆಗೆ ತೆಗೆದುಕೊಂಡು ಬಂದಿದ್ದಾರೆ. ಮನೆ ಮುಂದೆ ಮೋಟರ್ ಸೈಕಲ್ ನಿಲ್ಲಿಸುತ್ತಿದ್ದಂತೆ ಯಾರೋ ಒಬ್ಬ ವ್ಯಕ್ತಿ ತಮ್ಮ ಕಾಲಿಗೆ ಹೇಸಿಗೆ ಹತ್ತಿದೆ ಎಂದು ಹೇಳಿದ್ದಾರೆ. ಅದನ್ನು ತೊಳೆದುಕೊಂಡು ಬರಲೇಂದು ರವೀಂದ್ರ ಗಾಡಿಯ ಕೀ ಅಲ್ಲಿಯೇ ಬಿಟ್ಟು ಮನೆಯೊಳಗೆ ಹೋಗಿದ್ದಾರೆ. ಮರಳಿ ಬರುವಷ್ಟರಲ್ಲಿ ಮೋಟರ್ ಸೈಕಲ್ ಡಿಕ್ಕಿ ತೆರೆದಿರುವುದು ಕಂಡು ಬಂದಿದೆ. ಹಣ ನೋಡಲಾಗಿ ಕಳುವಾಗಿದೆ. ಕೂಡಲೇ ಸ್ನೇಹಿತರನ್ನು ವಿಚಾರಿಸಿದ್ದಾರೆ. ಮಾತ್ರವಲ್ಲ ಎಲ್ಲರೂ ಸೇರಿ ಮುದ್ದೇಬಿಹಾಳದ ವಿವಿಧೆಡೆ ತಡಕಾಡಿದ್ದಾರೆ. ಕೊನೆಗೆ ಹಣ ಸಿಗದೇ ಪೊಲೀಸರ ಮೊರೆ ಹೋಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಮುದ್ದೇಬಿಹಾಳ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)