ಬಸವಭೂಮಿಯ ಭವಿಷ್ಯದ ನಾಯಕ ಯಾರು? ಸಿಎಂ ಮುಂದೆ ಶಾಸಕ ಯತ್ನಾಳ ಬಣ್ಣಿಸಿದ್ದು ಏಕೆ?
ಸರಕಾರ್ ನ್ಯೂಸ್ ವಿಜಯಪುರ
ರಾಜ್ಯ ವಿಧಾನ ಸಭೆ ಚುನಾವಣೆಗೆ ಮುನ್ನವೇ ಬಸವನಬಾಗೇವಾಡಿಯಲ್ಲಿ ರಾಜಕೀಯ ಚಟುವಟಿಕೆ ಚುರುಕುಗೊಂಡಿದ್ದು, ಬಿಜೆಪಿ ಟಿಕೆಟ್‌ಗಾಗಿ ಇನ್ನಿಲ್ಲದ ಕಸರತ್ತು ಆರಂಭಗೊಂಡಿದೆ.
ಕಳೆದೆರೆಡು ದಿನಗಳ ಹಿಂದಷ್ಟೇ ಬಸವನಬಾಗೇವಾಡಿಯ ತಾಳಿಕೋಟೆ ರಸ್ತೆಯಲ್ಲಿರುವ ಸಭಾಭವನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ ಸಮ್ಮುಖದಲ್ಲಿಯೇ ನಾಯಕರಿಬ್ಬರ ಹಿಂಬಾಲಕರು ಗಲಾಟೆ ನಡೆಸಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ಹಾಗೂ ಅಪ್ಪುಗೌಡ ಪಾಟೀಲ ಮನಗೂಳಿ ಬೆಂಬಲಿಗರು ಪರಸ್ಪರ ಮಾತಿನ ಚಕಮಕಿ ನಡೆಸಿದ್ದರಲ್ಲದೇ ನಳೀನಕುಮಾರ ಕಟೀಲ ಖಡಕ್ ಸಂದೇಶ ರವಾನಿಸುವ ಮೂಲಕ ಆಕ್ರೋಶ ತಣ್ಣಗಾಗಿಸಿದ್ದರು.
ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲಿಯೇ ಅಪ್ಪುಗೌಡ ಪಾಟೀಲ ಮನಗೂಳಿ ಅವರನ್ನು ಬಸವನಬಾಗೇವಾಡಿಯ ಭವಿಷ್ಯ ಎಂದು ಬಣ್ಣಿಸಿದ್ದು ಉರಿಯುವ ಬೆಂಕಿಗೆ ಮತ್ತಷ್ಟು ತುಪ್ಪ ಸವರಿದಂತಾಗಿದೆ.
ಹೌದು, ಶುಕ್ರವಾರ ವಿಜಯಪುರದ ಹೈಪರ್ ಮಾರ್ಟ್ ಪಕ್ಕದಲ್ಲಿ ನಡೆದ ವಿಜಯಪುರ ನಗರ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಭೂಮಿ ಪೂಜೆ ಕಾರ್ಯಕ್ರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಪ್ಪುಗೌಡರನ್ನು ಬಸವನಬಾಗೇವಾಡಿಯ ಭವಿಷ್ಯ ಎಂದು ಬಣ್ಣಿಸುತ್ತಿದ್ದಂತೆ ನೆರೆದ ಜನಸ್ತೋಮ ಕೇಕೆ ಸಿಳ್ಳೆ ಹಾಕಿ ಸಂಭ್ರಮಿಸಿದ್ದು ರಾಜ್ಯ ನಾಯಕರ ಗಮನ ಸೆಳೆಯಿತು. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಮತ್ತಿತರ ಸಚಿವರುಗಳ ಮುಂದೆ ಹಾಗೆ ಸಂಬೋಧಿಸಿದ್ದು ಚರ್ಚೆಗೆ ಗ್ರಾಸವಾಯಿತು.
ಆಲಮಟ್ಟಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಇದ್ದ ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ ವಿಜಯಪುರ ಕಾರ್ಯಕ್ರಮದಿಂದ ದೂರವುಳಿದಿದ್ದರು.