ವಿಜಯಪುರ

ತಳವಾರ ಸಮಾಜಕ್ಕೆ ಅನ್ಯಾಯ, ಇಂಡಿ ಗ್ರೇಡ್ -2 ತಹಸೀಲ್ದಾರ್ ವಜಾಕ್ಕೆ ಆಗ್ರಹ

ಸರಕಾರ್ ನ್ಯೂಸ್ ವಿಜಯಪುರ

ಅರ್ಜಿ ಸ್ವೀಕರಿಸಲ್ಲ, ಸ್ಥಾನಿಕ ಚೌಕಾಸಿ ಮಾಡಲ್ಲ, ಕಚೇರಿಯಲ್ಲಿಯೇ ಕುಳಿತು ಜಾತಿ ನಿರ್ಣಯ ಮಾಡುವುದಲ್ಲದೇ ಅರ್ಹರಿದ್ದರೂ ಅರ್ಜಿ ತಿರಸ್ಕೃತಿಸುತ್ತಿರುವ ಇಂಡಿ ಗ್ರೇಡ್-2 ತಹಸೀಲ್ದಾರ್ ವಜಾಕ್ಕೆ ಆಗ್ರಹಿಸಿ ಅಖಿಲ ಕರ್ನಾಟಕ ನಾಯಕ ತಳವಾರ ಜನಾಂಗದ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರ ತಳವಾರ ಮತ್ತು ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿ ಅಧಿಸೂಚನೆ ಹೊರಡಿಸಿದೆ. ರಾಜ್ಯ ಸರ್ಕಾರ ಅರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಲು ಈಗಾಗಲೇ ಹಲವು ಬಾರಿ ಸುತ್ತೋಲೆ ಸಹ ಹೊರಡಿಸಿದೆ. ಆದರೆ, ಇಂಡಿಯ ಗ್ರೇಡ್-2 ತಹಸೀಲ್ದಾರ್ ಆರ್.ಎಸ್. ರೇವಡಿಗಾರ ಅರ್ಹರಿದ್ದರೂ ಜಾತಿ ಪ್ರಮಾಣ ತಿರಸ್ಕೃರಿಸುವ ಮೂಲಕ ಸಮಾಜಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಇಂಡಿ ತಾಲೂಕಿನ ಗ್ರಾಮ ಒನ್ ಕೇಂದ್ರ, ನಾಡಕಚೇರಿ, ಅಟಲ್‌ಜಿ ಜನಸ್ನೇಹಿ ಕೇಂದ್ರಗಳಲ್ಲಿ ತಳವಾರ ಸಮುದಾಯದ ಎಸ್‌ಟಿ ಜಾತಿ ಪ್ರಮಾಣ ಪತ್ರದ ಅರ್ಜಿಯನ್ನೇ ಸ್ವೀಕರಿಸದಂತೆ ಮೌಖಿಕ ಸಂದೇಶ ನೀಡಿರುವ ಗ್ರೇಡ್-2 ತಹಸೀಲ್ದಾರ್, ಹಾಗೊಂದು ವೇಳೆ ಅರ್ಜಿ ಸ್ವೀಕರಿಸಿದರೂ ಸ್ಥಾನಿಕ ಚೌಕಾಸಿ ಮಾಡದೇ ಕಚೇರಿಯಲ್ಲಿಯೇ ಕುಳಿತು ಅರ್ಜಿದಾರರು ಎಸ್‌ಟಿ ಸಮುದಾಯಕ್ಕೆ ಅರ್ಹರಲ್ಲ ಎಂದು ಹಿಂಬರಹ ಹಾಕುತ್ತಿದ್ದಾರೆ. ನ್ಯಾಯಾಲಯದ ಆದೇಶವನ್ನೂ ಧಿಕ್ಕರಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ತಾಲೂಕಿನಲ್ಲಿ 25 ಸಾವಿರಕ್ಕೂ ಅಧಿಕ ತಳವಾರ ಸಮಾಜದವರಿದ್ದಾರೆ. ಈವರೆಗೆ ಬೆರಳೆಣಿಕೆಯಷ್ಟು ಮಾತ್ರ ಅರ್ಜಿ ಸ್ವೀಕರಿಸಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರ ಸಾಕಷ್ಟು ಸುತ್ತೋಲೆ ಹೊರಡಿಸಿದ್ದರೂ ಇನ್ನೂ ಹಳೇ ಸುತ್ತೋಲೆಯನ್ನೇ ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದಾರೆ. ಕಾರಣ ಕೇಳಿದರೆ ಜಿಲ್ಲಾಧಿಕಾರಿಗೆ ಕೇಳಿ ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಇನ್ನು ಬೇರೆ ತಾಲೂಕು ಮತ್ತು ಜಿಲ್ಲೆಗಳಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಎಸ್‌ಟಿ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ, ಇಂಡಿಯಲ್ಲಿ ಮಾತ್ರ ಗ್ರೇಡ್-2 ತಹಸೀಲ್ದಾರ್ ಅರ್ಜಿಯನ್ನೇ ಸ್ವೀಕರಿಸದೇ ಅನ್ಯಾಯ ಮಾಡುತ್ತಿದ್ದಾರೆ. ಅಲ್ಲದೇ, ಖಾಸಗಿ ಕೇಂದ್ರಗಳಲ್ಲಿ ಹೆಚ್ಚುವರಿ ಹಣ ನೀಡಿ ಅರ್ಜಿ ಸಲ್ಲಿಸುವ ಅನಿವಾರ್ಯತೆ ಸೃಷ್ಠಿಸಿದ್ದು ಅಂಥ ಅರ್ಜಿಗಳನ್ನು ಸಹ ಹಳೇಯ ಸುತ್ತೋಲೆ ಹಾಕಿ ತಿರಸ್ಕರಿಸುವ ಮೂಲಕ ಸಮುದಾಯದ ಮೇಲೆ ವೈಯಕ್ತಿ ದ್ವೇಷ ಸಾಧಿಸುತ್ತಿದ್ದಾರೆ. ಹೀಗಾಗಿ ಕೂಡಲೇ ಇವರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.

ಮುಖಂಡರಾದ ಶಂಕರಲಿಂಗ ಬಿ.ಜ, ಐ.ಬಿ.ತಳವಾರ, ಎಸ್.ಎಸ್. ತಳವಾರ, ಎಸ್.ಎ. ತಳವಾರ, ಎಸ್.ಎಸ್. ನಾಟಿಕಾರ, ಆರ್.ಎಸ್. ಹತ್ತಳ್ಳಿ, ಸುರೇಶ ಡೊಂಗ್ರೋಜಿ, ಡಾ.ಸುರೇಶ ವಿಜಯಪುರ, ಈರಣ್ಣ ಹಡಲಸಂಗ, ರೇವಣ್ಣ ಹತ್ತಳ್ಳಿ, ಸಂತೋಶ ಸೊನಕನಳ್ಳಿ, ಐ.ಬಿ. ತಳವಾರ, ಎಸ್.ಬಿ. ಕೋಳಿ ಮತ್ತಿತರರಿದ್ದರು.

error: Content is protected !!