ಉತಾರೆ ಕೊಡಲು ಲಂಚಕ್ಕೆ ಬೇಡಿಕೆ; ಪಿಡಿಒ ಸಂಗಮೇಶ ಲೋಕಾಯುಕ್ತ ಬಲೆಗೆ
ಸರಕಾರ ನ್ಯೂಸ್ ಬ.ಬಾಗೇವಾಡಿ
ಉತಾರೆ ಕೊಡಲು ಲಂಚಕ್ಕೆ ಬೇಡಿಕೆ ಇರಿಸಿದ್ದ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮ ಪಂಚಾಯಿತಿ ಪಿಡಿಒ ಸಂಗಮೇಶ ಕುಂಬಾರ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಹುಣಶ್ಯಾಳ ಪಿಬಿ ಗ್ರಾಮದ ಕ್ರಸನಂ 232 ಕ್ಷೇತ್ರ 2 ಗುಂಟೆ ಖುಲ್ಲಾ ಜಾಗೆಯನ್ನು ಖರೀದಿ ಪತ್ರದಂತೆ ಮೃತರಾದ ಚಂದ್ರಶೇಖರ ಮಾಳಪ್ಪ ಢವಳಗಿ ಹೆಸರು ತೆಗೆದು ತಮ್ಮ ಹೆಸರಿಗೆ ಉತಾರೆ ಮಾಡಿಕೊಡಲು ಮಹಾದೇವಿ ಮತ್ತು ವಿಜಯಲಕ್ಷ್ಮಿ ಎಂಬುವವರು ಅರ್ಜಿ ಸಲ್ಲಿಸಿದ್ದರು.
ಆದರೆ, ಪಿಡಿಒ ಉತಾರೆ ನೀಡಲು 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇರಿಸಿ ಅಂತಿಮವಾಗಿ 15 ಸಾವಿರ ರೂಪಾಯಿ ನೀಡಲು ಒತ್ತಾಯಿಸಿದ್ದನು. ಇದರಿಂದ ಬೇಸತ್ತ ಮಹಾದೇವಿ ಮತ್ತು ವಿಜಯಲಕ್ಷ್ಮಿ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಮಂಗಳವಾರ ಗ್ರಾಮ ಪಂಚಾಯಿತಿಯಲ್ಲಿಯೇ ಲಂಚ ಸ್ವೀಕರಿಸುತ್ತಿರಬೇಕಾದರೆ ಲೋಕಾಯುಕ್ತರು ಪಿಡಿಒನನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ. ಮಲ್ಲೇಶ ಮಾರ್ಗದರ್ಶನ, ಉಪಾಧೀಕ್ಷಕ ಸುರೇಶ ರೆಡ್ಡಿ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಆನಂದ ವಿ.ಟಕ್ಕನ್ನವರ, ಆನಂದ ಡೋಣಿ, ಸಿಬ್ಬಂದಿ ಸಂತೋಷ ಅಮರಖೇಡ, ಮಹೇಶ ಪೂಜಾರಿ, ಎ.ಕೆ. ಮುಲ್ಲಾ, ಗುರು ಹಡಪದ, ಶಂಕರ ಕಟೆ, ಈರಣ್ಣ ಕನ್ನೂರ, ಆನಂದ ಪಡಶೆಟ್ಟಿ, ಅಕ್ಬರ್ ಗೋಲಗೇರಿ, ಮದನಸಿಂಗ್ ರಜಪೂತ, ಮಾಳಪ್ಪ ಸಲಗೊಂಡ, ಸಂತೋಷ ಚವಾಣ್, ವಸೀಮ್ ಅಕ್ಕಲಕೋಟ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)