ಹಿರೇಮಸಳಿ ಶರಣಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ
ಇಂಡಿ: ತಾಲೂಕಿನ ಹಿರೇಮಸಳಿ ಗ್ರಾಮದ ಶ್ರೀ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ನೂತನ ರಥೋತ್ಸವ ಮೇ 21 ರಂದು ಅದ್ದೂರಿಯಾಗಿ ನೆರವೇರಲಿದೆ.
ಅಂದು ಬ್ರಾಹ್ಮಿ ಮುಹೂರ್ತದಲ್ಲಿ ಶ್ರೀ ಶರಣಬಸವೇಶ್ವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ ಮತ್ತು ಸಹಸ್ರ ಬಿಲ್ವಾರ್ಚನೆ ನೆರವೇರಲಿದೆ. ಬೆಳಗ್ಗೆ 7ಕ್ಕೆ ನೂತನ ರಥಕ್ಕೆ ಹೋಮ ಹವನ ಹಾಗೂ ಧಾರ್ಮಿ ವಿಧಿ ವಿಧಾನಗಳು ನೆರವೇರಲಿವೆ. ಮಧ್ಯಾಹ್ನ 2ಕ್ಕೆ ಶ್ರೀ ಮಲ್ಲಿಕಾರ್ಜುನ ಹಾಗೂ ರೇವಣಸಿದ್ಧೇಶ್ವರ ದೇವರ ಪಲ್ಲಕ್ಕಿ ಉತ್ಸವ ಹಾಗೂ ನಂದಿಕೋಲು ಮೆರವಣಿಗೆ ನಡೆಯಲಿದೆ. ಸಹಸ್ರ ಸುಮಂಗಲಿಯರ ಕುಂಭಮೇಳ ಜರುಗಲಿದೆ. ಸಂಜೆ 5.30ಕ್ಕೆ ಬಂಥನಾಳದ ಪೂಜ್ಯ ವೃಷಬಲಿಂಗ ಶಿವಯೋಗಿಗಳ ಅಮೃತ ಹಸ್ತದಿಂದ ರಥೋತ್ಸವ ಜರುಗಲಿದೆ.
ಮೇ 22 ರಂದು ಭಾನುವಾರ ಸಂಜೆ 4ಕ್ಕೆ ಜಂಗಿ ನಿಕಾಲಿ ಕುಸ್ತಿಗಳು ನೆರವೇರಲಿವೆ. ರಾತ್ರಿ 8ಕ್ಕೆ ಚಿತ್ರ ವಿಚಿತ್ರ ಮದ್ದು ಸುಡುವ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ 10ಕ್ಕೆ ಅಲ್ಲಾವುದ್ದೀನ್ ತಡವಲಗಾ ಇವರ ಭವ್ಯ ರಂಗಸಜ್ಜಿಕೆಯಲ್ಲಿ ‘ಬಡವ ಬದುಕಲೇ ಬೇಕು ಅರ್ಥಾತ್ ತಂಗಿ ಹೇಳಿದ ಮಾತು’ ಎಂಬ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 25 ರಂದು ಸಂಜೆ 6ಕ್ಕೆ ಕಳಸ ಇಳಿಸುವ ಕಾರ್ಯಕ್ರಮದೊಂದಿಗೆ ಜಾತ್ರೆಗೆ ತೆರೆಬೀಳಲಿದೆ ಎಂದು ದೇಸ್ಥಾನದ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.