ವಿಜಯಪುರ

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಗ್ರಾಮೀಣ ಪ್ರತಿಭೆ, ಬರದ ನಾಡಿನ ಹಿರಿಮೆ ಹೆಚ್ಚಿಸಿದ ಅಮಿತ, ಜುಮನಾಳದ ಹುಡುಗ ರಾಜ್ಯಕ್ಕೆ ಟಾಪರ್

ವಿಜಯಪುರ: ಬರದ ನಾಡಿನ ಪ್ರತಿಭೆಯೊಂದು ಎಸ್‌ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟದಲ್ಲಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ.
ಜುಮನಾಳ ಗ್ರಾಮದ ಅಮಿತ್ ಮಾದರ ರಾಜ್ಯಕ್ಕೆ ಪ್ರಥಮ (625/625) ಸ್ಥಾನ ಪಡೆದ ವಿದ್ಯಾರ್ಥಿ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಅಮಿತ್ ತಾಯಿಯ ಕೂಲಿ ಹಣದ ಆಸರೆಯೊಂದಿಗೆ ಶಿಕ್ಷಣ ಪೂರೈಸುತ್ತಿದ್ದಾನೆ. ಅಣ್ಣ ಬುಕ್‌ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದು ಅಕ್ಕ ಪದವಿ ಓದುತ್ತಿದ್ದಾಳೆ.
ಪ್ರೌಢ ಶಾಲೆಗೆ ಸೇರಿದ ಮೊದಲ ದಿನದಿಂದಲೇ ಎಸ್‌ಎಸ್‌ಎಲ್‌ಸಿಯಲ್ಲಿ ರಾಜ್ಯಕ್ಕೆ ಟಾಪರ್ ಆಗಬೇಕೆಂಬ ಕನಸು ಕಂಡಿದ್ದ ಈತ ಆ ನಿಟ್ಟಿನಲ್ಲಿ ಸತತ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದನು. ಎಸ್‌ಎಸ್‌ಎಲ್‌ಸಿಗೆ ಬರುತ್ತಿದ್ದಂತೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಬೇಕೆಂಬ ಗುರಿ ಇಟ್ಟುಕೊಂಡಿದ್ದ ಅಮಿತ್ ಇದೀಗ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದಾನೆ.
ಪ್ರತಿ ದಿನ 6-8 ಗಂಟೆ ಅಭ್ಯಾಸ ಮಾಡುತ್ತಿದ್ದ ಅಮಿತ್ ಬೇರೆ ಯಾವುದೇ ವಿಷಯದ ಕಡೆ ಹೆಚ್ಚು ಗಮನ ಹರಿಸದೇ ಗುರುಗಳ ಮಾರ್ಗದರ್ಶನದಲ್ಲಿ ವ್ಯಾಸಂಗ ಮಾಡಿದ ಫಲವಾಗಿ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ.
ತೀರ ಬಡ ಕುಟುಂಬದ ಅಮಿತ್ ಅಮ್ಮ ಮಹಾದೇವಿ ಕೂಲಿ ಮಾಡಿಕೊಂಡಿದ್ದರೆ, ಅಣ್ಣ ಬುಕ್ ಸ್ಟಾಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ತಂದೆ ತೀರಿಕೊಂಡು ಇದೀಗ 15 ವರ್ಷ ಆಯಿತು. ಅಕ್ಕ ಪದವಿ ಮಾಡುತ್ತಿದ್ದಾರೆ. ಮುಂದೆ ಎಂಬಿಬಿಎಸ್ ಮಾಡಿ ಐಎಎಸ್ ಮಾಡುವ ಕನಸಿದೆ ಎಂದು ಅಮಿತ ಮಾಧ್ಯಮಗಳ ಎದುರು ಸಂತಸ ಹಂಚಿಕೊಂಡಿದ್ದಾನೆ.

ತಾಳಿಕೋಟೆ ವಿದ್ಯಾರ್ಥಿನಿ:
ತಾಳಿಕೋಟೆ ತಾಲೂಕಿನ ಸಾಸನೂರ ಗ್ರಾಮದ ವಿದ್ಯಾರ್ಥಿನಿ ಶ್ರೇಯಾ ಬಸವಂತರಾಯ ದೇಸಾಯಿ ಸಹ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪೂರ್ಣ ಅಂಕ (625/625)ದೊಂದಿಗೆ ಸಾಧನೆ ಮೆರೆದಿದ್ದಾರೆ.
ತಾಳಿಕೋಟೆ ಪಟ್ಟಣದ ಸರ್ವಜ್ಞ ವಿದ್ಯಾಪೀಠ ಪ್ರೌಢಶಾಲೆ ವಿದ್ಯಾರ್ಥಿನಿ ಶ್ರೇಯಾಳ ತಂದೆ ಬಸವಂತರಾಯ ಫಾರ್ಮಾಸಿಸ್ಟ್ ಆಗಿ ಸರ್ಕಾರಿ ಸೇವೆಯಲ್ಲಿದ್ದಾರೆ. ತಾಯಿ ಶಕುಂತಲಾ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಧಕಿ ಶ್ರೇಯಾಗೆ ಒಬ್ಬ ತಮ್ಮನಿದ್ದು ಅಕ್ಕನ ಸಾಧನೆಗೆ ಸಂಭ್ರಮಸುತ್ತಿದ್ದಾನೆ. ಇಡೀ ಕುಟುಂಬ ಶ್ರೇಯಾಳ ಸಾಧನೆ ಕೊಂಡಾಡುತ್ತಿದೆ.

ಇವರೊಂದಿಗೆ ಕಾರಜೋಳ ಗ್ರಾಮದ ಐಶ್ವರ್ಯ ಕನಸೆ, ಸ್ವಾತಿ ಗೌಡಪ್ಪ ಮಾಳೇದ, ಸಿಂದಗಿ ತಾಲೂಕಿನ ವಿಭೂತಿ ಹಳ್ಳಿಯ ಶಿವಲೀಲಾ ಶಿವಲಿಂಗಪ್ಪ ದುರಗೆ, ಇಟ್ಟಂಗಿಹಾಳದ ರಕ್ಷಿತ ಸುರೇಶ ಚಿನಿವಾರ, ನಾಗರಬೆಟ್ಟದ ಯಲ್ಲಾಲಿಂಗ ಬಸಪ್ಪ ಸೂಳಿಬಾವಿ ಪೂರ್ಣ ಅಂಕ (625/625) ಪಡೆದು ಸಾಧನೆ ಮೆರೆದಿದ್ದಾರೆ.

error: Content is protected !!