ವಿಜಯಪುರ

ಚವಡಿಹಾಳ ವಸತಿ ನಿಲಯದಿಂದ ವಿದ್ಯಾರ್ಥಿ ಕಾಣೆ, ಅಪಹರಣ ಮಾಡಿಕೊಂಡು ಹೋದರಾ?

ಸರಕಾರ ನ್ಯೂಸ್‌ ಇಂಡಿ

ಕಣ್ಣುಗಳಿಗೆ ಹಾಕುವ ಔಷಧ ತರುವುದಾಗಿ ವಸತಿ ಶಾಲೆಯಿಂದ ಹೋದ ವಿದ್ಯಾರ್ಥಿ ಮರಳಿ ಬಾರದೇ ಇರುವುದು ಆತಂಕ ಸೃಷ್ಠಿಸಿದೆ.

ಇಂಡಿ ತಾಲೂಕಿನ ಚವಡಿಹಾಳ ಗ್ರಾಮದ ಭಾಗ್ಯವಂತಿ ಶಾಲೆಯ ವಸತಿ ನಿಲಯದಲ್ಲಿ ಈ ಘಟನೆ ನಡೆದಿದ್ದು, ಗುರುಪ್ರಸಾದ ಲಕ್ಷ್ಮಣ ಶಿಂದೆ (15) ಎಂಬ ವಿದ್ಯಾರ್ಥಿ ಕಾಣೆಯಾಗಿದ್ದಾನೆ.

ಕಳೆದ ಜು. 17ರಂದೇ ವಿದ್ಯಾರ್ಥಿ ಕಾಣೆಯಾಗಿದ್ದು, ಈವರೆಗೆ ಹುಡುಕಾಡಿ ಬೇಸತ್ತ ಪಾಲಕರು ಇದೀಗ ಇಂಡಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.

ಘಟನೆ ವಿವರ:

ಭಾಗ್ಯವಂತಿ ಶಾಲೆ ವಸತಿ ನಿಲಯದಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ರಾತ್ರಿ ತರಗತಿ ಹೇಳಿಕೊಡಲಾಗುತ್ತದೆ. ಆ ಪ್ರಕಾರ 2023 ಜು.17ರಂದು ವಿದ್ಯಾರ್ಥಿಗಳು ತರಗತಿಗೆ ತೆರಳಿದ್ದಾರೆ. ಆದರೆ, ಗುರುಪ್ರಸಾದ ಮಾತ್ರ ಹಾಜರಾಗಿರಲಿಲ್ಲ. ರಾತ್ರಿ 10.15ರ ಸುಮಾರಿಗೆ ಶಿಕ್ಷಕಿ ಸಲ್ಮಾ ವಿಚಾರಿಸಲಾಗಿ ಈ ವಿಷಯ ಗಮನಕ್ಕೆ ಬಂದಿದೆ. ಕಣ್ಣುಗಳಿಗೆ ಹಾಕಿಕೊಳ್ಳುವ ಔಷಧ ತರುವುದಾಗಿ ಹೇಳಿ ಹೋದ ವಿದ್ಯಾರ್ಥಿ ಮರಳಿ ಬಂದಿಲ್ಲವೆಂಬುದು ಗಮನಕ್ಕೆ ಬಂದಿದೆ.

ಬಳಿಕ ವಸತಿ ನಿಲಯದ ಸಿಬ್ಬಂದಿ ಶಾಲೆ ಆವರಣ ಹಾಗೂ ಸುತ್ತಮುತ್ತಲಿನ ಜಮೀನುಗಳಲ್ಲಿ ಹುಡುಕಾಡಿದ್ದಾರೆ. ಎಲ್ಲೂ ಸಿಗದ ಹಿನ್ನೆಲೆ ಚವಡಿಹಾಳ ಗ್ರಾಮದ ಕಡೆಗೆ ಹೋಗಿರಬಹುದೆಂದು ಅಲ್ಲೂ ಹುಡುಕಾಡಿದ್ದಾರೆ. ನಂತರ ಶಾಲೆ ಪ್ರಾಂಶುಪಾಲರು ವಿದ್ಯಾರ್ಥಿಯ ಕುಟುಂಬಸ್ಥರಿಗೆ ವಿಚಾರಿಸಲಾಗಿ ತಮ್ಮ ಊರಿಗೂ ಬಂದಿಲ್ಲವೆಂಬುದು ತಿಳಿದು ಬಂದಿದೆ.

ಹೀಗಾಗಿ ವಿದ್ಯಾರ್ಥಿ ಗುರುಪ್ರಸಾದನನ್ನು ಯಾರೋ, ಯಾವುದೋ ಉದ್ದೇಶಕ್ಕಾಗಿ ಅಪರಹಣ ಮಾಡಿಕೊಂಡು ಹೋಗಿರುತ್ತಾರೆಂಬ ಸಂಶಯದಿಂದ ಪಾಲಕರು ಇಂಡಿ ಗ್ರಾಮೀಣ ಠಾಣೆಗೆ ದೂರು ನೀಡಿದ್ದಾರೆ.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್‌ ಸಬ್‌ ಸ್ಕ್ರೈಬ್‌ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್‌ ಬಟನ್‌ ಪ್ರೆಸ್‌ ಮಾಡಿ)

error: Content is protected !!