ವಿಜಯಪುರ

ಕರ್ನಾಟಕದ ದ್ರಾಕ್ಷಿ ಕಣಜಕ್ಕೆ ಬಿಜೆಪಿ ಕೊಡುಗೆ, ಬೃಹತ್‌ ಶೈತ್ಯಾಗಾರಕ್ಕೆ ಶಾಸಕ ಯತ್ನಾಳ ಚಾಲನೆ, ಏನಿದು ಯೋಜನೆ? ಇಲ್ಲಿದೆ ನೋಡಿ ಕಂಪ್ಲೀಟ್‌ ಡಿಟೇಲ್ಸ್‌

ವಿಜಯಪುರ: ರಾಜ್ಯದ ದ್ರಾಕ್ಷಿ ಕಣಜ ಖ್ಯಾತಿಯ ವಿಜಯಪುರ ಜಿಲ್ಲೆಯ ತೊರವಿಯಲ್ಲಿ 35 ಕೋಟಿ ರೂ.ವೆಚ್ಚದ ಅತ್ಯಾಧುನಿಕ ಶೈತ್ಯ ಸಂಗ್ರಹಗಾರಕ್ಕೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿ ಪೂಜೆ ನೆರವೇರಿಸಿದರು.
ರಾಜ್ಯದಲ್ಲಿಯೇ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ವಿಜಯಪುರ ಜಿಲ್ಲೆಗೆ ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿ ಮೂಲಕ ತೊರವಿ ಗ್ರಾಮದಲ್ಲಿ 35 ಕೋಟಿ ರೂ.ವೆಚ್ಚದಲ್ಲಿ ಅತ್ಯಾಧುನಿಕ ಶೈತ್ಯ ಸಂಗ್ರಹ ಸೌಲಭ್ಯವನ್ನು ಪಿಪಿಪಿ ಆಧಾರದ ಮೇಲೆ ನಿರ್ಮಿಸಿ ದ್ರಾಕ್ಷಿ ಬೆಳೆಯ ಸಂಗ್ರಹಣೆ, ಸಂಸ್ಕರಣೆ ಮತ್ತು ಸಾಗಾಣೆಯನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಶೀತಲೀಕೃತ ಸರಕು ಸಾಗಣೆ ವಾಹನಗಳನ್ನು ಒದಗಿಸಲು ಘೋಷಿಸಲಾಗಿದೆ.
2022-23ನೇ ಸಾಲಿನ ಬಜೆಟ್‌ನಲ್ಲಿ ಬಸವರಾಜ ಬೊಮ್ಮಾಯಿ ಈ ಯೋಜನೆ ಘೋಷಿಸಿದ್ದು ಭಾನುವಾರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಭೂಮಿ ಪೂಜೆ ನೆರವೇರಿಸಿದರು.
ವಿಜಯಪುರದ ತೊರವಿ ತಾಂಡಾದ 4 ರಲ್ಲಿರುವ ಅತ್ಯಾಧುನಿಕ ಶೈತ್ಯ ಸಂಗ್ರಹ ಸ್ಥಳಕ್ಕೆ ಮಾಧ್ಯಮ ಪ್ರತಿನಿಧಿಗಳನ್ನು ವಿಶೇಷ ವಾಹನದಲ್ಲಿ ಕರೆದುಕೊಂಡು ಹೋಗಿ ಭೂಮಿ ಪೂಜೆ ನೆರವೇರಿಸಲಾಯಿತು.
ದ್ರಾಕ್ಷಿ ಹಾಗೂ ದ್ರಾಕ್ಷಿರಸ ಅಭಿವೃದ್ಧಿ ಮಂಡಳಿಯ, ದ್ರಾಕ್ಷಿ ಬೆಳೆಯ ಸಂಗ್ರಹಣೆ ಮತ್ತು ಸಂಸ್ಕರಣೆಗೆ ಅಗತ್ಯವಿರುವ ಅತ್ಯಾಧುನಿಕ ಶೈತ್ಯ ಸಂಗ್ರಹ ಸ್ಥಳದ ಬಗ್ಗೆ ಮಾಹಿತಿ ಕಲೆ ಹಾಕಿದ ಶಾಸಕ ಯತ್ನಾಳ ಈ ಭಾಗದ ದ್ರಾಕ್ಷಿ ಬೆಳೆಗಾರರ ದೃಷ್ಟಿಯಿಂದ ಇದೊಂದು ಮಹತ್ವದ ಯೋಜನೆಯಾಗಿದೆ ಎಂದು ಬಣ್ಣಿಸಿದರು.
ದ್ರಾಕ್ಷಿ ಬೆಳಗಾರ ಸಂಘದ ಸದಸ್ಯರು ಹಾಗೂ ಅಧಿಕಾರಿಗಳು ಸ್ಥಳದಲ್ಲಿದ್ದರು.

error: Content is protected !!