ಕೈಗಡ ಹಣ ವಾಪಸ್ ಕೊಡದ ಕಾರಣಕ್ಕೆ ಕೊಲೆ, ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ
ಸರ್ಕಾರ್ ನ್ಯೂಸ್ ವಿಜಯಪುರ
ಹಣಕಾಸಿನ ವಿಚಾರಕ್ಕೆ ಜಗಳ ಉಂಟಾಗಿ ವ್ಯಕ್ತಿಯನ್ನು ಕೊಲೆ ಮಾಡಿದ ಅಪರಾಧಿಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ 1 ಲಕ್ಷ ರೂ.ದಂಡ ವಿಧಿಸಿ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ.
ಗಾಂಧಿನಗರದ ನಿವಾಸಿ ಮಕ್ಬುಲ್ ರಸೂಲಸಾಬ ಶೇಖ ಶಿಕ್ಷೆಗೆ ಗುರಿಯಾಗಿದ್ದಾನೆ. ಮಕ್ಬುಲ್ ತನ್ನ ಪತ್ನಿಯ ಅಣ್ಣ ಗೌಸಮೊಹಿದ್ದೀನ ನಬಿಲಾಲ ಹೊನವಾಡಗೆ ಮೂರು ತಿಂಗಳ ಹಿಂದೆ ಪ್ರಾಪಂಚಿಕ ಅಡಚಣೆಗಾಗಿ 70 ಸಾವಿರ ರೂ. ಹಣ ಪಡೆದಿದ್ದನು. ಮರಳಿ ಹಣ ನೀಡುವಂತೆ ಮಕ್ಬುಲ್ ಹಾಗೂ ಆತನ ಪತ್ನಿ ಒತ್ತಾಯಿಸಿದ್ದರು. ಆದರೆ, ಸದ್ಯಕ್ಕೆ ತಮ್ಮ ಬಳಿ ಹಣ ಇಲ್ಲವೆಂದು ಗೌಸಮೊಹಿದ್ದೀನ ಹೇಳಿದರೂ ಆತನನ್ನು ಮನೆಯಿಂದ ಎಳೆದಾಡಿಕೊಂಡು ಯೋಗಾಪುರ ಕಾಲನಿಯಲ್ಲಿರುವ ಹಣಮಂತ ದೇವರ ಗುರಿಯ ಹತ್ತಿರದ ಚೌಕ್‌ವರೆಗೆ ಒಯ್ದು ಪರಸಿಗಲ್ಲಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದನು.
ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಧೀಶ ಮದ್ವೇಶ ದಬೇರ ಅಪರಾಧಿ ಮಕ್ಬುಲ್‌ಗೆ ಕಠಿಣ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ವಿ.ಜಿ. ಮಾಮನಿ ವಾದ ಮಂಡಿಸಿದ್ದರು.