ಬಿಜೆಪಿ ಮುಖಂಡ ರವೀಂದ್ರ ಲೋಣಿ ಶಾಕಿಂಗ್ ನ್ಯೂಸ್ ಸಹ ವಕ್ತಾರ ಸ್ಥಾನಕ್ಕೆ ರಾಜೀನಾಮೆ…!
ವಿಜಯಪುರ: ವಿಧಾನ ಸಭೆ ಚುನಾವಣೆಗೆ ಇನ್ನೊಂದು ವರ್ಷ ಮಾತ್ರ ಬಾಕಿ ಇದೆ. ಅಷ್ಟರಲ್ಲಾಗಲೇ ಬಿಜೆಪಿಯಲ್ಲಿನ ಆಂತರಿಕ ಅಸಮಾಧಾನ ಸ್ಪೋಟಗೊಂಡಿದೆ….!
ಹೌದು, ಬಿಜೆಪಿಯ ಜಿಲ್ಲಾ ಸಹ ವಕ್ತಾರ ರವೀಂದ್ರ ಲೋಣಿ ಜಿಲ್ಲಾಧ್ಯಕ್ಷರ ವರ್ತನೆಗೆ ಬೇಸತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ನಿಶ್ಚಯಿಸಿದ್ದಾರೆ.
ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ನಿರ್ಧಾರ ಪ್ರಕಟಿಸಿದ ಅವರು, ಬಿಜೆಪಿಯ ಸಹ ವಕ್ತಾರನಾಗಿ ಕಳೆದ ಒಂದು ವರ್ಷದಿಂದ ಅನೇಕ ಜನಪರ ಕೆಲಸ ಕಾರ್ಯ ಮಾಡಿದ್ದೇನೆ. ರಾಜ್ಯ ಮಟ್ಟದಲ್ಲಿ ಮಾಧ್ಯಮ ಕಾರ್ಯಾಗಾರ ಮಾಡಿದೆವು. ಪಕ್ಷದ ಬಲವರ್ಧನೆಗೆ ಸಾಕಷ್ಟು ಸಮಾಲೋಚನೆ ನಡೆಸಿದೆವು. ವಕ್ತಾರರು ಮಾಧ್ಯಮದ ಮುಖವಾಣಿಯಾಗಿ ಹೇಗೆ ಕಾರ್ಯ ನಿರ್ವಹಿಸಬೇಕು? ಪಕ್ಷದ ತತ್ವ ಸಿದ್ಧಾಂತಗಳ ನ್ನು ಹೇಗೆ ಪ್ರಚುರ ಪಡಿಸಬೇಕೆಂದು? ಕಾರ್ಯಾಗಾರದಲ್ಲಿ ತಿಳಿಸಿಕೊಡಲಾಯಿತು. ರಾಷ್ಟ್ರೀಯ ವಕ್ತಾರರು ಸಹ ಆ ಕಾರ್ಯಾಗಾರ ದಲ್ಲಿ ಪಾಲ್ಗೊಂಡಿದ್ದರು. ಅಲ್ಲಿನ ವಿಚಾರಗಳನ್ನು ಜಿಲ್ಲೆಯಲ್ಲೂ ಹಂಚಬೇಕೆಂದು ತೀರ್ಮಾನಿಸಿ ಇಲ್ಲಿನ ನಾಯಕರೊಂದಿಗೆ ಮಾತನಾಡಿದಾಗ ಸಮ್ಮತಿಸಿದ್ದರು. ಪಕ್ಷದ ಜಿಲ್ಲಾ ಅಧ್ಯಕ್ಷರಲ್ಲೂ ವಿನಂತಿಸಿದ್ದೆ. ಆದರೆ, ಅವರು ಸಮರ್ಪಕವಾಗಿ ಸ್ಪಂದಿಸಲಿಲ್ಲ. ಆದರೂ ಒಂದೆರೆಡು ಪತ್ರಿಕಾಗೋಷ್ಠಿ ಮಾಡಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆ ತಿಳಿಸುವ ಪ್ರಯತ್ನ ಮಾಡಿದೆ. ಆದರೆ ತದನಂತರದಲ್ಲಿ ಆ ಪ್ರಯತ್ನ ಆಗಲೇ ಇಲ್ಲ. ಜಿಲ್ಲೆಯ ಶಾಸಕರು ಅನೇಕ ಅಭಿವೃದ್ಧಿ ಪರ ಕಾರ್ಯ ಮಾಡಿದರೂ ಅದನ್ನು ತಿಳಿಸುವ ಪ್ರಯತ್ನ ನಡೆದಿಲ್ಲ ಎಂದು ಲೋಣಿ
ವಿಶಾದ ವ್ಯಕ್ತಪಡಿಸಿದರು.
ಪಕ್ಷದ ಚಟುವಟಿಕೆಗಳನ್ನು ಜನರಿಗೆ ತಲುಪಿಸಲು ಆಗಿಲ್ಲ ಎಂಬುದು ನೋವಿನ ಸಂಗತಿ ಎಂದರು.
ವಿರೋಧ ಪಕ್ಷದ ನಾಯಕರು ಟೀಕೆ ಟಿಪ್ಪಣಿ ಮಾಡಿದರೂ ಅದಕ್ಕೆ ಸಮರ್ಪಕ ಉತ್ತರ ಕೊಡಲು ಆಗಿಲ್ಲ. ಪಕ್ಷದ ಪ್ರಮುಖರಾಗಿ ದಿಟ್ಟ ಉತ್ತರ ನೀಡುವ ಕೆಲಸ ಆಗಿಲ್ಲ. ಅದನ್ನು ಪಕ್ಷದ ಕಾರ್ಯಕರ್ತರು ಸಾಮಾಜಿಕ ಜಾಲತಾಣದ ಮೂಲಕ ಮಾಡುತ್ತಿದ್ದಾರೆ. ಇದನ್ನು ಪಕ್ಷದ ಮುಖಂಡರ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ. ಹೀಗಾಗಿ ನಾನು ಅತ್ಯಂತ ನೋವಿನಿಂದ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ಲೋಣಿ ತಿಳಿಸಿದರು.
ಮುಂದವರಿದು ಇದೇ ದಿನ ಜಿಲ್ಲಾಧ್ಯಕ್ಷರನ್ನು ಸಂಪರ್ಕಿಸಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ತಿಳಿಸಿದರು.