ವಿಜಯಪುರ

ಬಿಜೆಪಿ ಮೂರನೇ ಪಟ್ಟಿ ಬಿಡುಗಡೆ ವಿಳಂಬ, ಗೋಪಾಲ ಕಾರಜೋಳ ಬೆಂಬಲಿಗರ ಆಕ್ರೋಶ, ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಮಾಡಿದ್ದೇನು?

ಸರಕಾರ ನ್ಯೂಸ್ ವಿಜಯಪುರ

ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪುತ್ರ ಗೋಪಾಲ ಆಕಾಂಕ್ಷಿಯಾಗಿರುವ ನಾಗಠಾಣ ಕ್ಷೇತ್ರಕ್ಕೆ ಈವರೆಗೂ ಅಭ್ಯರ್ಥಿ ಆಯ್ಕೆ ಆಖೈರುಗೊಳಿಸದ ಹಿನ್ನೆಲೆ ಗೋಪಾಲ ಕಾರಜೋಳ ಬೆಂಬಲಿಗರು ಶುಕ್ರವಾರ ರಾತ್ರಿ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಬಿಜೆಪಿಯಿಂದ ಈಗಾಗಲೇ ಎರಡು ಪಟ್ಟಿ ಬಿಡುಗಡೆಗೊಳಿಸಲಾಗಿದೆ. ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಿಗೆ ಅಭ್ಯರ್ಥಿ ಆಯ್ಕೆ ಮಾಡಲಾಗಿದೆ. ಆದರೆ ನಾಗಠಾಣ ಎಸ್ ಸಿ ಮೀಸಲು ಕ್ಷೇತ್ರ ಬಾಕಿ ಇರಿಸಲಾಗಿದೆ. ಕೂಡಲೇ ಗೋಪಾಲ ಹೆಸರು ಅಂತಿಮಗೊಳಿಸಬೇಕೆಂದು ಬೆಂಬಲಿಗರು ಆಗ್ರಹಿಸಿದರು.

ನಾಗಠಾಣ ಕ್ಷೇತ್ರ ಕ್ಕೆ ಗೋಪಾಲ ಕಾರಜೋಳಗೆ ಟಿಕೆಟ್ ಕೊಡಬೇಕೆಂದು ಗೋವಿಂದ ಕಾರಜೋಳ ಹೈಕಮಾಂಡ್ ಮಟ್ಟದಲ್ಲಿ ಲಾಬಿ ನಡೆಸಿದ್ದಾರೆ. ಇನ್ನೊಂದೆ ಸಂಸದ ರಮೇಶ ಜಿಗಜಿಣಗಿ ಕೂಡ ಟಿಕೆಟ್ ಬಯಸಿದ್ದಾರೆ. ಬಿಜೆಪಿ ಯ ಕೆಲವು ಪ್ರಭಾವಿ ನಾಯಕರು ಹಾಗೂ ಸಂಘ ಪರಿವಾರದ ಮುಖಂಡರು ಮಾಜಿ ಸಿಪಿಐ ಮಹೀಂದ್ರ ನಾಯಿಕ ಹೆಸರು ಪ್ರಸ್ತಾಪಿಸಿದ್ದರಿಂದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ.

ಈಗಾಗಲೇ ಅಧಿಸೂಚನೆ ಪ್ರಕಟಗೊಂಡಿದ್ದು, ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿದೆ. ನಾಗಠಾಣ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಆಗಲೇ ಟಿಕೆಟ್ ಘೋಷಿಸಿದ್ದರಿಂದ ಪ್ರಚಾರ ಚುರುಕುಗೊಂಡಿದೆ. ಆದರೆ, ಬಿಜೆಪಿ ಇನ್ನೂ ಅಭ್ಯರ್ಥಿ ಆಖೈರುಗೊಳಿಸದಿರುವುದು ಆಕಾಂಕ್ಷಿಗಳಲ್ಲಿ ತಲ್ಲಣ ಶುರುವಾಗಿದೆ. ಹೀಗಾಗಿ ಗೋಪಾಲ ಕಾರಜೋಳ ಬೆಂಬಲಿಗರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

error: Content is protected !!