ವಿಜಯಪುರ

ಹಗರಣದ ಹಿಂದೆ ಬಿದ್ದ ಶಾಸಕ ಯತ್ನಾಳ, ಆ ಸಹಕಾರಿ ಕ್ರೆಡಿಟ್‌ ಬಗ್ಗೆ ಸದನದಲ್ಲಿ ಪ್ರಶ್ನೆ ಮೇಲೆ ಪ್ರಶ್ನೆ, ಅಷ್ಟಕ್ಕೂ ಆ ಸಹಕಾರಿ ಕ್ರೆಡಿಟ್‌ ಯಾವುದು? ಈ ವರದಿ ನೋಡಿ

ವಿಜಯಪುರ: ಒಂದಿಲ್ಲಾಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಇದೀಗ ಎಸ್‌ ಎಂಎನ್‌ ಕ್ರೆಡಿಟ್‌ ಸೌಹಾದ ಸರ್ಕಾರಿ ನಿಗಮದ ಹಗರಣದ ಹಿಂದೆ ಬಿದ್ದಿದ್ದಾರೆ.

ಕಳೆದ ವಿಧಾನ ಸಭೆ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನೆ ಕೇಳಿದ್ದ ಶಾಸಕ ಯತ್ನಾಳ ಇದೀಗ ಮತ್ತೊಮ್ಮೆ ಆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಶಾಸಕ ಯತ್ನಾಳರಿಗೆ ಪ್ರತಿಕ್ರಿಯೆ ನೀಡಿರುವ ಸರ್ಕಾರ, ಎಸ್‌ ಎಂಎನ್‌ ಕ್ರೆಡಿಟ್‌ ಸೌಹಾರ್ದ ಸಹಕಾರಿ ನಿಗಮ ಠೇವಣಿದಾರರ ಹಣ ದರುಪಯೋಗಪಡಿಸಿಕೊಂಡಿರವುದು ನಿಜ ಎಂದು ಒಪ್ಪಿಕೊಂಡಿದೆ.

ಒಟ್ಟು 29,29,62,559 ರೂ. ದುರುಪಯೋಗವಾಗಿದೆ. 2018-19 ನೇ ಸಾಲಿನ ಲೆಕ್ಕ ಪರಿಶೋಧನೆ ವರದಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಸರ್ಕಾರ ಕೆಪಿಐಡಿ ಕಾಯ್ದೆ 2004 ರಡಿ ಉಪ ವಿಭಾಗಾಧಿಕಾರಿ ಕಂದಾಯ ಇಲಾಖೆ ವಿಜಯಪುರ ಇವರನ್ನು ಸಕ್ಷಮ ಪ್ರಾಧಿಕಾರಿ ಎಂದು ನೇಮಿಸಿ ಡಿ.30,2020ರಂದು ಆದೇಶ ಹೊರಡಿಸಿದೆ.

ಸಕ್ಷಮ ಪ್ರಾಧಿಕಾರ ಹಾಗೂ ವಿಪ ವಿಭಾಗಾಧಿಕಾರಿಗಳು ಕಂದಾಯ ಇಲಾಖೆ ವಿಜಯಪುರ ಇವರು ಸುಸ್ತಿ ಸಾಲಗಾರರಿಗೆ ಸಾಲ ವಸೂಲಾತಿಗಾಗಿ ನೋಟಿಸ್‌ ಜಾರಿಗೊಳಿಸಿದ್ದಾರೆ. ಅಲ್ಲದೇ 9 ಜನ ನಿರ್ದೇಶಕರ ಸ್ಥಿರ ಸ್ವತ್ತುಗಳನ್ನು ಜಪ್ತಿ  ಮಾಡಿ ಆದೇಶ ಹೊರಡಿಸಿರುತ್ತದೆ.

ಕರ್ನಾಟಕ ಸಹಕಾರಿ ಅಧಿನಿಯಮ 1997 ಕಲಂ 44 ರಡಿ ಅನೀಲಕುಮಾರ ದೇಶಪಾಂಡೆ, ಸಂತಪ್ಪ ಯಶವಂತ ಸೂರ್ಯವಂಶಿ, ತುಕಾರಾಂ ದೊಂಡಿಬಾ ಕದಂ, ಸುನೀಲ ಬಾ ಪೂಜಾರಿ, ಪ್ರದೀಪ ಬಾಲಚಂದ್ರ ಮುಂಜಾನೆ ಇವರುಗಳ ಸ್ಥಿರಾಸ್ತಿಗಳನ್ನು ಜಪ್ತಿ ಪೂರ್ವ ಆದೇಶಕ್ಕೆ ಒಳಪಡಿಸಲಾಗಿದೆ. ಈ ಆದೇಶವನ್ನು ಪ್ರಶ್ನಿಸಿ ಧಾರವಾಡ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ ತರಲಾಗಿದೆ.

ತಡೆಯಾಜ್ಞೆ ತೆರವಾದ ಬಳಿಕ ಜಪ್ತಿ ಆಸ್ತಿಗಳನ್ನು ಹರಾಜಿಗೆ ಕ್ರಮವಿಟ್ಟು ಹಂತ ಹಂತವಾಗಿ ಠೇವಣಿದಾರರಿಗೆ ಹಣ ಮರುಪಾವತಿಗೆ ಕ್ರಮವಿಡಬೇಕಾಗುತ್ತದೆ ಎಂದು ತಿಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಂಧಿ ಚೌಕ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆಪಾದಿತರನ್ನು ಬಂಧಿಸಿ ಕಾರ್ಯಾಗ್ರಹದಲ್ಲಿರಿಸಲಾಗಿದೆ. ಪ್ರಕರಣ ಸಿಒಡಿ ತನಿಖೆಗೆ ವಹಿಸಲಾಗಿದ್ದು ವಿಚಾರಣೆ ಹಂತದಲ್ಲಿದೆ. ಸಹಕಾರಿಯನ್ನು ಸಮಾಪನೆಗೊಳಿಸಿ ಜಿಲ್ಲಾ ಸಂಯೋಜಕರನ್ನು ಸಮಾಪನಾಧಿಕಾರಿನ್ನಾಗಿ ನೇಮಿಸಲಾಗಿದೆ ಎಂದು ಸಹಕಾರಿ ಸಚಿವ ಎಸ್‌.ಟಿ. ಸೋಮಶೇಖರ ತಿಳಿಸಿದ್ದಾರೆ.

ಒಟ್ಟಿನಲ್ಲಿ ಎಸ್‌ಎಂಎನ್‌ ಕ್ರೆಡಿಟ್‌ ಸೌಹಾರ್ಧ ಸಹಕಾರಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸರ್ಕಾರದ ಮಟ್ಟದಲ್ಲಿ ಪ್ರಶ್ನೆಗಳ ಮೂಲಕ ಗಮನ ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

 

error: Content is protected !!