ನಾಮ ಪತ್ರ ಸಲ್ಲಿಕೆಗೂ ಮುನ್ನ ಮನೆ ದೇವರಿಗೆ ಪೂಜೆ ಸಲ್ಲಿಸಿದ ಲಕ್ಷ್ಮಣ ಸವದಿ, ಉಪ್ಪಲದಿನ್ನಿ ಸಂಗಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೇಗಿತ್ತು ಗೊತ್ತಾ ಸವದಿ ಪ್ರಾರ್ಥನೆ?
ಸರಕಾರ ನ್ಯೂಸ್ ವಿಜಯಪುರ
ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಅಥಣಿಯಿಂದ ನಾಮಪತ್ರ ಸಲ್ಲಿಸುವುದಕ್ಕೂ ಮೊದಲು ಮನೆ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಬಬಲೇಶ್ವರ ತಾಲೂಕಿನ ಉಪ್ಪಲದಿನ್ನಿ ಗ್ರಾಮಕ್ಕೆ ಸೋಮವಾರ ಭೇಟಿ ನೀಡಿದ ಲಕ್ಷ್ಮಣ ಸವದಿ ಗ್ರಾಮದೇವತೆ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆಯೇ ದೇವಸ್ಥಾನದಲ್ಲಿ ಅರ್ಚನೆ ಮಾಡಿಸಿದ ಲಕ್ಷ್ಮಣ ಸವದಿ ಬಳಿಕ ಬೆಂಬಲಿಗರೊಡಗೂಡಿ ವಿಶೇಷ ಪೂಜೆ ನೆರವೇರಿಸಿ ದೇವಸ್ಥಾನದ ಪ್ರದಕ್ಷಿಣೆ ಹಾಕಿದರು. ಪ್ರಸಕ್ತ ಚುನಾವಣೆಯಲ್ಲಿ ಒಳಿತಾಗಲಿ ಎಂದು ಪ್ರಾರ್ಥಿಸಿದರು.
ಪ್ರತಿ ಚುನಾವಣೆಗೆ ಮುನ್ನ ಉಪ್ಪಲದಿನ್ನಿಗೆ ಆಗಮಿಸಿ ಸಂಗಮೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ದೇವಸ್ಥಾನಕ್ಕೆ ಬಂದಾಗಲೊಮ್ಮೆ ಒಳಿತಾಗಿದೆ. ಈ ಬಾರಿಯೂ ದೇವರು ‘ಕೈ’ ಹಿಡಿಯುವ ವಿಶ್ವಾಸವಿದೆ ಎಂದ ಲಕ್ಷ್ಮಣ ಸವದಿ, ಚುನಾವಣೆ ಮುಗಿದ ಬಳಿಕ ಮತ್ತೊಮ್ಮೆ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುವುದಾಗಿ ತಿಳಿಸಿದರು.
ಕಳೆದ ಬಾರಿ ಬಬಲೇಶ್ವರ ವಿಧಾನ ಸಭೆ ಕ್ಷೇತ್ರದ ಬಿಜೆಪಿ ಉಸ್ತುವಾರಿಯಾಗಿ ಆಗಮಿಸಿದ್ದ ಲಕ್ಷ್ಮಣ ಸವದಿ ಈ ಬಾರಿ ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಪ್ರಥಮ ಬಾರಿಗೆ ಕ್ಷೇತ್ರಕ್ಕೆ ಆಗಮಿಸಿದ ಹಿನ್ನೆಲೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ದೂರವಾಣಿ ಮೂಲಕವೇ ಸ್ವಾಗತಿಸಿಕೊಂಡರು.
ಮುಖಂಡರಾದ ಬಸವರಾಜ ದೇಸಾಯಿ, ಭಾಗೀರಥಿ ತೇಲಿ, ಸೋಮನಾಥ ಬಿರಾದಾರ, ಮಲ್ಲಿಕಾರ್ಜುನ ಗಂಗೂರ, ಮಲ್ಲಿಕಾರ್ಜುನ ರಾಜಂಗಳ, ಸಿದಗೊಂಡ ನ್ಯಾಮಗೌಡ ಮತ್ತಿತರರಿದ್ದರು.