ಸಚಿವ ಜಮೀರ್ ಅಹ್ಮದ್ ಗೆ ಶಾಸಕ ಯತ್ನಾಳ ತಿರುಗೇಟು, ವಕ್ಫ್ ಆಸ್ತಿ ಬಗ್ಗೆ ಯತ್ನಾಳ ಹೇಳಿದ್ದೇನು?
ಸರಕಾರ ನ್ಯೂಸ್ ವಿಜಯಪುರ
ವಕ್ಫ್ ಆಸ್ತಿ ನಿಮ್ಮಪ್ಪಂದು- ನಮ್ಮಪ್ಪಂದೂ ಅಲ್ಲ ಎಂದು ವಾಗ್ದಾಳಿ ನಡೆಸಿದ್ದ ಸಚಿವ ಜಮೀರ್ ಅಹ್ಮದ್ ಖಾನ್ ಗೆ ಶಾಸಕ ಯತ್ನಾಳ ತಿರುಗೇಟು ನೀಡಿದ್ದಾರೆ.
ಜಮೀರ್ ಅಹ್ಮದ್ ಅವರೇ, ಅಪ್ಪನಿಂದ ಬಂದ ಆಸ್ತಿ ಕಾನೂನು ಬದ್ಧವಾಗಿರುತ್ತದೆ. ಯಾರದೋ ಅಪ್ಪನ ಆಸ್ತಿಯನ್ನು ನಮ್ಮದು ಎಂದು ಹೇಳುವ ವಕ್ಫ್ ಪರಿಕಲ್ಪನೆ/ಕಾನೂನು ಅಸಂವಿಧಾನಿಕ ಹಾಗೂ ಕಾನೂನು ಬಾಹಿರ ಎಂದಿದ್ದಾರೆ.
ಈ ಕುರಿತಂತೆ ತಮ್ಮ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿರುವ ಅವರು, ಜಮೀರ್ ಅವರೇ, ದೇಣಿಗೆ ಪಡೆದು ಇಂದು ವಕ್ಫ್ ಭಾರತದ ಮೂರನೇ ಅತಿದೊಡ್ಡ ಭೂ ಒಡೆಯ ಆಗಿದೆಯಾ? ಇದನ್ನು ನಂಬುವುದಕ್ಕೆ ಸಾಧ್ಯವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ವಕ್ಫ್ ನಿಂದ ಆರ್ಥಿಕ ಸಮಾನತೆ ಸಾಧ್ಯವಿದೆಯೇ? ಅಸಲೀಗೆ, ವಕ್ಫ್ ನಂತ ಕಾಯ್ದೆ ಮುಸ್ಲಿಂ ಬಾಹುಳ್ಯ ದೇಶಗಳಲ್ಲೇ ಇಲ್ಲ, ಇನ್ನು ಜಾತ್ಯತೀತ ದೇಶವಾದ ಭಾರತದಲ್ಲಿ ಏಕೆ ಬೇಕು? ರೋಷಾವೇಶದಿಂದ ಟೀಕೆ ಮಾಡುವ ಮುನ್ನ ಸತ್ಯಾಸತ್ಯತೆಯನ್ನು ಪರಾಮರ್ಶಿಸಿ, ಜಾತ್ಯತೀತ ರಾಷ್ಟ್ರದಲ್ಲಿ ವಕ್ಫ್ ಕಾನೂನುಗಳು ಅರಾಜಕತೆ ಉಂಟುಮಾಡುತ್ತದೆ ಎಂಬುದನ್ನು ತಿಳಿಯಿರಿ.
ಸಿಕ್ಕ ಸಿಕ್ಕ ಭೂಮಿ ನಮ್ಮದು ಎಂದು ನಿಮ್ಮ ಷರಿಯಾ ಕಾನೂನನ್ನು ಇಲ್ಲಿ ಅನ್ವಯಗೊಳಿಸಲು ಇದು ಇರಾನ್ ಅಥವಾ ಟರ್ಕಿ ಅಲ್ಲ. ಇದು ಭಾರತ. ಜವಾಬ್ದಾರಿಯುತ ಸಚಿವರಾಗಿ, ತೂಕವಾಗಿ, ಪ್ರಬುದ್ಧತೆಯಿಂದ ಮಾತನಾಡಿ. ಕುಂಟುತ್ತಿರುವ ನಿಮ್ಮ ಘನತೆಗೆ ಸರಿಯಾದೀತು ಎಂದು ಕಿಡಿಕಾರಿದ್ದಾರೆ.