ವಿಜಯಪುರ

ಬಿಜೆಪಿಯ ಮುಖವಾಡ ಬಿಚ್ಚಿಟ್ಟ ಭಗವಾನ್ ರೆಡ್ಡಿ, ಉಜ್ವಲ ಯೋಜನೆಯ ಹಕೀಕತ್ ಬಯಲು, ಸಮಾಜವಾದಿ ಕ್ರಾಂತಿಗೆ ಕರೆ….

ವಿಜಯಪುರ: ಉಜ್ವಲ ಯೋಜನೆಯ ಹೆಸರಿನಲ್ಲಿ ಉಚಿತವಾಗಿ ಅಡುಗೆ ಅನಿಲ ನೀಡಿದ ಬಿಜೆಪಿ ಸರ್ಕಾರ ಇದೀಗ ಸಾವಿರ ರೂ.ಗಳಿಗೂ ಅಧಿಕ ದರ ನಿಗದಿಪಡಿಸಿ ಬಡವರ ಹಣ ದೋಚುತ್ತಿದೆ ಎಂದು ಎಸ್‌ಯುಸಿಐ (ಸಿ) ಮುಖಂಡ ಬಿ.ಭಗವಾನ್ ರೆಡ್ಡಿ ಆಕ್ರೋಶ ಹೊರಹಾಕಿದ್ದಾರೆ.
ನಗರದ ಮಹಾತ್ಮ ಬಸವೇಶ್ವರ ವೃತ್ತದಲ್ಲಿ ಸೋಮವಾರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಈಗಾಗಲೇ ತತ್ತರಿಸಿರುವ ಜನಸಾಮಾನ್ಯರಿಗೆ ಕೆಂದ್ರ ಸರ್ಕಾರವು ಮೇಲಿಂದ ಮೇಲೆ ಅಡುಗೆ ಅನಿಲ(ಎಲ್‌ಪಿಜಿ) ದರವನ್ನು ಹೆಚ್ಚಿಸುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ. ಎಲ್‌ಪಿಜಿ ಸಿಲಿಂಡರ್ ಬೆಲೆ ಈಗ ರೂ.50ರಷ್ಟು ಹೆಚ್ಚಿಸಿರುವುದರಿಂದ ಒಂದು ಸಿಲಿಂಡರ್ ಬೆಲೆ ಸಾವಿರದ ಐವತ್ತಕ್ಕೆ ತಲುಪಿದೆ. ಇದು ಬಡ ಹಾಗೂ ಮಧ್ಯಮ ವರ್ಗದವರಿಗೆ ಸಂಕಷ್ಟಕ್ಕೆ ಸಿಲುಕಿಸಿದೆ. ತಿನ್ನುವ ಅನ್ನಕ್ಕೂ ಕೊಕ್ಕೆ ಹಾಕಿದಂತಾಗಿದೆ ಎಂದರು.
ಎಲ್‌ಪಿಜಿ ಸಿಲಿಂಡರ್ ಬೆಲೆ ಈಗ ರೂ.50ರಷ್ಟು ಹೆಚ್ಚಿಸಿರುವುದರಿಂದ ಒಂದು ಸಿಲಿಂಡರ್ ಬೆಲೆ ಸಾವಿರದ ಐವತ್ತಕ್ಕೆ ತಲುಪಿದೆ. ಇದು ಬಡ ಹಾಗೂ ಮಧ್ಯಮ ವರ್ಗದವರಿಗೆ ಸಂಕಷ್ಟಕ್ಕೆ ಸಿಲುಕಿಸಿದೆ. ತಿನ್ನುವ ಅನ್ನಕ್ಕೂ ಕೊಕ್ಕೆ ಹಾಕಿದಂತಾಗಿದೆ ಎಂದರು.
ಈ ದರ ಏರಿಕೆ ಜನಸಾಮಾನ್ಯರ ತಿಂಗಳ ಖರ್ಚಿನ ಬಹುಪಾಲನ್ನು ಹೆಚ್ಚಿಸುತ್ತದೆ. ಉಜ್ವಲ ಯೋಜನೆಯ ಹೆಸರಲ್ಲಿ ಉಚಿತ ಗ್ಯಾಸ್ ಸಿಲಿಂಡರ್ ನೀಡಿದ ಸರ್ಕಾರ ಸಾಂಪ್ರದಾಯಿಕ ಹಾಗೂ ವೆಚ್ಚ ರಹಿತ ಉರುವಲು ಬಳಕೆಯನ್ನು ನಾಶ ಮಾಡಿ, ಅನಿವಾರ್ಯವಾಗಿ ಬಡವರೂ ಅಡುಗೆ ಮಾಡಲು ಎಲ್‌ಪಿಜಿ ಸಿಲಿಂಡರ್ ಬಳಸುವಂತೆ ಮಾಡಲಾಯಿತು. ಆದರೆ ಈಗ ಕರೊನಾ ಹೊಡೆತಕ್ಕೆ ಸಿಲುಕಿ ನರಳುತ್ತಿರುವ ಜನತೆಯ ಮೇಲೆ ಸರ್ಕಾರ ಬೆಲೆ ಏರಿಕೆಯ ಭಾರ ಹೇರುತ್ತಿದೆ. ಬಂಡವಾಳಿಗರ ಸೇವೆ ಮಾಡುವ ನಮ್ಮ ಆಳ್ವಿಕರು, ಅವರ ಲಾಭ ಹೆಚ್ಚಿಸಲು ಜನಸಾಮಾನ್ಯರ ಮೇಲೆ ಹೊರೆ ಹಾಕುತ್ತಿದ್ದಾರೆ ಎಂದರು.
ಕೇಂದ್ರ ಬಿಜೆಪಿ ಸರ್ಕಾರ ಕಳೆದ 7 ವರ್ಷಗಳಲ್ಲಿ ಕಾರ್ಪೋರೇಟ್ ಮನೆತನಗಳ ರೂ.10.7 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಶೇ.33ರಷ್ಟಿದ್ದ ಕಾರ್ಪೋರೇಟ್ ತೆರಿಗೆಯನ್ನು ಶೇ.22ಕ್ಕೆ ಇಳಿಸಿದೆ. ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಬಂಡವಾಳಶಾಹಿ ಪರ ನೀತಿಗಳನ್ನೇ ಬಿಜೆಪಿ ಸರ್ಕಾರ ಇನ್ನಷ್ಟು ವೇಗವಾಗಿ ಮುಂದುವರೆಸುತ್ತಿದೆ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ. ಆದ್ದರಿಂದ ಜನತೆ ಈ ನೀತಿಗಳ ವಿರುದ್ಧ ಸಂಘಟಿತ ಹೋರಾಟಗಳನ್ನು ಬೆಳೆಸುತ್ತಾ, ಬಂಡವಾಳಶಾಹಿ ವ್ಯವಸ್ಥೆಯನ್ನು ಕೊನೆಗೊಳಿಸುವ ಸಮಾಜವಾದಿ ಕ್ರಾಂತಿಗೆ ತಯಾರಾಗಬೇಕು ಎಂದರು.
ಹಿರಿಯ ಹೋರಾಟಗಾರ ಅಪ್ಪಾಸಾಹೇಬ ಯರನಾಳ ಮಾತನಾಡಿ, ಆರ್ಥಿಕ ಹಿಂಜರಿತ, ಕರೋನಾದಿಂದಾಗಿ ಕೋಟ್ಯಂತರ ಜನ ಉದ್ಯೋಗ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಇಂತಹ ಸಂಕಷ್ಟ ಕಾಲದಲ್ಲಿ ಮೂಲಭೂತ ಅವಶ್ಯಕತೆಯಾದ ಎಲ್‌ಪಿಜಿ ದರವನ್ನು ಏರಿಸಿ ಜನಸಾಮಾನ್ಯರು ಅರೆಹೊಟ್ಟೆಯಲ್ಲಿ ಬದುಕುವಂತೆ ಮಾಡ ಹೊರಟಿರುವ ಸರ್ಕಾರದ ಈ ನಿರ್ಧಾರ ನಾಚಿಕೆಗೇಡಿತನದ್ದಾಗಿದೆ. ಇಂತಹ ಸಮಸ್ಯಗಳ ವಿರುದ್ಧ ಜನತೆ ಹೋರಾಟಕ್ಕೆ ಸಜ್ಜಾಗಬೇಕೆಂದರು.
ಹಿರಿಯ ನಾಗರಿಕರಾದ ವಿ.ಎ ಪಾಟೀಲ ಬಣಜಗೇರ ಅವರು ಹೋರಾಟವನ್ನು ಬೆಂಬಲಿಸಿದರು.
ಸದಸ್ಯರಾದ ಸಿದ್ದಲಿಂಗ ಬಾಗೇವಾಡಿ, ಬಾಳು ಜೇವೂರ, ಮಲ್ಲಿಕಾರ್ಜುನ ಎಚ್.ಟಿ, ಕಾವೇರಿ, ದೀಪಾ, ಗೀತಾ ಎಚ್, ಶಿವರಂಜನಿ, ಅನುರಾಗ ಸಾಳುಂಕೆ, ದಸ್ತಗೀರ ಉಕ್ಕಲಿ, ಸುಲೋಚನಾ ತಿವಾರಿ, ಮಹಾದೇವ ಲಿಗಾಡೆ ಮತ್ತಿತರರಿದ್ದರು.

error: Content is protected !!