ದೇವರನ್ನು ನಂಬಲು ಭಯ ಕಾರಣವಾ? ದೇವರ ಬಗ್ಗೆ ಇರಬೇಕಾದದ್ದು ಭಯವಾ ಅಥವಾ ಜ್ಞಾನ ಮತ್ತು ಪ್ರೀತಿಯಾ? ಈ ಲೇಖನ ಓದಿ
ಮನುಷ್ಯ ದೇವರನ್ನು ನಂಬಲು ಕಾರಣ ಭಯ. ಅದು ಅನಾರೋಗ್ಯದ ಭಯ ಇರಬಹುದು, ಸಾವಿನ ಭಯವಾಗಿರಬಹುದು, ಮುಪ್ಪಿನ ಭಯ ಆಗಿರಬಹುದು ಅಥವಾ ಇನ್ನಾವುದೋ ಸಮಸ್ಯೆಗಳ ಇರಬಹುದು. ಕೊನೆಗೆ ದೇವರದ್ದೇ ಭಯವೂ ಆಗಿರಬಹುದು.
ಅಜ್ಞಾನದ ಕಾರಣಕ್ಕಾಗಿ ಮನುಷ್ಯ ಭಯಗೊಳ್ಳುತ್ತಾನೆ. ಆ ಭಯವೇ ದೇವರೆಡೆಗೆ ಮನುಷ್ಯನನ್ನು ಸೆಳೆಯುತ್ತದೆ. ಹಾಗೊಂದು ವೇಳೆ ಮನುಷ್ಯನಿಗೆ ಸಮಸ್ಯೆಗಳೇ ಇಲ್ಲವಾಗಿದ್ದಲ್ಲಿ ದೇವರ ಬಗ್ಗೆ ನಂಬುವ, ಪ್ರಾರ್ಥಿಸುವ, ಪೂಜಿಸುವ ಪ್ರಮೇಯವೇ ಇರುತ್ತಿರಲಿಲ್ಲ ಅಲ್ಲವೇ?
ನಮ್ಮ ಎಲ್ಲ ಕಷ್ಟಗಳಿಗೆ ದೇವರ ಶಾಪವೇ ಕಾರಣ ಮತ್ತು ನಮ್ಮ ಎಲ್ಲ ಒಳಿತಿಗೆ ದೇವರ ದಯೆ ಮತ್ತು ಆಶೀರ್ವಾದವೇ ಕಾರಣ ಎಂಬುದು ಬಹುತೇಕರ ನಂಬಿಕೆ. ಆದರೆ ನಿನ್ನ ಒಳಿತು- ಕೆಡಕು ಕಟ್ಟಿಕೊಂಡು ದೇವರಿಗೆ ಆಗಬೇಕಿರುವುದು ಏನಿದೆ? ನೀನು ಮಾಡುವ ಕೆಲಸ ಕಾರ್ಯಗಳಿಗೇ ನಿನಗೆ ಒಳಿತು ಮತ್ತು ಕೆಡಕಿನ ಫಲ ನೀಡುತ್ತವೆ. ಒಳಿತು ಮಾಡಿದರೆ ಒಳಿತಿನ ಫಲ. ಕೆಡಕು ಮಾಡಿದರೆ ಕೆಡಕಿನ ಫಲ.
ಭಯದ ಕಾರಣದಿಂದ ದೇವರನ್ನು ಪ್ರಾರ್ಥಿಸಿದರೆ ಅದು ಗುಲಾಮಿತನವಲ್ಲದೆ ಬೇರೇನೂ ಅಲ್ಲ. ಸಾಮಾನ್ಯವಾಗಿ ಕಷ್ಟಗಳು ಬಂದಾಗ ದೇವರೇ ಕಾಪಾಡು ನಾನು ನಿನಗೆ ಅದು ಮಾಡುತ್ತೇನೆ….ಇದು ಮಾಡುತ್ತೇನೆ…ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆಂದು ಲಂಚದ ಆಮಿಷ ಒಡ್ಡುತ್ತೇವೆ. ಆದರೆ ಅದೆಲ್ಲವೂ ಕ್ಷಣಿಕ ಮತ್ತು ನಮ್ಮ ಮನಸ್ಸಿನ ನೆಮ್ಮದಿಗಾಗಿ ಮಾತ್ರ. ಇನ್ನು ದೇವರು ಶಿಕ್ಷೆ ಕೊಡುತ್ತಾನೆ, ಶಾಪ ಕೊಡುತ್ತಾನೆಂಬುದು ಕೇವಲ ಭ್ರಮೆ.
ಮುಲ್ಲಾ ನಸ್ರುದ್ದೀನ ಬಳಿ ಒಂದು ಸುಂದರ ಅರಮನೆ ಇತ್ತಂತೆ. ಒಬ್ಬ ರಾಜ ಅದನ್ನು ಕೊಳ್ಳಲು ಕೇಳಿದಾಗ ನಸ್ರುದ್ದೀನ ಅರಮನೆ ಮಾರಲು ನಿರಾಕರಿಸಿದ್ದನಂತೆ. ಹೀಗೆ ಒಂದು ದಿನ ನಸ್ರುದ್ದೀನ ದೋಣಿಯಲ್ಲಿ ನದಿ ದಾಟುತ್ತಿರಬೇಕಾದರೆ ಜೋರಾದ ಗಾಳಿ ಬೀಸತೊಡಗಿತು. ದೋಣಿ ಅಲ್ಲಾಡಿದಾಗ ಜೀವ ಭಯದಿಂದ ನಸ್ರುದ್ದೀನ ದೇವರಿಗೆ ಪ್ರಾರ್ಥಿಸಿದನಂತೆ. ದೇವರೇ ಕಾಪಾಡು ನನ್ನ ಅರಮನೆ ಮಾರಿ ಅದರಿಂದ ಬಂದ ಹಣ ಭಿಕ್ಷುಕನಿಗೆ ದಾನ ಮಾಡುತ್ತೇನೆ ಎಂದು ಬೇಡಿಕೊಂಡನಂತೆ.
ಕೆಲ ಸಮಯದ ಬಳಿಕ ಗಾಳಿ ಕಡಿಮೆಯಾಯಿತು. ದೋಣಿ ಅಲ್ಲಾಡುವುದು ನಿಂತಿತು. ಭಯ ದೂರವಾಯಿತು. ಆಗ ನಸ್ರುದ್ದೀನ ಮನಸ್ಸು ಯೋಚಿಸತೊಡಗಿತು. ನಾನೇಕ ಅರಮನೆ ಮಾರಿ ಭಿಕ್ಷುಕನಿಗೆ ಹಣ ಕೊಡಬೇಕು ಎಂದು.
ಸ್ವಲ್ಪ ಸಮಯದ ಬಳಿಕ ಮತ್ತೆ ಗಾಳಿ ಜೋರಾಯಿತು. ಆಗ ನಸ್ರುದ್ದೀನ ದೇವರನ್ನುದ್ದೇಶಿಸಿ ದೇವರೇ ಖಂಡಿತ ನಾನು ಮನಸ್ಸು ಬದಲಾಯಿಸುವುದಿಲ್ಲ. ನಿನಗೆ ಮಾತು ಕೊಟ್ಟಂತೆ ಅರಮನೆ ಮಾರಿ ಅದರಿಂದ ಬಂದ ಹಣವನ್ನು ಭಿಕ್ಷುಕನಿಗೆ ದಾನ ಮಾಡುತ್ತೇನೆ ಎನ್ನುತ್ತಾನೆ.
ಕೊನೆಗೆ ಸುಗಮವಾಗಿ ನದಿ ದಾಟಿ ಅರಮನೆಗೆ ಬರುವ ನಸ್ರುದ್ದೀನ ಮರುದಿನ ವೇ ಅರಮನೆ ಮಾರಾಟ ಮಾಡಲು ಡಂಗುರ ಸಾರಿದನಂತೆ.
ಆದರೆ ವಿಚಿತ್ರವಾದ ನಿಯಮ ಹಾಕುತ್ತಾನೆ. ಅರಮನೆ ಪಕ್ಕದಲ್ಲಿ ಒಂದು ಬೆಕ್ಕು ಕಟ್ಟಿ ಬೆಕ್ಕು ಮತ್ತು ಅರಮನೆ ಎರಡನ್ನೂ ಒಟ್ಟಿಗೆ ಖರೀದಿಸಬೇಕು. ಬೆಕ್ಕಿಗೆ ಹತ್ತು ಲಕ್ಷ ರೂಪಾಯಿ ಮತ್ತು ಅರಮನೆಗೆ ಕೇವಲ ಒಂದಯ ರೂಪಾಯಿ ಎಂದು ಘೋಷಿಸಿದನಂತೆ.
ಕೊನೆಗೆ ರಾಜ ಅರಮನೆ ಖರೀದಿಸುತ್ತಾನೆ. ಬೆಕ್ಕಿನ ಮಾರಾಟದಿಂದ ಬಂದ ಹತ್ತು ಲಕ್ಷ ರೂಪಾಯಿ ತಾನಿಟ್ಟುಕೊಳ್ಳುವ ನಸ್ರುದ್ದೀನ ಅರಮನೆ ಮಾರಿ ಬಂದ ಹಣವಾದ ಒಂದು ರೂಪಾಯಿ ಭಿಕ್ಷುಕನಿಗೆ ನೀಡಿ ದೇವರೆ ನಿನ್ನ ಹರಕೆ ತೀರಿಸಿದ್ದೇನೆ ನೋಡು ಎಂದನಂತೆ.
ಬಹುತೇಕ ನಮ್ಮಲ್ಲೂ ಕೂಡ ದೇವರ ಬಗೆಗಿರುವ ನಂಬಿಕೆ, ಭಯ ಇಂಥದ್ದೇ ಆಗಿರುತ್ತವೆ. ದೇವರು ನಮಗೆ ಏನಾದರೂ ಕೊಡುತ್ತಾನೆಂದು ಪೂಜಿಸುತ್ತೇವೆ. ಅಪಾಯ ಬಂದಾಗ ಆಸೆ- ಆಮಿಷ ತೋರಿಸುತ್ತೇವೆ. ಒಂದು ವೇಳೆ ದೇವರು ನಮಗೆ ಏನೂ ಕೊಡುವುದಿಲ್ಲ ಮತ್ತು ಯಾವ ಅಪಾಯದಿಂದ ಪಾರು ಮಾಡಲ್ಲ ಎಂಬ ಸತ್ಯದ ಅರಿವಾದರೆ ಯಾರೊಬ್ಬರೂ ದೇವಸ್ಥಾನ ಕ್ಕೆ ಹೋಗಲಿಕ್ಕಿಲ್ಲ ಅಲ್ಲವೇ?
ದೇವರ ಬಗೆಗೆ ಮನುಷ್ಯನಿಗೆ ಇರಬೇಕಾದದ್ದು ಭಯ ಅಲ್ಲ. ಪ್ರೀತಿ ಮತ್ತು ನಿಜವಾದ ತಿಳಿವಳಿಕೆ. ಏನಂತೀರಾ?