ರಾಜ್ಯ

ಪಂಚಮಸಾಲಿ 2ಎ ಮೀಸಲು ಹೋರಾಟ ಮತ್ತೆ ಚುರುಕು, ಕಾನೂನಾತ್ಮಕ ಹೋರಾಟಕ್ಕೆ ಅಣಿ, ಏನಿದು ಹೊಸ ಪ್ಲಾೃನ್ ಗೊತ್ತಾ?

ವಿಜಯಪುರ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಮತ್ತು ಲಿಂಗಾಯತ ಉಪ ಸಮಾಜಗಳನ್ನು ಹಿಂದುಳಿದ ವರ್ಗಗಳ ಪಟ್ಟಿಗೆ (ಒಬಿಸಿ) ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ನಿರಂತರ ಹೋರಾಟ ಹಮ್ಮಿಕೊಂಡು ಬಂದಿರುವ ಸಮುದಾಯದ ಮುಖಂಡರು ಇದೀಗ ಕಾನೂನಾತ್ಮಕ ಹೋರಾಟಕ್ಕೆ ಸಜ್ಜಾಗಿದ್ದಾರೆ.
ವಿವಿಧ ಹಂತಗಳಲ್ಲಿ ಹೋರಾಟ ನಡೆಸಿದರೂ ಸರ್ಕಾರ ಮಾತ್ರ ಬೇಡಿಕೆ ಈಡೇರಿಸಿಲ್ಲ. ಹೀಗಾಗಿ ಈ ಬಾರಿ ಕಾನೂನು ಮೂಲಕವೇ ಬೇಡಿಕೆ ಈಡೇರಿಸಿಕೊಳ್ಳಲು ಸಜ್ಜಾಗಿದ್ದು, ತನ್ನಿಮಿತ್ತ ಬೆಳಗಾವಿಯ ಗಾಂಧಿ ಭವನದಲ್ಲಿ ಸೆ.22ರಂದು ಬೆಳಗ್ಗೆ 10 ಸಮಾಜದ ವಕೀಲರ ಪರಿಷತ್ತಿನ ಪ್ರಥಮ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಪಂಚಮಸಾಲಿ, ಮಲೆಗೌಡ, ಲಿಂಗಾಯತ ಗೌಡ, ದೀಕ್ಷಾ ಲಿಂಗಾಯತರ ಮಕ್ಕಳ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ 2ಎ ಮೀಸಲಾತಿ ಕೊಡಬೇಕು. ಲಿಂಗಾಯತ ಉಪಸಮಾಜಗಳನ್ನು ಒಬಿಸಿ ಪಟ್ಟಿಗೆ ಸೇರಿಸಬೇಕು ಎಂದು ಕಳೆದ ಮೂರೂವರೆ ವರ್ಷಗಳಿಂದ ನಿರಂತರವಾಗಿ ಹೋರಾಟ ಹಮ್ಮಿಕೊಂಡು ಬರಲಾಗಿದೆ. ಆದರೆ, ಸರ್ಕಾರಗಳು ಸಮಾಜದ ಬೇಡಿಕೆಯನ್ನು ಕಡೆಗಣಿಸುತ್ತಿವೆ. ಆದ್ದರಿಂದ ಈಗ ಏಳನೇ ಹಂತದ ಹೋರಾಟವನ್ನು ಲಿಂಗಾಯತ ಪಂಚಮಸಾಲಿ ವಕೀಲರ ಪರಿಷತ್ತಿನ ಮೂಲಕ ಕಾನೂನಾತ್ಮಕವಾಗಿ ನಡೆಸಲು ಸಜ್ಜಾಗಿರುವುದಾಗಿ ಮಂಗಳವಾರ ರಾಣಿ ಚನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳ ಪಂಚಮಸಾಲಿ ವಕೀಲರನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ಇದಾಗಿದೆ. ಇದರ ಪ್ರಥಮ ಸಭೆಯನ್ನು ಬೆಳಗಾವಿಯಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜ ಟ್ರಸ್ಟ್, ಪಂಚಮಸಾಲಿ ಮಹಾಸಭಾ, ಪಂಚಸೇನೆ, ಚನ್ನಮ್ಮ ಬಳಗ ಹಾಗೂ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ. ಅಂದು ಸಭೆಯ ಬಳಿಕ ಒಂದು ಗಂಟೆ ಕಾಲ ನಗರದ ರಾಣಿ ಚನ್ನಮ್ಮನ ವೃತ್ತದಲ್ಲಿ ಧರಣಿ ನಡೆಸಲಾಗುವುದು ಎಂದರು.
ಕಳೆದ ಅಧಿವೇಶನದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಲಕ್ಷ್ಮಿ ಹೆಬ್ಬಾಳ್ಕರ್, ಸಿದ್ದು ಸವದಿ ಸೇರಿದಂತೆ ಸಮಾಜದ ಸುಮಾರು 23 ಶಾಸಕರು ಧ್ವನಿ ಎತ್ತಿದ್ದರು. ನಾವು ಕೂಡ ಪಕ್ಷಾತೀತವಾಗಿ ಸಮಾಜದ ಎಲ್ಲ ಶಾಸಕರು, ಸಚಿವರಿಗೆ ಮನವಿ ಮಾಡಿದ್ದೇವೆ. ಆದರೆ, 9 ದಿನಗಳ ಅಧಿವೇಶನದಲ್ಲಿ ನಮ್ಮ ಶಾಸಕರಿಗೆ ಮಾತನಾಡಲು ಸ್ಪೀಕರ್ ಅವಕಾಶ ನೀಡಲಿಲ್ಲ. ಶಾಸಕರ ಧ್ವನಿಯನ್ನು ಅಡಗಿಸುವ ಪ್ರಯತ್ನ ನಡೆಯಿತು. ಹೀಗಾಗಿ ಸ್ಪೀಕರ್ ವಿರುದ್ದ ರಾಜ್ಯಪಾಲರಿಗೆ ಪತ್ರ ಬರೆದಿದ್ದೇವೆ. ಆದರೆ, ಸ್ಪೀಕರ್ ನಡೆಯನ್ನು ನಮ್ಮ ಶಾಸಕರು ಖಂಡಿಸುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ವಕೀಲರ ಮೂಲಕ ಸರ್ಕಾರದ ಮೇಲೆ ಕಾನೂನಾತ್ಮಕವಾಗಿಯೇ ಒತ್ತಡ ಹೇರುವ ನಿರ್ಧಾರಕ್ಕೆ ಬಂದಿದ್ದೇವೆ. ಸಿದ್ದರಾಮಯ್ಯನವರು ಸಹ ವಕೀಲರು ಆಗಿರುವುದರಿಂದ ವಕೀಲರ ಹೋರಾಟಕ್ಕೆ ಮನ್ನಣೆ ನೀಡುತ್ತಾರೆಂಬ ವಿಶ್ವಾಸ ಇದೆ ಎಂದರು.
ಒಂದು ವೇಳೆ ವಕೀಲರ ಮನವಿಗೂ ಸರ್ಕಾರ ಸ್ಪಂದಿಸದ್ದರೆ, ಮುಂಬರುವ ಡಿಸೆಂಬರ್‌ನಲ್ಲಿ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಮತ್ತೆ ಹೋರಾಟ ರೂಪಿಸುತ್ತೇವೆ ಎಂದು ಅವರು ತಿಳಿಸಿದರು. ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಿ.ಎಂ. ಪಾಟೀಲ (ದೇವರ ಹಿಪ್ಪರಗಿ), ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಈರಣ್ಣ ಚಾಗಶೆಟ್ಟಿ, ನ್ಯಾಯವಾದಿಗಳಾದ ಶ್ರೀಶೈಲ ಮುಳಜಿ, ಬಿ.ಎಂ. ಪೊಲೀಸ್‌ಪಾಟೀಲ, ಜಿಲ್ಲಾ ಪಂಚಮಸಾಲಿ ಸಮಾಜದ ಕಾರ್ಯದರ್ಶಿ ನಿಂಗನಗೌಡ ಸೊಲ್ಲಾಪುರ, ನಗರ ಘಟಕ ಅಧ್ಯಕ್ಷ ಶ್ರೀಶೈಲ ಬುಕ್ಕಣ್ಣಿ, ವಕ್ತಾರ ದಾನೇಶ ಅವಟಿ ಮತ್ತಿತರರಿದ್ದರು.

error: Content is protected !!