ತಂದೆ ಇಲ್ಲದ ಮಕ್ಕಳಿಗೆ ಸ್ಕಾಲರ್‌ಶಿಪ್ ಸೌಲಭ್ಯ ಇಲ್ಲ, ಮಕ್ಕಳ ರಕ್ಷಣಾಧಿಕಾರಿ ಸ್ಪಷ್ಟನೆ, ಸಾಮಾಜಿಕ ಜಾಲತಾಣದಲ್ಲಿ ಬರುವ ಸಂದೇಶ ನಂಬಿ ಮೋಸ ಹೋಗದಿರಿ
ಸರಕಾರ ನ್ಯೂಸ್ ವಿಜಯಪುರ
ತಂದೆಯಿಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 24,000 ರೂ. ಸ್ಕಾಲರ್‌ಶಿಪ್ ಸೌಲಭ್ಯವಿದ್ದು ಕೂಡಲೇ ಅರ್ಜಿ ಸಲ್ಲಿಸಿ ಎಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶ ನಂಬಿ ಅನೇಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದು ಮತ್ತು ಫೋನ್ ಮಾಡಿ ವಿಚಾರಿಸುವುದು ಮಾಡುತ್ತಿದ್ದಾರೆ. ಆದರೆ, ಇಂಥ ಯಾವುದೇ ಯೋಜನೆ ಇಲ್ಲ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ತಿಳಿಸಿದ್ದಾರೆ.
ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಇಂಥ ಸಂದೇಶ ವ್ಯಾಪಕವಾಗಿ ಹರಿದಾಡುತ್ತಿದೆ. ತಂದೆಯಿಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ 24,000 ರೂ. ಸ್ಕಾಲರ್‌ಶಿಪ್ ಸೌಲಭ್ಯ ಇರುವುದು ಜನಸಾಮಾನ್ಯರಿಗೆ ತಿಳಿದೇ ಇಲ್ಲ. ಆದ್ದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ ಎಂಬ ಸಂದೇಶ ಆಧರಿಸಿ ಅನೇಕರು ಸರ್ಕಾರಿ ಕಚೇರಿಗಳಿಗೆ ಬಂದು ವಿಚಾರಿಸುತ್ತಿದ್ದಾರೆ.
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮಕ್ಕಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ ಸೇರಿ ವಿವಿಧ ಇಲಾಖೆಗಳಿಗೆ ಭೇಟಿ ನೀಡಿ ವಿಚಾರಿಸುತ್ತಿದ್ದಾರಲ್ಲದೇ ಅನೇಕರು ಫೋನ್ ಮಾಡುತ್ತಿದ್ದಾರೆ. ಆದ್ದರಿಂದ, ಸಾರ್ವಜನಿಕರು ಇಂತಹ ಸಂದೇಶಗಳಿಗೆ ಮೋಸ ಹೋಗಬಾರದು ಎಂದು ಅವರು ತಿಳಿಸಿದ್ದಾರೆ.
ಇರುವುದು ಪ್ರಾಯೋಜಕತ್ವ ಯೋಜನೆ:
ಮಕ್ಕಳನ್ನು ಕುಟುಂಬದ ವಾತಾವರಣದಲ್ಲಿ ಬೆಳೆಯುವಂತೆ ಬೆಂಬಲ ನೀಡುವುದು ಪ್ರಾಯೋಜಕತ್ವ ಯೋಜನೆ ಮುಖ್ಯ ಉದ್ಧೇಶವಾಗಿದೆ. ಈ ಯೋಜನೆಯ ಮಾನದಂಡಗಳಂತೆ ಬಾಲಮಂದಿರ, ವೀಕ್ಷಣಾಲಯಗಳಿಂದ ಕುಟುಂಬಗಳಿಗೆ ಮರಳಿದ ಮಕ್ಕಳು, ಪೋಕ್ಸೊ ಸಂಸತ್ರಸ್ತ ಮಕ್ಕಳು, ತಾಯಿ ವಿಧವೆ ಅಥವಾ ವಿಚ್ಛೇದಿತ ಅಥವಾ ಪರಿತ್ಯಕ್ತಳಾಗಿದ್ದರೆ, ಮಕ್ಕಳು ಅನಾಥರಾಗಿದ್ದರೆ ಮತ್ತು ವಿಸ್ತೃತ ಕುಟುಂಬದಿಮದ ಜೀವಿಸುತ್ತಿದ್ದರೆ, ಪೋಷಕರು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಲ್ಲಿ, ತಮ್ಮ ಮಕ್ಕಳನ್ನು ಪೋಷಕರು ನೋಡಿಕೊಳ್ಳಲು ದೈಹಿಕವಾಗಿ ಹಾಗೂ ಆರ್ಥಿಕವಾಗಿ ಅಸಮರ್ಥರಾಗಿದ್ದರೆ, ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ಪೋಷಣೆ) ಕಾಯ್ದೆ 2015ರ ಪ್ರಕಾರ ಪಾಲನೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳು ಅಂದರೆ ಮನೆ ಇಲ್ಲದೇ, ನೈಸರ್ಗಿಕ ವಿಕೋಪಕ್ಕೆ ಒಳಗಾದವರು, ಬಾಲಕಾರ್ಮಿಕರು, ಬಾಲ್ಯವಿವಾಹ ಸಂತ್ರಸ್ತ ಮಕ್ಕಳು, ಕಳ್ಳ ಸಾಗಾಣೆಗೊಳಗಾದ ಮಕ್ಕಳು, ಎಚ್‌ಐವಿ, ಏಡ್ಸ್ ಬಾಧಿತ (ಪೀಡಿತ) ಮಕ್ಕಳು, ದೈಹಿಕ ಅಂಗವಿಕಲತೆಯುಳ್ಳ ಮಕ್ಕಳು, ಕಾಣೆಯಾದ ಅಥವಾ ಓಡಿಹೋದ ಮಕ್ಕಳು, ಬಾಲ ಭಿಕ್ಷುಕರು ಅಥವಾ ಬೀದಿಬದಿ ಮಕ್ಕಳು, ಚಿತ್ರಹಿಂಸೆ ಅಥವಾ ನಿಂದನೆ ಅಥವಾ ಬೆಂಬಲ ಮತ್ತು ಪುನರ್ವಸತಿ ಅಗತ್ಯವಿರುವ ಶೋಷಿತ ಮಕ್ಕಳು, ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯ ಅನುಮೋದಿತ ಮಕ್ಕಳು ಸಹ ಈ ಪ್ರಾಯೋಜಕತ್ವ ಯೋಜನೆಗೆ ಅರ್ಹರಾಗಿದ್ದಾರೆ.
ಈ ಯೋಜನೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಾಲಯ, ವಿವೇಕ ನಗರ ಪಶ್ಚಿಮ, ವಿಜಯಪುರ ಇವರನ್ನು ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ತಿಳಿಸಿದ್ದಾರೆ.