ಸಿಂದಗಿಯ ಬಂದಾಳದಲ್ಲಿ ಗಾಳಿಯಲ್ಲಿ ಗುಂಡು, ಎಫ್ ಐಆರ್ ದಾಖಲು
ವಿಜಯಪುರ: ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿದ ವ್ಯಕ್ತಿಯ ಮೇಲೆ ಪೊಲೀಸರು ದೂರು ದಾಖಲಿಸಿದ್ದಾರೆ. ಸಿಂದಗಿ ತಾಲೂಕಿನ ಬಂದಾಳ ಗ್ರಾಮದ ಪ್ರಶಾಂತ ಬಿರಾದಾರ ಮೇಲೆ ಪ್ರಕರಣ ದಾಖಲಾಗಿದೆ .ಸೆ. 14 ರಂದು ಬಂದಾಳ ಗ್ರಾಮದಲ್ಲಿ ಗಣೇಶ ವಿಸರ್ಜನೆ ಸಂದರ್ಭ ಮುದುಕಪ್ಪ ಮಾದರ ಎಂಬಾತನಿಂದ ಪಿಸ್ತೂಲ್ ಪಡೆಯುವ ಪ್ರಶಾಂತ ಗಾಳಿಯಲ್ಲಿ ಗುಂಡು ಹಾರಿಸುತ್ತಾನೆ. ಬಳಿಕ ಮುದುಕಪ್ಪಗೆ ಹಸ್ತಾಂತರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ವಿಡಿಯೋ ಆಧರಿಸಿ ಸತ್ಯಾಸತ್ಯತೆ ಪರಿಶೀಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಸ್ತೂಲ್ ಪರವಾನಿಗೆಯುಕ್ತವಾಗಿದ್ದು, ಜೀವಂತ ಗುಂಡು ಮತ್ತು ಪಿಸ್ತೂಲ್ ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.