ನಮ್ಮ ವಿಜಯಪುರ

ಪೊಲೀಸ್‌ರ ವೇಷದಲ್ಲಿ ವ್ಯಾಪಾರಿಯ ವಂಚನೆಗೆ ಯತ್ನ, ಹುಷಾರ್ ನಿಮಗೂ ಬರಬಹುದು ಇಂಥ ವಿಡಿಯೋ ಕಾಲ್ !

ಸರಕಾರ ನ್ಯೂಸ್ ವಿಜಯಪುರ

ಮೊಬೈಲ್ ಬಂದಾಗಿನಿಂದ, ಆನ್‌ಲೈನ್ ವಹಿವಾಟು ಆರಂಭಗೊಂಡಾಗನಿಂದ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಲೇ ಇದ್ದು, ಜನ ಒಂದಿಲ್ಲಾ ಒಂದು ಕಾರಣಕ್ಕೆ ಮರುಳಾಗುತ್ತಲೇ ಇದ್ದಾರೆ. ಮರಳು ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ.

ಅಂತೆಯೇ ಪೊಲೀಸರ ವೇಷ ಧರಿಸಿ ವಿಡಿಯೋ ಕಾಲ್ ಮೂಲಕ ವ್ಯಾಪಾರಿಯೊಬ್ಬನಿಗೆ ವಂಚನೆ ಮಾಡಲೆತ್ನಿಸಿದ ಆತಂಕ ಭರಿತ ಪ್ರಕರಣ ಬೆಳಕಿಗೆ ಬಂದಿದೆ. ವಿಜಯಪುರದ ರಹೀಂ ನಗರದ ನಿವಾಸಿ ಸಂತೋಷ ಸುಭಾಸ ಚೌಧರಿ ಪಾಟೀಲ ಎಂಬುವರಿಗೆ ಪೊಲೀಸರ ಹೆಸರಲ್ಲಿ ವಂಚನೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಸಂತೋಷ ಯಾವುದೇ ರೀತಿಯಲ್ಲಿ ಹಣ ಕಳೆದುಕೊಂಡಿಲ್ಲ.

ಪೊಲೀಸ್ ವೇಷಧಾರಿ ವಂಚಕನೊಂದಿಗೆ ಸಂತೋಷ ಮಾತನಾಡುತ್ತಿರುವುದು.

ಆರಂಭದಲ್ಲಿ ವಂಚಕರು ಬೀಸಿದ ಬಲೆಗೆ ಯಾಮಾರಿ ಸಂಪೂರ್ಣ ಸಹಕರಿಸಿದ್ದ ಸಂತೋಷ ಬಳಿಕ ಕೂಡಲೇ ಎಚ್ಚೆತ್ತುಕೊಂಡು ಅವರಿಂದ ಸಂಪರ್ಕ ಕಡಿದುಕೊಂಡಿದ್ದಾರೆ.

ಸೆ.15ರಂದು ಮಧ್ಯಾಹ್ನ ಸಂತೋಷಗೆ ಫೋನ್‌ಕಾಲ್ ಬಂದಿದೆ. ನಿಮ್ಮ ಹೆಸರಲ್ಲಿ ಸಿಮ್ ಕಾರ್ಡ್ ಖರೀದಿಯಾಗಿದ್ದು ಅದರಿಂದ ಮುಂಬೈ ಜನರಿಗೆ ಅಶ್ಲೀಲ ಸಂದೇಶಗಳು ಬರುತ್ತಿವೆ. ಈಗಾಗಲೇ ಆ ನಂಬರ್ ಮೇಲೆ 17 ಪ್ರಕರಣ ದಾಖಲಾಗಿವೆ ಎಂದಿದ್ದಾರೆ. ಆದರೆ, ಸಂತೋಷ ಅಂಥ ಯಾವುದೇ ತಮ್ಮ ಬಳಿ ನಂಬರ್ ಇಲ್ಲವೆಂದರೂ ಕೇಳದೇ ವಿಚಾರಣೆ ಹೆಸರಲ್ಲಿ ಹಣಪೀಕಲೆತ್ನಿಸಿದ್ದಾರೆ.

ವಿಡಿಯೋ ಕಾಲ್ ಮಾಡಿ ಲೈವ್‌ನಲ್ಲಿಯೇ ಹಿಡಿದಿಟ್ಟು ಆತನ ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ವಿವರ ಕಲೆ ಹಾಕುವ ಪ್ರಯತ್ನ ಮಾಡಿದ್ದಾರೆ. ಆದರೆ, ಎಚ್ಚೆತ್ತುಕೊಂಡ ಸಂತೋಷ ಫೋನ್ ಕಟ್ ಮಾಡಿ ವಿಜಯಪುರ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ವಿಜಯಪುರ ಸೈಬರ್ ಪೊಲೀಸರು ಸಿಪಿಐ ರಮೇಶ ಅವಜಿ ನೇತೃತ್ವದಲ್ಲಿ ತಂಡ ಕಟ್ಟಿಕೊಂಡು ಎಸ್‌ಪಿ ಋಷಿಕೇಶ ಸೋನಾವಣೆ ಮತ್ತು ಎಎಸ್‌ಪಿ, ಡಿವೈಎಸ್‌ಪಿ ಮಾರ್ಗದರ್ಶನದಲ್ಲಿ ವಂಚಕರ ಬೇಟೆಗೆ ಸಜ್ಜಾಗಿದ್ದಾರೆ.
ಸಾರ್ವಜನಿಕರು ಇಂಥ ಯಾವುದೇ ಕರೆಗಳು ಬಂದಲ್ಲಿ ಕೂಡಲೇ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಪೊಲೀಸ್ ಕಂಟ್ರೋಲ್ ರೂಮ್‌ಗೆ ತಿಳಿಸಬೇಕು ಎಂದು ಎಸ್‌ಪಿ ಋಷಿಕೇಶ ಸೋನಾವಣೆ ಸಾರ್ವಜನಿಕರಿಗೆ ಎಚ್ಚರಿಸಿದ್ದಾರೆ.

error: Content is protected !!