ಆಧ್ಯಾತ್ಮಿಕ

ದೇವರೆಂದರೆ ಯಾರು? ಈ ಬಗ್ಗೆ ಸಿದ್ದೇಶ್ವರ ಶ್ರೀಗಳು ಕೊಟ್ಟ ಉತ್ತರ ಏನು ಗೊತ್ತೇ?

ದೇವರು ಎಂದರೆ ಯಾರು? ಆತ ಹೇಗಿದ್ದಾನೆ? ಎಲ್ಲಿದ್ದಾನೆ? ಆತನ ಕೆಲಸ ಏನು? ನಿಜಕ್ಕೂ ಇದ್ದಾನಾ ಅಥವಾ ಇಲ್ಲವಾ? ಇಂಥ ಅನೇಕ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಕಂಡುಕೊಳ್ಳಲಾಗದೆ ಎಡವಿಡಂಗಿಗಳಂತೆ ವರ್ತಿಸುವವರೇ ಹೆಚ್ಚು.

ದೇವರು ಇದ್ದಾನಾ? ಅಥವಾ ಇಲ್ಲವಾ? ಎಂಬುದಕ್ಕೆ ಬಹಳಷ್ಟು ಜನ ಕೊಟ್ಟ ಉತ್ತರ ಅಸಂಬದ್ಧ ಮತ್ತು ಅಸ್ಪಷ್ಟ. ಹೀಗಾಗಿ ಕೆಲವರು ಶಾಸ್ತ್ರ ಗಳು ಹೇಳಿವೆ ಎಂತಲೋ…..ಹಿರಿಯರು ಹೇಳಿರುವರೆಂತಲೋ…..ಹಿಂದಿನಿಂದ ನಂಬಿಕೊಂಡು ಬಂದ ಪದ್ದತಿ ಎಂತಲೋ ತಲೆ ತಲಾಂತರದಿಂದ ಕೆಲವು ನಂಬಿಕೆ, ಆಚರಣೆ ಹಾಗೂ ಸಂಪ್ರದಾಯಗಳನ್ನು ಮುಂದುವರಿಸಿಕೊಂಡೇ ಬಂದಿದ್ದಾರೆ. ಅದೊಂದು ಬಳುವಳಿ ಎಂಬಂತೆ ಮುಂದಿನ ಪೀಳಿಗೆಗೂ ಬಿಟ್ಟು ಹೋಗುತ್ತಿದ್ದಾರೆ.

ಆದರೆ, ದೇವರ ಬಗ್ಗೆ ತಿಳಿದುಕೊಂಡು, ಅರಿತು- ಅನುಭವಿಸಿ ಕಂಡುಕೊಂಡ ಸತ್ಯ ಹೇಳುವವರು ಕೆಲವೇ ಕೆಲವು ಮಹಾತ್ಮರು. ಆ ಪೈಕಿ ನಡೆದಾಡುವ ದೇವರೆಂದೇ ಖ್ಯಾತಿ ಪಡೆದು ಅಮೂಲ್ಯ ಆಧ್ಯಾತ್ಮಿಕ ಸಂಪತ್ತನ್ನು ಹಂಚಿ ಹೋದವರು ಸಿದ್ದೇಶ್ವರ ಶ್ರೀಗಳು.

ದೇವರ ಕುರಿತು ಅವರು ತಮ್ಮ ಪ್ರವಚನವೊಂದರಲ್ಲಿ ಹೀಗೆ ಉಲ್ಲೇಖಿಸುತ್ತಾರೆ- ಈ ಜಗತ್ತಿನಲ್ಲಿ ನಿಜವಾಗಿ ಮನುಷ್ಯನ ಹಿತೈಷಿಗಳೆಂದರೆ ಮಣ್ಣು, ಗಾಳಿ, ಬೆಳಕು, ನೀರು, ಬಯಲು. ಇಂಥ ಕರುಣಾಳು ನಿಸರ್ಗ ದೇವತೆಯು ದೇವರಲ್ಲವೇ? ಇದನ್ನರಿಯದೇ ನಾವು ದೇವರನ್ನು ಎಲ್ಲೆಲ್ಲೋ ಹುಡುಕುತ್ತೇವೆ. ದೇವರೆಂದರೆ- ನಾವು ಯಾವುದರಿಂದ ಬದುಕಿದ್ದೇವೋ….ಯಾವುದು ನಮ್ಮನ್ನು ಬದುಕಿಸಿದೆಯೋ ಅದೇ ದೇವರು. ಹಾಗಾದರೆ ಗಾಳಿ, ಬೆಳಕು, ನೀರು, ಭೂಮಿ, ಆಕಾಶ ಎಂಬ ಪಂಚ ಮಹಾಭೂತಗಳಿಂದಲೇ ಅಲ್ಲವೇ ಮನುಷ್ಯ ಬದುಕಿದ್ದು‌? ಹಾಗಾದರೆ ದೇವರೆಂದರೆ ಪಂಚ‌ ಮಹಾಭೂತಳೇ ಎಂದು ಅನ್ನಿಸಿಲ್ಲವೇಕೆ? ಅವುಗಳನ್ನು ನಾವು ಸಹ ರಕ್ಷಿಸಬೇಕಲ್ಲವೇ? ಈ ಪಂಚ ಮಹಾಭೂತಗಳು ಇಲ್ಲದೇ ಹೋದಲ್ಲಿ ಯಾವ ದೇವರು ತಾನೆ ನಮ್ಮನ್ನು ಬದುಕಿಸಬಲ್ಲ? ಹೀಗಾಗಿ ಯಾವುದರಿಂದ ನಾವು ಬದುಕಿದ್ದೇವೆಯೋ ಅವುಗಳಿಗೆ ಕೃತಜ್ಞರಾಗಿ ಇರಬೇಕಾದುದು ಮನುಷ್ಯನ ಧರ್ಮ. ಈ ಧರ್ಮ ಎಂದರೆ ಬೇರೇನೂ ಅಲ್ಲ. ನಮ್ಮ ಜೀವಿತಕ್ಕೆ ಕಾರಣರಾದವರನ್ನು ಸ್ಮರಿಸುವುದು, ಅವರಿಗೆ ಕೃತಜ್ಞರಾಗಿರುವುದೇ ನಿಜವಾದ ಧರ್ಮ.

ಇಂಥ ಸರಳ ವಿಷಯ ಅರಿಯದೇ ದೇವರ‌ನ್ನು ಎಲ್ಲೆಂದರಲ್ಲಿ ಹುಡುಕಿದರೆ ಪ್ರಯೋಜನವೇನು?

ಒಂದು ದಿನ ಒಬ್ಬ ಯುವಕ ದೇವರನ್ನು ಕಾಣಲು ಜಗತ್ತನ್ನೆಲ್ಲ ಸುತ್ತಿದನಂತೆ. ಎಲ್ಲಿ ಹೋದರೂ ದೇವರು ಕಾಣದಾದಾಗ ಮರಳಿ ಬರುತ್ತಿದ್ದನು. ಮಾರ್ಗ ಮಧ್ಯೆ ಓರ್ವ ಸಂತರು ಭೇಟಿಯಾಗಿ ಹೇಳುತ್ತಾರೆ- ಎದುರಿಗೆ ಇರುವ ಬೆಟ್ಟವನ್ನು ಹತ್ತಿ ನೋಡು ಸಾಕು ಎಂದು.

ಕೊನೆಯ ಉಪಾಯವೆಂದು ಯುವಕ ಬೆಟ್ಟ ಹತ್ತಿ ನೋಡುತ್ತಾ ನಂತೆ. ಏನಾಶ್ಚರ್ಯ ! ಅನಂತ ಆಗಸದಲ್ಲಿ ತೇಲುವ ಬೆಣ್ಣೆಯ ಬೆಟ್ಟದಂತಹ ಮೇಘಗಳು, ಹಾರುವ, ಹಾಡುವ ಸಾಲು ಸಾಲಾದ ಹಕ್ಕಿಗಳು, ಅರುಣೋದಯದ ಬಳಿಕ ರವಿಯ ಸುವರ್ಣ ಕಿರಣಗಳನ್ನೆಲ್ಲ ಕಂಡು ಮೂಕ ವಿಸ್ಮಿತನಾದನಂತೆ. ಆಗ ಆನಂದ ಭರಿತನಾಗಿ ಸಕಲ ಜೀವ ರಾಶಿ ಸಂರಕ್ಷಿಸುತ್ತಿರುವ ಈ‌ನಿಸರ್ಗವೇ ನಿಜವಾದ ದೇವರೆಂದು ಉದ್ಘರಿಸಿದನಂತೆ.

ಈ ನಿಸರ್ಗ ದೇವರಾದರೆ ಈ ನಿಸರ್ಗ ನೀಡಿದ ಹಣ್ಣು, ಹಂಪಲು ತಿಂದ, ಗಾಳಿ ಸೇವಿಸಿದ ನಾವೂ ದೇವರಲ್ಲವೇ? ಈ ಸತ್ಯ ಸರಿಯದೆ ದೇವರನ್ನು ಎಲ್ಲೆಲ್ಲೂ ಹುಡುಕುವುದು ಮೂರ್ಖತನವಾದೀತು ಎನ್ನುತ್ತಾರೆ ಸಿದ್ದೇಶ್ವರ ಶ್ರೀಗಳು.

ಇನ್ನಾದರೂ ದೇವರೆಂಬ ಸತ್ಯವನ್ನರಿಯದೇ ನಾನು, ನನ್ನದು ಎಂಬ ಅಹಮ್ಮಿಕೆ ಬಿಟ್ಟು ಬಾಳೋದನ್ನು ಕಲಿತರೆ ಅದೇ ಸ್ವರ್ಗ. ಏನಂತೀರಿ?

error: Content is protected !!