ಗ್ರಾಮ ಪಂಚಾಯಿತಿ ಜಗಳ ಹಲ್ಲೆಯಲ್ಲಿ ಅಂತ್ಯ, ಕಬ್ಬಿಣದ ರಾಡ್ ನಿಂದ ಹಲ್ಲೆ, ಜಾತಿ ನಿಂದನೆ…..ಪರಸ್ಪರ ಎಫ್ ಐಆರ್ ದಾಖಲು……ಅಬ್ಬಬ್ಬಾ ಏನಿದು ರಾಜಕೀಯ ತಿಂಡಿ….?
ಸರಕಾರ ನ್ಯೂಸ್ ಇಂಡಿ
ಪರಸ್ಪರ ಸೌಹಾರ್ದತೆ, ಸಹಾಯ ಮತ್ತು ಸಹಕಾರ ತತ್ವದಡಿ ಗ್ರಾಮದ ಅಭಿವೃದ್ಧಿಗೆ ಕಾರಣವಾಗಬೇಕಿದ್ದ ಗ್ರಾಮ ಪಂಚಾಯಿತಿಗಳು ರಾಜಕೀಯ ತಿಂಡಿ ಸಾಧಿಸಲು ವೇದಿಕೆಯಾಗುತ್ತಿರುವುದು ವಿಪರ್ಯಾಸ !
ಹೌದು, ಇಂಡಿ ತಾಲೂಕಿನ ಪಡನೂರ ಗ್ರಾಮದಲ್ಲಿ ನಡೆದ ಗ್ರಾಮ ಪಂಚಾಯಿತಿ ಬಿಲ್ ಪಾವತಿಯ ಜಗಳ ಇದೀಗ ಪರಸ್ಪರ ಕಲಹಕ್ಕೆ ಕಾರಣವಾಗಿದ್ದಲ್ಲದೇ ರಾಡ್‌ನಿಂದ ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಾಗುವ ಮಟ್ಟಿಗೆ ತಲುಪಿದೆ.
ಎರಡು ಬಣಗಳ ನಡುವೆ ನಡೆದ ಕಲಹ ಪರಸ್ಪರ ಎಫ್‌ಐಆರ್ ದಾಖಲಿಸುವ ಮೂಲಕ ಇದೀಗ ನ್ಯಾಯಾಲಯದ ಮೆಟ್ಟಿಲು ಹತ್ತುವ ಮಟ್ಟಕ್ಕೆ ತಲುಪಿದೆ. ಅಷ್ಟಕ್ಕೂ ಏನಪ್ಪಾ ಈ ಜಗಳ ಅಂತೀರಾ…..ಈ ವರದಿ ನೋಡಿ……
ಘಟನೆ ಕುರಿತು ಒಂದಿಷ್ಟು ಮಾಹಿತಿ:
ಇಂಡಿಯಲ್ಲಿರುವ ಸಿಂದಗಿ ರಸ್ತೆಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪಕ್ಕದ ಪಡನೂರಿನ ಗ್ರಾಮ ಪಂಚಾಯಿತಿ ಕಂಪ್ಯೂಟರ್ ಆಪರೇಟ್ ರೂಮ್ ಬಳಿ ಸೆ. 1ರಂದು ಎರಡು ಗುಂಪುಗಳ ಮಧ್ಯೆ ಕಲಹ ನಡೆದಿದೆ. ಕಾರಣ ಗ್ರಾಮ ಪಂಚಾಯಿತಿಯ ಬಿಲ್ ತಯಾರಿಸುವ ವಿಷಯಕ್ಕೆ ಪರಸ್ಪರ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದ್ದು ಒಂದು ಗುಂಪು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದೆ. ಗಾಯಾಳುಗಳು ಎಫ್‌ಐಆರ್ ದಾಖಲಿಸುತ್ತಿದ್ದಂತೆ ಹಲ್ಲೆ ನಡೆಸಿದ ಆರೋಪ ಹೊತ್ತ ಇನ್ನೊಂದು ಗುಂಪು ಸಹ ತಮಗೆ ಜಾತಿ ನಿಂದನೆ ಮಾಡಿ ತಮ್ಮ ಬಳಿಯ ಚಿನ್ನ ಕಳವು ಮಾಡಿದ್ದಾರೆಂಬ ಪ್ರತಿ ದೂರು ದಾಖಲಿಸಿದ್ದಾರೆ.
ಅಸಲಿಗೆ ಆಗಿದ್ದೇನು?
ಪಡನೂರ ಗ್ರಾಮದ ರೈತ ಅಶೋಕ ಅರವತ್ತು ಮತ್ತವರ ಪುತ್ರ ಸುನೀಲ ಹಾಗೂ ಗ್ರಾಪಂ ಅಧ್ಯಕ್ಷ ಷಡಕ್ಷರಿ ಮೇತ್ರಿ, ಕೇದುಗೌಡ ಬಿರಾದಾರ, ಶ್ರೀಶೈಲ ಅರವತ್ತು, ದಯಾನಂದ ಮೇತ್ರಿ, ಸುಧಾಕರ ಕಣಮಸ ಹೀಗೆ ಈ ಎಲ್ಲರೂ ಸೇರಿ ಕಂಪ್ಯೂಟರ್ ಆಪರೇಟರ್ ಶಿವಾನಂದ ನಾವಿ ಬಳಿ ಕುಳಿತು ಕೃಷಿ ಹೊಂಡ ಹಾಗೂ ಬದು ನಿರ್ಮಾಣಕ್ಕೆ ಸಂಬಂಧಿಸಿದ ಲೇಬರ್ ಪೇಮೆಂಟ್ ಮಾಡುತ್ತಿದ್ದರು. ಮಧ್ಯಾಹ್ನ 3 ಗಂಟೆ ಆಗಿರಬಹುದು. ಆಗ ಅಲ್ಲಿಗೆ ಬಂದ ಗೇನು ಸಿದ್ರಾಮ ಗಿರಣಿವಡ್ಡರ, ಸಚೀನ ಮರೆಪ್ಪ ಗಿರಣಿವೊಡ್ಡರ್ ಹಾಗೂ ಮರೆಪ್ಪ ಸಿದ್ರಾಮ ಗಿರಣಿವೊಡ್ಡರ ಮತ್ತಿತರರು ಬಿಲ್ ಮಾಡದಂತೆ ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದಾರೆ. ಆಗ ಕೆಲವರಿಗೆ ಗಾಯವಾಗಿದ್ದಲ್ಲದೇ ಕಂಪ್ಯೂಟರ್ ಹಾನಿಯಾಗಿ ಫೈಲ್‌ಗಳು ಚೆಲ್ಲಾಪಿಲ್ಲಿಯಾಗಿವೆ. ಈ ಬಗ್ಗೆ ಅಶೋಕ ಅರವತ್ತು ಪೊಲೀಸರಿಗೆ ದೂರು ನೀಡಿದ್ದಾನೆ.
ಪ್ರತಿ ದೂರು ದಾಖಲು:
ಬಳಿಕ ಹಲ್ಲೆ ನಡೆಸಿದ್ದಾರೆಂಬ ಆರೋಪಕ್ಕೆ ಒಳಗಾದ ಮರೆಪ್ಪ ಸಿದ್ರಾಮ ಗಿರಣಿವೊಡ್ಡರ ಕೂಡ ಪ್ರತಿ ದೂರು ದಾಖಲಿಸಿದ್ದು, ಆ ಪ್ರಕಾರ ಅಶೋಕ ಸೋಮನಾಥ ಅರವತ್ತು, ಸುನೀಲ ಅಶೋಕ ಅರವತ್ತು, ಸುಧೀರ ಅಶೋಕ ಅರವತ್ತು, ಪವತ ಗುರಪ್ಪ ಅರವತ್ತು, ಷಡಕ್ಷರಿ ರೇವಣಸಿದ್ದ ಮೇತ್ರಿ, ರಾಜೇಂದ್ರ ಜಕ್ಕಪ್ಪ ಅರವತ್ತು, ಶ್ರೀಶೈಲ ಮಾಂತಪ್ಪ ಅರವತ್ತು ಇವರೆಲ್ಲರೂ ಸೇರಿ ಬಿಲ್ ಮಾಡದಂತೆ ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲ 50 ಗ್ರಾಂ ಚಿನ್ನದ ಸರ ಕೂಡ ತೆಗೆದುಕೊಂಡಿದ್ದಾರೆ.
ಹೀಗೆ ದೂರು ಮತ್ತು ಪ್ರತಿ ದೂರು ದಾಖಲಿಸಿಕೊಂಡ ಪೊಲೀಸರು ಇದೀಗ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಸಜ್ಜಾಗಿದ್ದಾರೆ. ಆದರೆ, ಗ್ರಾಪಂನ ಜಗಳ ಈ ಮಟ್ಟಕ್ಕೆ ತೆಗೆದುಕೊಂಡು ಹೋಗುವುದು ಸರಿಯಾ? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.
(ಕ್ಷಣ ಕ್ಷಣದ ಮಹತ್ವದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)