ವಿಜಯಪುರ

ಸಂಸದ ರಮೇಶ ಜಿಗಜಿಣಗಿ ಸಾಧನೆ ಏನು? ಹೆದ್ದಾರಿಗೆ ನೀಡಿದ ಕೊಡುಗೆಯಾದರೂ ಏನು?

ಸರಕಾರ ನ್ಯೂಸ್ ವಿಜಯಪುರ

ಕಳೆದ ಒಂಬತ್ತು ವರ್ಷದ ಆಡಳಿತಾವಧಿಯಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಸಮಗ್ರ ಅಭಿವೃದ್ಧಿ ಗೆ ಶ್ರಮಿಸಲಾಗಿದೆ‌. ಒಟ್ಟು 4025.86 ಕೋಟಿ ರೂ.ವೆಚ್ಚದಲ್ಲಿ 1514.72 ಕಿಮೀ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ನೆರೆಯ ಮಹಾರಾಷ್ಟ್ರ ಹಾಗೂ ನೆರೆಯ ಜಿಲ್ಲೆಗಳಾದ ಕಲಬುರಗಿ, ಬಾಗಲಕೋಟೆ, ಬೆಳಗಾವಿ ಮತ್ತಿತರ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳ ಅಭಿವೃದ್ಧಿ ಗೆ ಶ್ರಮಿಸಲಾಗಿದೆ ಎಂದು ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಅವರು ತಿಳಿಸಿದರು.

ವಿಜಯಪುರ- ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಸಂ. 13 ರಡಿ 110 ಕಿಮೀ ಚತುಷ್ಪಥ ಹೆದ್ದಾರಿ ಕಾಮಗಾರಿ ಈಗಾಗಲೇ ಮುಕ್ತಾಯಗೊಂಡಿದೆ. ಅದಕ್ಕಾಗಿ 1576.00 ಕೋಟಿ ವೆಚ್ಚ ಮಾಡಲಾಗಿದೆ. ಇದೇ ಅನುದಾನದಲ್ಲಿ ವಿಜಯಪುರ ಜಿಲ್ಲೆಯ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿಗೆ ಮಂಜೂರಾತಿ ನೀಡಲಾಗಿದೆ. ಒಟ್ಟು 460.00 ಕೋಟಿ ರೂ.ವೆಚ್ಚದಲ್ಲಿ 810 ಕಿಮೀ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ವಿಜಯಪುರ- ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ- 13 ರಡಿ ಚತುಷ್ಪಥ ಮಾರ್ಗವನ್ನು 6 ಪಥವಾಗಿಸುವ ಕಾಮಗಾರಿಗ ಮಂಜೂರಾತಿ ನೀಡಿದ್ದು ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.

ವಿಜಯಪುರ- ಸೇವಾಲಾಲ ನಗರ(ಮಹಲದಿಂದ)ದಿಂದ ಸಿಂದಗಿ ತಾಲೂಕಿನ ಮೋರಟಗಿ ಗ್ರಾಮದವರೆಗೆ ರಾಷ್ಟ್ರೀಯ ಹೆದ್ದಾರಿ ಅಡಿ ಒಟ್ಟು 190.00 ಕೋಟಿ ವೆಚ್ಚದಲ್ಲಿ 80 ಕಿಮೀ ರಸ್ತೆ ಅಭಿವೃದ್ಧಿ ಪಡಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ-218 ರ ಕಿಮೀ 4.40 ರಿಂದ 56.00 (ಕೋಲಾರ)ವರೆಗೆ ವಿಜಯಪುರ-ಹುಬ್ಬಳ್ಳಿ ರಸ್ತೆಯ ನ್ನು ಪೆವಡ್ ಶೋಲ್ಡರ್ ಜೊತೆಗೆ ದ್ವಿ- ಪಥಕ್ಕೆ ಅಗಲೀಕರಣಗೊಳಿಸುವುದು, ರಾಷ್ಟ್ರೀಯ ಹೆದ್ದಾರಿ ನಂ.218 ಕಿಮೀ 15.00 ರಲ್ಲಿ (ಹೊನಗಮಹಳ್ಳಿ ಬಳಿ) ರೈಲ್ವೆ ಮೇಲ್ಸೇತುವೆ ನಿರ್ಮಿಸುವ ಕಾಮಗಾರಿ, ರಾಷ್ಟ್ರೀಯ ಹೆದ್ದಾರಿ 548 ಬಿ ವಿಜಯಪುರ ಪ್ರವಾಸಿ ಮಂದಿರದ ವೃತ್ತದಿಂದ ಕಿಮೀ 0.00 ದಿಂದ ಕಿಮೀ 40.00 (ತೆಲಸಂಗ ಕ್ರಾಸ್) ವರೆಗೆ, ರಾಷ್ಟ್ರೀಯ ಹೆದ್ದಾರಿ ನಂ. 561 ರವರೆಗೆ ಮಹಾರಾಷ್ಟ್ರ ಗಡಿಯಿಂದ ಸಿದ್ದಾಪುರ-ಅರಕೇರಿ-ವಿಜಯಪುರ ವರೆಗೆ, ರಾಷ್ಟ್ರೀಯ ಹೆದ್ದಾರಿ ನಂ. 548ಬಿ ಮಹಾರಾಷ್ಟ್ರ ಗಡಿಯಿಂದ ಮಣ್ಣೂರ, ಹಿರೇಬೇವನೂರ, ಇಂಡಿ ಬೈಪಾಸ್ ರಸ್ತೆ, ರೂಗಿ, ಅಥರ್ಗಾ ಬೈಪಾಸ್, ನಾಗಠಾಣ, ಅಲಿಯಾಬಾದ್ ರೈಲ್ವೆ ಮೇಲ್ಸೇತುವೆ ವಿಜಯಪುರ ಪಟ್ಟಣದ ವರ್ತುಲ ರಸ್ತೆ ಮಾರ್ಗವಾಗಿ ಪ್ರವಾಸಿ ಮಂದಿರದವರೆಗೆ, ಮಹಾರಾಷ್ಟ್ರ ಗಡಿಯಿಂದ ಕನಮಡಿ- ಬಿಜ್ಜರಗಿ- ಬಾಬಾನಗರ- ತಿಕೋಟಾ ರಸ್ತೆ ಸೇರಿದಂತೆ ಹತ್ತು ಹಲವು ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.

ಕೇಂದ್ರ ರಸ್ತೆ ನಿಧಿ ಯೋಜನೆಯಡಿ ವಿಜಯಪುರ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 2016-17 ನೇ ಸಾಲಿನಿಂದ ಈವರೆಗೆ ಒಟ್ಟು 14 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅದರಲ್ಲಿ 12 ಕಾಮಗಾರಿ ಪೂರ್ಣಗೊಂಡಿದ್ದು, ಇನ್ನುಳಿದ 2 ಕಾಮಗಾರಿಗಳು ಪ್ರಗತಿಯ ಹಂತದಲ್ಲಿವೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಒಟ್ಟು 159.17 ಕೋಟಿ ರೂ.ವೆಚ್ಚದಲ್ಲಿ 82 ಕಾಮಗಾರಿ ಕೈಗೆತ್ತಿಕೊಂಡು 286.36 ಕಿಮೀ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ ಎಂದರು.

(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!