ಭೀಮಾತೀರದಲ್ಲಿ ಕೃಷ್ಣ ಮೃಗಗಳ ನರ್ತನ, ಸಂರಕ್ಷಿತ ಪ್ರದೇಶವಾಗುವುದೇ ಸಾವಳಸಂಗ?
ಬೆಂಗಳೂರು: ಭೀಮಾತೀರ ಎಂದಾಕ್ಷಣ ಕೇವಲ ಕೊಲೆ, ಸುಲಿಗೆ, ದರೋಡೆ, ಮಾದಕ ದ್ರವ್ಯ ಮಾರಾಟ, ಅಕ್ರಮ ಶಸ್ತ್ರಾಸ್ತ್ರ ಸಾಗಾಟದಂಥ ಕುಖ್ಯಾತ ಸಂಗತಿಗಳೇ ಕಣ್ಮುಂದೆ ಗೋಚರಿಸುತ್ತವೆ.
ಆದರೆ, ಭೀಮಾತೀರ ಅನೇಕ ಸಾಹಿತಿಗಳ, ಸಂತರ, ಶರಣರ ಹಾಗೂ ಪ್ರಸಿದ್ಧಿ ದೇವಸ್ಥಾನಗಳ ನೆಲೆ ಎಂಬುದನ್ನು ಬಹುತೇಕರು ಮರೆತು ಬಿಡುತ್ತಾರೆ. ಅಷ್ಟೇ ಏಕೆ ಭೀಮಾತೀರ ಇದೀಗ ಅರಣ್ಯ ಸಂಪತ್ತಿನಿಂದ ಕಂಗೊಳಿಸುತ್ತಿದ್ದು, ಪ್ರಾಣಿ ಪಕ್ಷಿಗಳ ಇಂಚರ ಕೇಳಿ ಬರುತ್ತಿದೆ.
ಶಾಸಕ ಯಶವಂತರಾಯಗೌಡ ಪಾಟೀಲರ ಕಳಕಳಿಯ ಫಲವಾಗಿ ಭೀಮಾತೀರದಲ್ಲೀಗ ನೀರಾವರಿ ಹೆಚ್ಚಿದೆ, ಅರಣ್ಯ ಪ್ರದೇಶ ವೃದ್ಧಿಸಿದೆ. ಪ್ರಾಣಿ ಸಂಕುಲ ಹೆಚ್ಚುತ್ತಿದೆ. ಅಂತೆಯೇ ಇಂಡಿ ತಾಲೂಕಿನ ಸಾವಳಸಂಗ ಸಂರಕ್ಷಿತ ಪ್ರದೇಶವಾಗಬೇಕೆಂಬ ಕೂಗು ಬಲಗೊಂಡಿದೆ.
ಬರಪೀಡಿತ ಪ್ರದೇಶವೆಂದೇ ಖ್ಯಾತಿ ಪಡೆದಿದ್ದ ಭೀಮಾತೀರವನ್ನು ಸಮಗ್ರ ನೀರಾವರಿಗೊಳಪಡಿಸಿ ಅರಣ್ಯೀಕರಣಕ್ಕೆ ಆದ್ಯತೆ ನೀಡಿದ್ದ ಶಾಸಕ ಯಶವಂತರಾಯಗೌಡ ಪಾಟೀಲ ಇದೀಗ ಕೃಷ್ಣ ಮೃಗ ಸಂರಕ್ಷಣೆಗೆ ಮುಂದಾಗುವ ಮೂಲಕ ಜೀವ ಸಂಕುಲದ ಬಗ್ಗೆ ಕಳಕಳಿ ಮೆರೆದಿದ್ದಾರೆ.
ಇಂಡಿ ತಾಲೂಕಿನ ಸಾವಳಸಂಗ ಗ್ರಾಮ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶವನ್ನು ರಕ್ಷಿತ ಅರಣ್ಯ ಪ್ರದೇಶವೆಂದು ಗುರುತಿಸಿ ಅಲ್ಲಿ ಕೃಷ್ಣ ಮೃಗಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸುವ ಬಗ್ಗೆ ಶಾಸಕ ಯಶವಂತರಾಯಗೌಡ ಪಾಟೀಲ ಧ್ವನಿ ಎತ್ತಿದ್ದಾರೆ.
ಇಂಡಿ ಮತ್ತು ಚಡಚಣ ತಾಲೂಕಿನ ವ್ಯಾಪ್ತಿಯಲ್ಲಿ ಕೃಷ್ಣಮೃಗಗಳು ವಾಸಿಸುತ್ತಿರುವ ಪ್ರದೇಶವನ್ನು ಕೃಷ್ಣಮೃಗಗಳ ಸಂರಕ್ಷಿತ ಪ್ರದೇಶವೆಂದು ಘೋಷಿಸುವ ಬಗ್ಗೆ ಮನದಿಂಗಿತ ವ್ಯಕ್ತಪಡಿಸಿದ್ದಾರೆ.
ಸಾವಳಸಂಗದಲ್ಲೇನು ವಿಶೇಷ?
ಇಂಡಿ ತಾಲೂಕಿನ ಸಾವಳಸಂಗದಲ್ಲಿ 232 ಎಕರೆ ಸರ್ಕಾರಿ ಜಮೀನು ಇದ್ದು ಅದರಲ್ಲಿ 150 ಎಕರೆಯಲ್ಲಿ ಅರಣ್ಯ ಬೆಳೆಸಲಾಗಿದೆ. ಆಲ, ಅರಳಿ, ಮಾವು, ಬೇವು, ಹೊಂಗೆ, ಬಸರಿ, ನೇರಳೆ, ಹುಣಸೆ, ದೊಡ್ಡ ಹುಣಸೆ, ಚಳ್ಳೆ ಹೀಗೆ ಸುಮಾರು 15 ಪ್ರಕಾರದ ಸಸಿಗಳನ್ನು ಬೆಳೆಸಲಾಗಿದೆ. ಅರಣ್ಯ ಇಲಾಖೆಯ ವಿಶೇಷ ಕಾಳಜಿ, ಶಾಸಕರ ಪ್ರೋತ್ಸಾಹದಿಂದಾಗಿ ಸಾವಳಸಂಗ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಸಾವಳಸಂಗ ಸುತ್ತಲಿನ ಪ್ರದೇಶಗಳಾದ ಬರಡೋಲ, ಚಡಚಣ, ಜೇವೂರ, ಬಳ್ಳೊಳ್ಳಿ, ಶಿಗಣಾಪುರ, ನಂದರಗಿ ಭಾಗದಲ್ಲಿ ಕೃಷ್ಣ ಮೃಗಗಳು ಹೆಚ್ಚುತ್ತಿವೆ. ಬಳ್ಳೊಳ್ಳಿ ಹತ್ತಿರದ ಮುರ್ಚಿ ಮಡ್ಡಿಯಲ್ಲಿ ಕೃಷ್ಣ ಮೃಗಗಳ ಸಂಖ್ಯೆ ಹೆಚ್ಚಾಗಿದೆ. ಸಾವಳಸಂಗದಲ್ಲಿ ನವಿಲು, ತೋಳ, ಮೊಲ, ಸರಿಸೃಪಗಳು ಹೀಗೆ ಹಲವು ಪ್ರಾಣಿಗಳು, ಪಕ್ಷಿಗಳು ವಾಸವಾಗಿವೆ. ಹೀಗಾಗಿ ಈ ಪ್ರದೇಶ ಸಂರಕ್ಷಿತ ಪ್ರದೇಶವೆಂದು ಘೋಷಿಸಬೇಕೆಂಬುದು ಶಾಸಕ ಯಶವಂತರಾಯಗೌಡ ಪಾಟೀಲರ ಒತ್ತಾಸೆ. ಈ ಬಗ್ಗೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ ಕಾದು ನೋಡಬೇಕಿದೆ.