ವಿಜಯಪುರ

ಗ್ರಾಪಂ ಸದಸ್ಯರ ಗೌರವ ಧನ ಹೆಚ್ಚಿಸಿ, ಸದನದಲ್ಲಿ ಸುನೀಲಗೌಡ ಪಾಟೀಲ ಒತ್ತಾಯ

ವಿಜಯಪುರ: ಗ್ರಾಮ ಪಂಚಾಯಿತಿ ಸದಸ್ಯರ ವೇತನ ಹೆಚ್ಚಳಕ್ಕಾಗಿ ವಿಪ ಸದಸ್ಯ ಸುನೀಲಗೌಡ ಪಾಟೀಲ ಸದನದಲ್ಲಿ ಧ್ವನಿ ಎತ್ತಿದ್ದಾರೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಿದ್ದಲ್ಲದೇ ಚರ್ಚೆ ವೇಳೆಯಲ್ಲೂ ಸದನದ ಗಮನ ಸೆಳೆದಿದ್ದಾರೆ.
ಗ್ರಾಮ ಪಂಚಾಯಿತಿ ಸದಸ್ಯರ ವೇತನ ಹೆಚ್ಚಿಸಲು ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ. ಬೆಳಗಾವಿ ಅಧಿವೇಶನದಲ್ಲಿಯೇ ಸರ್ಕಾರ ಸದಸ್ಯರ ಗೌರವ ಧನ ಹೆಚ್ಚಿಸಲು ಒತ್ತಾಯ ಪಡಿಸಿದಾಗ ಸರ್ಕಾರ ಭರವಸೆ ನೀಡಿತ್ತು. ಆದರೆ ಈವರೆಗೂ ಆ ಈಡೇರಿಲ್ಲ. ಬದಲಾಗಿ ಶಾಸಕರು ತಮ್ಮ ಗೌರವ ಧನ ಹೆಚ್ಚಿಸಿಕೊಂಡಿದ್ದಾರೆ. ಇದರಿಂದ ತುಂಬ ಬೇಜಾರಾಗಿದ್ದು ಸರ್ಕಾರದ ಹೆಚ್ಚಿಸಿದ ಗೌರವ ಧನ ನಿರಾಕರಿಸಲು ಮುಂದಾಗಿದ್ದು ಈ ಬಗ್ಗೆ ಸಭಾಪತಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು.
ಸಂಸದರು ಮತ್ತು ಶಾಸಕರಿಗೆ ಅವಧಿ ಮುಗಿದ ನಂತರ ಪಿಂಚಣಿ ನೀಡಲಾಗುತ್ತಿದೆ. ಇದೇ ಮಾದರಿಯಲ್ಲಿ ಜನರಿಂದ ನೇರವಾಗಿ ಆಯ್ಕೆಯಾಗಿರುವ ಗ್ರಾಪಂ ಸದಸ್ಯರಿಗೂ ಕನಿಷ್ಠ ಪಿಂಚಣಿ ನಿಗದಿ ಪಡಿಸಬೇಕು. ಕೇರಳದಲ್ಲಿ ಗ್ರಾಪಂ ಅಧ್ಯಕ್ಷರಿಗೆ ಕಾರ್ ನೀಡಲಾಗಿದೆ. ಅಧ್ಯಕ್ಷರಿಗೆ 13,200, ಉಪಾಧ್ಯಕ್ಷರಿಗೆ 10,600 ಹಾಗೂ ಸದಸ್ಯರಿಗೆ 7000 ಗೌರವಧನ ನೀಡಲಾಗುತ್ತಿದೆ. ಅಲ್ಲಿನ ಮಹಾನಗರ ಪಾಲಿಕೆ ಮಹಾಪೌರರಿಗೆ 15,800, ಉಪ ಮಹಾಪೌರರಿಗೆ 13,200 ಹಾಗೂ ಸದಸ್ಯರಿಗೆ 8200 ಗೌರವಧನ ನೀಡಲಾಗುತ್ತಿದೆ. ನಗರಸಭೆ ಅಧ್ಯಕ್ಷರಿಗೆ 14,600, ಉಪಾಧ್ಯಕ್ಷರಿಗೆ 12,000, ಸ್ಥಾಯಿ ಸಮಿತಿ ಅಧ್ಯಕ್ಷರಿಗೆ 9400, ಸದಸ್ಯರಿಗೆ 7600 ರೂ. ಗೌರವಧನ ನೀಡಲಾಗುತ್ತಿದೆ. ಕರ್ನಾಟಕದಲ್ಲೂ ಈ ಮಾದರಿ ಬರಬೇಕೆಂದು ಒತ್ತಾಯಿಸಿದ್ದಾರೆ.
ಸದಸ್ಯರ ವೇತನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಬೇಕು. ಎಲ್ಲ ಸದಸ್ಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಬೇಕು. ಈ ಬೇಡಿಕೆ ಈಡೇರುವವರೆಗೆ ಎಲ್ಲ 25 ಜನ ಸದಸ್ಯರು ಸದನದಲ್ಲಿ ಧ್ವನಿ ಎತ್ತುತ್ತೇವೆ. ಅಲ್ಲದೇ ಎಲ್ಲ ಗ್ರಾಪಂ ಸದಸ್ಯರ ಬೆಂಬಲ ಪಡೆದು, ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಉತ್ತರ ಪ್ರದೇಶದಲ್ಲಿ ಅಲ್ಲಿನ ರಾಜ್ಯ ಸರ್ಕಾರ ಜಲಜೀವನ ಮಿಷನ್ ಯೋಜನೆಗೆ ಗ್ರಾಪಂ ಗಳಿಂದ ಹಣ ಪಡೆಯುವ ಬದಲು ಅಲ್ಲಿನ ಸರ್ಕಾರವೇ ವೆಚ್ಛ ಭರಿಸುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಆಗಬೇಕೆಂದರು.

error: Content is protected !!