ನಿಡಗುಂದಿ ಪಟ್ಟಣ ಪಂಚಾಯಿತಿಯಲ್ಲಿ ಅಪರಾತಪರಾ, ಮುಖ್ಯಾಧಿಕಾರಿ ಅಮಾನತ್ತು
ಸರಕಾರ್ ನ್ಯೂಸ್ ಬ.ಬಾಗೇವಾಡಿ
ಕ್ರಿಯಾಯೋಜನೆ ಪ್ರಕಾರ ನಿಗದಿತ ಸ್ಥಳದಲ್ಲಿ ಕಾಮಗಾರಿ ನಿರ್ವಹಿಸದೇ ಬೇರೆ ಸ್ಥಳದಲ್ಲಿ ಕಾಮಗಾರಿ ಮಾಡಿದ ಆರೋಪದ ಮೇರೆಗೆ ಈ ಹಿಂದಿನ ನಿಡಗುಂದಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಡಿ.ಎನ್. ತಹಸೀಲ್ದಾರ್ ಇವರನ್ನು ಅಮಾನತ್ತುಗೊಳಿಸಲಾಗಿದೆ.
ಆರೋಪ ಕೇಳಿ ಬರುತ್ತಿದ್ದಂತೆ ಡಿ.ಎನ್. ತಹಸೀಲ್ದಾರ್ ಇವರನ್ನು ಬಬಲೇಶ್ವರಕ್ಕೆ ವರ್ಗಾಯಿಸಲಾಗಿತ್ತು. ಇದೀಗ ಆರೋಪ ಸಾಬೀತಾದ ಹಿನ್ನೆಲೆ ಬಬಲೇಶ್ವರ ಪಟ್ಟಣ ಪಂಚಾಯಿತಿಂದಲೂ ಅಮಾನತ್ತುಗೊಳಿಸಿ ಆದೇಶಿಸಲಾಗಿದೆ. ತೆರವಾದ ಸ್ಥಾನಕ್ಕೆ ವಿಜಯಪುರ ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ ರುದ್ರಗೌಡ ಸೋಲಾಪುರ ಇವರನ್ನು ನೇಮಕ ಮಾಡಿ ಜ. 1ರಂದು ಆದೇಶಿಸಲಾಗಿದೆ.
ಪ್ರಕರಣದ ವಿವರ:
ನಿಡಗುಂದಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ ಪರಿಶಿಷ್ಟ ಜಾತಿ ಮಾದಿಗ ಸಮುದಾಯದ ಶ್ರೀ ಭೀಮಾಶಂಕರ ನಗರದ ವಾರ್ಡ್ ನಂ.2ರಲ್ಲಿ ಸಿಸಿ ರಸ್ತೆ ಜೆಐ ಪೈಪ್‌ಲೈನ್ ಕಾಮಗಾರಿಗೆ ಸಂಬಂಧಿಸಿದಂತೆ 2019-20ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ಮಂಜೂರಾದ ಕ್ರಿಯಾ ಯೋಜನೆಯಂತೆ ನಿಗದಿತ ಸ್ಥಳದಲ್ಲಿ ಕಾಮಗಾರಿ ನಿರ್ವಹಿಸದೇ ಬೇರೆ ಸ್ಥಳದಲ್ಲಿ ಕಾಮಗಾರಿ ನಿರ್ವಹಿಸಿ ಬದಲಿ ಕಾಮಗಾರಿಗೆ ಸಕ್ಷಮ ಪ್ರಾಧಿಕಾರದಿಂದ ಕ್ರಿಯಾ ಯೋಜನೆಗೆ ಮಂಜೂರಾತಿ ಪಡೆದುಕೊಳ್ಳದೆ ಕಾಮಗಾರಿ ನಿರ್ವಹಿಸಿ ಕರ್ತವ್ಯ ಲೋಕ ಎಸಗಿದ್ದು ಕಂಡು ಬಂದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಶಿಸ್ತು ಕ್ರಮಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದರು. ಆ ಪ್ರಕಾರ ಡಿ.ಎನ್. ತಹಸೀಲ್ದಾರ್‌ನನ್ನು ಅಮಾನತ್ತುಗೊಳಿಸಿ ಬಾದಾಮಿ ಪುರಸಭೆಯಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಬದಲಾಯಿಸಿ ಜ. 10ರಂದು ಆದೇಶಿಸಲಾಗಿದೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ್ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)