ವಿಜಯಪುರ

ಭೀಮಾತೀರದಲ್ಲಿ ಮಾದಕ ದ್ರವ್ಯ ಮಾರಾಟ, ಈವರೆಗೆ ದಾಖಲಾದ ಪ್ರಕರಣಗಳೆಷ್ಟು? ಸರ್ಕಾರ ಕೈಗೊಂಡ ಕ್ರಮಗಳೇನು? ಇಲ್ಲಿದೆ ನೋಡಿ ಮಾಹಿತಿ….

ವಿಜಯಪುರ: ಭೀಮಾತೀರ ಖ್ಯಾತಿಯ ಇಂಡಿ ತಾಲೂಕಿನ ಡಾಭಾ, ಹೋಟೆಲ್‌ಗಳಲ್ಲಿ ಮಾದಕ ದ್ರವ್ಯಗಳು ಮಾರಾಟವಾಗುತ್ತಿವೆಯಾ? ತಪ್ಪಿತಸ್ಥರ ವಿರುದ್ಧ ಸರ್ಕಾರ ಕೈಗೊಂಡ ಕ್ರಮಗಳೇನು? ಈವರೆಗೆ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಎಷ್ಟಿದೆ? ಸದ್ಯ ಆ ಪ್ರಕರಣಗಳ ಸ್ಥಿತಿ ಹೇಗಿದೆ? ಎಂಬುದರ ಸಮಗ್ರ ವಿವರ ಇಲ್ಲಿದೆ ನೋಡಿ…..

ಇಂಡಿ ತಾಲೂಕಿನಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ತಡೆಗೆ ಸಂಬಂಧಿಸಿದಂತೆ ಶಾಸಕ ಯಶವಂತರಾಗೌಡ ಪಾಟೀಲ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರಶ್ನೆ ಮಾಡಿದ್ದಾರೆ. ಸರ್ಕಾರ ನೀಡಿರುವ ಮಾಹಿತಿಯಂತೆ ಇಂಡಿಯ ಡಾಬಾ ಬಳಿ ನಿಲ್ಲಿಸಿದ ಒಂದು ಟ್ರಕ್‌ನಲ್ಲಿ ಮಾದಕ ದ್ರವ್ಯ ಸಿಕ್ಕಿದ್ದು, ಇತರೆ ಸ್ಥಳಗಳಲ್ಲಿ 4 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳು ಶಾಸಕರ ಪ್ರಶ್ನೆಗೆ ಪುಷ್ಠಿ ನೀಡುವಂತಿವೆ.

ಜನವರಿ 1, 2022ರಂದು ಹೋರ್ತಿ ಠಾಣೆ ವ್ಯಾಪ್ತಿಯ ಕೊಟ್ನಾಳ ಕ್ರಾಸ್‌ ಹತ್ತಿರ ಎನ್‌ ಎಚ್‌ 52 ರಸ್ತೆ ಪಶ್ಚಿಮ ಬದಿಗೆ ಇರುವ ಶರ್ಮಾ ಡಾಬಾದ ಆವರಣದಲ್ಲಿ ನಿಲ್ಲಿಸಿದ್ದ ಲಾರಿ ಮೇಲೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಹಿಮಾಚಲ ಪ್ರದೇಶದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು 1.50ಲಕ್ಷ ರೂ. ಮೌಲ್ಯದ ಅಫೀಮು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣ ಇನ್ನೂ ತನಿಖೆಯಲ್ಲಿದೆ.

ಇದೇ ರೀತಿ ದೇಗಿನಾಳ ಗ್ರಾಮದ ಹದ್ದಿನಲ್ಲಿ ಬರುವ ಜಮೀನು, ಲೋಣಿ ಕೆಡಿ ಗ್ರಾಮದ ಜಮೀನು, ದೇವರನಿಂಬರಗಿ ಗ್ರಾಮದ ಜಮೀನಿನಲ್ಲಿ ಮಾದಕ ದ್ರವ್ಯ ಬೆಳೆಯುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಇಂಡಿ ಪಟ್ಟಣದ ಮಹಾವೀರ ವೃತ್ತದ ಬಳಿ ಕಾರಿನಲ್ಲಿ ಮಾದಕ ದ್ರವ್ಯ ಸಿಕ್ಕಿದ್ದು 3 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ನ್ಯಾಯಾಲಯದ ಮಟ್ಟದಲ್ಲಿ ವಿಚಾರಣೆ ಹಂತದಲ್ಲಿದೆ.

ಹೀಗೆ ದಾಖಲಾದ ಹಲವು ಪ್ರಕರಣಗಳು ಇಂಡಿ ಭಾಗದಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ಸಾಗಾಟದ ಬಗ್ಗೆ ಸಾಕ್ಷ ಒದಗಿಸುತ್ತವೆ. ಇವುಗಳ ತಡೆಗೆ ಹಲವು ಕ್ರಮಗಳನ್ನು ಕೈಗೊಂಡ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ. ಆದಾಗ್ಯೂ ಮಾದಕ ದ್ರವ್ಯ ಮಾರಾಟ ತಡೆಗೆ ಸಂಬಂಧಿಸಿದಂತೆ ಶಾಸಕ ಯಶವಂತರಾಯಗೌಡ ಪಾಟೀಲ ತೋರಿರುವ ಕಳಕಳಿ ಶ್ಲಾಘನೀಯ.

error: Content is protected !!