ರಾಜ್ಯ

ಅತಿಥಿ ಉಪನ್ಯಾಸಕ ನೇಮಕಾತಿಗೂ ಮೀಸಲಾತಿ ಅನ್ವಯಿಸಿ, ಸಿಎಂಗೆ ಪತ್ರ ಬರೆದ ಎಂಎಲ್‌ಸಿ ಡಾ.ಸಾಬಣ್ಣ ಹೇಳಿದ್ದೇನು?

ಸರಕಾರ ನ್ಯೂಸ್ ಬೆಂಗಳೂರು

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಮೀಸಲಾತಿ ಅಳವಡಿಸಿಬೇಕೆಂಬ ಕೂಗು ಬಲಗೊಂಡಿದೆ.

ಸರ್ಕಾರ ಅರ್ಜಿ ಆಹ್ವಾನಿಸುತ್ತಿದ್ದಂತೆ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲೂ ಪ್ರವರ್ಗ-1, ಎಸ್‌ಸಿ ಮತ್ತು ಎಸ್‌ಟಿ ಸೇರಿದಂತೆ ಮೀಸಲಾತಿ ನಿಯಮ ಅನ್ವಯಿಸಬೇಕೆಂಬ ಒತ್ತಾಯ ಶುರುವಾಗಿದೆ. ಹೀಗಾಗಿ ಅಸಂಖ್ಯಾತ ಆಕಾಂಕ್ಷಿಗಳ ಪರವಾಗಿ ಧ್ವನಿ ಎತ್ತಿರುವ ವಿಧಾನ ಪರಿಷತ್ ಸದಸ್ಯ ಡಾ.ಸಾಬಣ್ಣ ತಳವಾರ ಸಿಎಂ ಸಿದ್ದರಾಮಯ್ಯ ಹಾಗೂ ಉನ್ನತ ಶಿಕ್ಷಣ ಸಚಿವಡಾ.ಎಂ.ಸಿ. ಸುಧಾಕರಗೆ ಶುಕ್ರವಾರ ಪತ್ರ ಬರೆದಿದ್ದಾರೆ.

ವಿಧಾನ ಪರಿಷತ್ ಸದಸ್ಯ ಡಾ.ಸಾಬಣ್ಣ ತಳವಾರ ಸಿಎಂ ಸಿದ್ದರಾಮಯ್ಯಗೆ ಬರೆದ ಪತ್ರ.

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2023-24ನೇ ಸಾಲಿನ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸೆ.2ರವರೆಗೆ ಕಾಲೇಜು ಶಿಕ್ಷಣ ಇಲಾಖೆ ಅನುಮತಿ ನೀಡಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾಯಂ ಅಧ್ಯಾಪಕರ ಬೋಧನಾ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಯುವ ಕಾರ್ಯಭಾರಕ್ಕೆ ಅನುಗುಣವಾಗಿ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸೂಚಿಸಲಾಗಿದೆ. ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕ ಹುದ್ದೆಗಳಿಗೆ ಆಯ್ಕೆಗಾಗಿ ಅಭ್ಯರ್ಥಿಗಳು ಪಡೆದ ಅಂಕಗಳು ಮತ್ತು ಅವರು ಪಡೆದ ಅನುಭವದ ಆಧಾರದ ಮೇಲೆ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಆದರೆ, ಈ ಪ್ರಕ್ರಿಯೆಯಲ್ಲಿ ಮೀಸಲಾತಿ ಅಳವಡಿಸಿರುವುದಿಲ್ಲ. ತೀರ ಹಿಂದುಳಿದ ವರ್ಗ, ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳು ಪಿಜಿ ಮುಗಿಸುವಾಗ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ಮೇಲ್ವರ್ಗದ ಅಭ್ಯರ್ಥಿಗಳೊಂದಿಗೆ ಸ್ಪರ್ಧಿಸುವುದು ಕಷ್ಟವಾಗುತ್ತದೆ. ಹೀಗಾಗಿ, ಅತಿಥಿ ಉಪನ್ಯಾಸಕ ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಮೀಸಲಾತಿ ಅವಕಾಶವನ್ನು ಅಳವಡಿಸಿ ತೀರಾ ಹಿಂದುಳಿದ ವರ್ಗಗಳಿಂದ ಬಂದು ಉನ್ನತ ಶಿಕ್ಷಣ ಪಡೆದ ಅಭ್ಯರ್ಥಿಗಳು ಅವಕಾಶ ವಂಚಿತರಾಗದಂತೆ ಗಮನ ಹರಿಸುವುದು ಅವಶ್ಯ ಎಂದಿದ್ದಾರೆ.

ಈಗಾಗಲೇ 3 ವರ್ಷಗಳಿಂದ ಕೆಸೆಟ್ ಪರೀಕ್ಷೆ ನಡೆದಿರುವುದಿಲ್ಲ. 3 ವರ್ಷಗಳಿಂದ ಕೇವಲ ಪಿಜಿ ಮುಗಿಸಿದ ಅವಧಿಯಲ್ಲಿ ಅಭ್ಯರ್ಥಿಗಳು ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. 3 ವರ್ಷಗಳಲ್ಲಿ ಕೆಸೆಟ್ ಪರೀಕ್ಷೆ ಉತ್ತೀರ್ಣರಾಗದಿದ್ದರೆ ನಂತರ ಅತಿಥಿ ಉಪನ್ಯಾಸಕರಾಗಿ ಮುಂದುವರಿಯಲು ಅವಕಾಶ ಇಲ್ಲ. ಇದರಿಂದ ಅಭ್ಯರ್ಥಿಗಳಿಗೆ ತೊಂದರೆಯಾಗಲಿದೆ. 3-4 ವರ್ಷಗಳಿಂದ ಕೆ-ಸೆಟ್ ಕರೆಯದೇ ಇರುವುದರಿಂದ ಪರೀಕ್ಷೆ ಬರೆಯಲು ಅವಕಾಶ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕ ನೇಮಕಾತಿ ಮೀಸಲಾತಿ ಅಳವಡಿಸಿ, ಕೆ-ಸೆಟ್ ಪರೀಕ್ಷೆ ಬರೆಯಲು ಅಭ್ಯರ್ಥಿಗಳಿಗೆ 1 ವರ್ಷ ವಿನಾಯಿತಿ ನೀಡಿ ಈಗ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕ ಹುದ್ದೆಗೆ ಅರ್ಜಿ ಹಾಕಲು ಅವಕಾಶ ಮಾಡಿಕೊಡಬೇಕೆಂದು ಅವರು ಮನವಿ ಮಾಡಿದ್ದಾರೆ.

(ಕ್ಷಣ ಕ್ಷಣದ ಮಹತ್ವದ ಸುದ್ದಿಗಳಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಆಗಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)

error: Content is protected !!