ಇಂಡಿ ಬರಪೀಡಿತ ತಾಲೂಕು ಎಂದು ಘೋಷಿಸಿ, ಸಿಎಂಗೆ ಪತ್ರ ಬರೆದ ಶಾಸಕ ಯಶವಂತರಾಯಗೌಡ ಪಾಟೀಲ, ಹಾಗಾದರೆ ಪತ್ರದಲ್ಲಿ ಏನಿದೆ? ಇಲ್ಲಿದೆ ಡಿಟೇಲ್ಸ್
ಸರಕಾರ ನ್ಯೂಸ್ ಇಂಡಿ
ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ಇಂಡಿ ತಾಲೂಕು ಬರಪೀಡಿತ ಎಂದು ಘೋಷಿಸುವಂತೆ ಶಾಸಕ ಯಶವಂತರಾಯಗೌಡ ಪಾಟೀಲ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ.
ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಇಂಡಿ ತಾಲೂಕು ಸತತವಾಗಿ ಬರಕ್ಕೆ ತುತ್ತಾಗುತ್ತಿದೆ. 2023-24 ನೇ ಸಾಲಿನಲ್ಲಿ ಮುಂಗಾರು ಮಳೆಗೆ ಪ್ರಮಾಣ ಕುಸಿದಿದೆ. ಜುಲೈ ತಿಂಗಳಿನಲ್ಲಿ ಅಲ್ಪ ಪ್ರಮಾಣದಲ್ಲಿ ಬಿದ್ದ ಮಳೆಗೆ ರೈತರು ಸಾಲ ಮಾಡಿ ಬಿತ್ತನೆ ಮಾಡಿದ್ದಾರೆ. ಆದರೆ, ಸಮರ್ಪಕವಾಗಿ ಮಳೆಯಾಗದ ಕಾರಣ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಬಾಡುತ್ತಿವೆ ಎಂದು ತಿಳಿಸಿದ್ದಾರೆ.
ಅಂತರ್ಜಲ ಮಟ್ಟ ಕುಸಿದಿದೆ. ಕೆರೆ ಕಟ್ಟೆಗಳು, ಹಳ್ಳ-ಕೊಳ್ಳ, ನಾಲೆಗಳಲ್ಲಿ ನೀರು ಬರಿದಾಗಿದೆ. ಸಾವಿರಾರು ಅಡಿ ಬೋರ್‌ವೆಲ್ ಕೊರೆದರೂ ನೀರಿಲ್ಲ. ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗಳಿಗೆ ಅಗತ್ಯವಾದ ಅನುದಾನವಿಲ್ಲದೇ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿವೆ. ಹೀಗಾಗಿ ಜನ ಜಾನುವಾರುವಿಗೆ ಹಾಹಾಕಾರ ಉಂಟಾಗಿದೆ. ಬಹುಏತಕ ವಸತಿ, ಗ್ರಾಮಗಳಲ್ಲಿ ಜನರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಜಾನುವಾರಿಗೆ ಗೋಶಾಲೆ ಆರಂಭಿಸುವುದು, ಜನರಿಗೆ ಉದ್ಯೋಗ ಕೊಡುವ ಅವಶ್ಯಕತೆ ಇದೆ.
ಆದ್ದರಿಂದ ಇಂಡಿ ತಾಲೂಕು ಬರಪೀಡಿತ ಎಂದು ಘೋಷಿಸಿ ಸರ್ಕಾರದಿಂದ ವಿಶೇಷ ಸೌಲಭ್ಯ ಕೊಡಬೇಕೆಂದು ಮನವಿ ಮಾಡಿದ್ದಾರೆ.
(ಕ್ಷಣ ಕ್ಷಣದ ಸುದ್ದಿಗಾಗಿ ಸರಕಾರ ನ್ಯೂಸ್ ಸಬ್ ಸ್ಕ್ರೈಬ್ ಮಾಡಿ. ಅದಕ್ಕಾಗಿ ಪಕ್ಕದಲ್ಲಿರುವ ಬೆಲ್ ಬಟನ್ ಪ್ರೆಸ್ ಮಾಡಿ)