ಭೀಮಾತೀರದಲ್ಲಿ ಜೋಡಿ ಕೊಲೆ, ಅಕ್ಕ- ತಮ್ಮನ ಹತ್ಯೆಗೆ ಕಾರಣವೇನು ಗೊತ್ತೆ?
ಸರಕಾರ್ ನ್ಯೂಸ್ ವಿಜಯಪುರ
ಭೀಮಾತೀರ ಖ್ಯಾತಿಯ ಸಿಂದಗಿ ತಾಲೂಕಿನ ಬೂದಿಹಾಳ ಪಿಎಚ್ ಗ್ರಾಮದಲ್ಲಿ ಜೋಡಿ ಕೊಲೆಯಾಗಿದೆ.
ರಾಜಶ್ರೀ ಶಂಕರಗೌಡ ಬಿರಾದಾರ (32) ಹಾಗೂ ನಾನಾಗೌಡ ಶ್ರೀಮಂತ ಯರಗಲ್ (29) ಕೊಲೆಯಾಗಿದ್ದಾರೆ.
ಘಟನೆಗೆ ಕೌಟುಂಬಿಕ ಕಲಹವೇ ಕಾರಣ ಎನ್ನಲಾಗಿದೆ. ರಾಜಶ್ರೀ ಪತಿ ಶಂಕರಗೌಡ ಅಪ್ಪಾಸಾಹೇಬ ಬಿರಾದಾರ ಹಾಗೂ ನಾಲ್ವರು ಸೇರಿ ಈ ಕೃತ್ಯ ಎಸಗಿದ್ದಾರೆನ್ನಲಾಗಿದೆ.
ಕಳೆದ ಐದು ವರ್ಷಗಳ ಹಿಂದೆ ರಾಜಶ್ರೀ ಹಾಗೂ ಶಂಕರಗೌಡ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಈಚೆಗೆ ಒಂದು ವರ್ಷದಿಂದ ಇಬ್ಬರ ಮಧ್ಯೆ ಜಗಳ ಉಂಟಾಗಿದ್ದು ರಾಜಶ್ರೀ ತವರು ಮನೆಯಲ್ಲಿಯೇ ವಾಸವಾಗಿದ್ದಾಳೆ.
ಸೋಮವಾರ ಮಧ್ಯಾಹ್ನ 12 ರ ಸುಮಾರಿಗೆ ಮಕ್ಕಳ ವಿದ್ಯಾಭ್ಯಾಸ ಹಿನ್ನೆಕೆ ವರ್ಗಾವಣೆ ಪ್ರಮಾಣ ಪತ್ರ ಪಡೆಯಲು ಬೂದಿಹಾಳಕ್ಕೆ ತಮ್ಮನೊಂದಿಗೆ ಹೋಗಿದ್ದಾಳೆ. ದಾಖಲೆ ಪಡೆದು ಬೂದಿಹಾಳ ಪಿಎಚ್ ಗ್ರಾಮದಿಂದ ಓತಿಹಾಳ ಕಡೆಗೆ ಹೋಗುವ ಮಾರ್ಗದ ಹಳ್ಳದ ಹತ್ತಿರ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲಾಗಿದೆ. ಸಿಂದಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನಾ ಸ್ಥಳಕ್ಕೆ ಸಾರ್ವಜನಿಕರು ತಂಡೋಪತಂಡವಾಗಿ ಆಗಮಿಸುತ್ತಿದ್ದು ತೀವ್ರ ಕುತೂಹಲ ಸೃಷ್ಠಿಸಿದೆ. ಈ ಬಗ್ಗೆ ಪ್ರಕರಣ ದಾಖಲಿಸುವ ಪ್ರಯತ್ನ ನಡೆದಿದೆ.