ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ, ರಾಜ್ಯ ನಾಯಕ ನಲಪಾಡ್ ಗಂಭೀರ ಆರೋಪ, ಬಿಜೆಪಿ ಪಿಕ್ ಪಾಕೆಟ್ ಸರ್ಕಾರ
ವಿಜಯಪುರ: ಬಿಜೆಪಿಯ ಬೆಲೆ ಏರಿಕೆ ನೀತಿ ವಿರೋಧಿಸಿ ಕಾಂಗ್ರೆಸ್ ಯುವ ಘಟಕದಿಂದ ಶನಿವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಯಿತು. ಯುವ ಘಟಕದ ರಾಜ್ಯಾಧ್ಯಕ್ಷ ಮಹ್ಮದ್ ಹ್ಯಾರಿಸ್ ನಲಪಾಡ ಮಾತನಾಡಿ, ‘ಬಹುತ್ ಹೋಗಯಿ ಮೆಂಗಾಯಿ ಕಿ ಮಾರ, ಅಬ್ ಕಿ ಬಾರ್ ಮೋದಿ ಸರ್ಕಾರ’ ಎಂಬ ಘೋಷ ವಾಕ್ಯದೊಂದಿಗೆ 2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂತು. ಆದರೆ ಅಲ್ಲಿಂದ ಈವರೆಗೆ ಅವರಾಗಲಿ, ಅವರ ಮಂತ್ರಿಗಳಾಗಲಿ ಬೆಲೆ ಏರಿಕೆ ಬಗ್ಗೆ ಮತನಾಡುತ್ತಿದ್ದೀರಾ? ಇದೊಂದು ಪಿಕ್ ಪಾಕೆಟ್ ಸರ್ಕಾರ ಎಂದು ಆರೋಪಿಸಿದರು.
ಇಂಧನ ಬೆಲೆ, ಅಡುಗೆ ಅನಿಲದ ಬೆಲೆ, ಹಾಲು, ವಿದ್ಯುತ್ ಹೀಗೆ ಹಲವು ದೈನಂದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಇದನ್ನು ಖಂಡಿಸಿ ಈಗಾಗಲೇ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ತಾಲೂಕು ಮಟ್ಟದಲ್ಲೂ ಪ್ರತಿಭಟನೆ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಹಿಂದು ಸಂಘಟನೆಗಳ ಅಭಿಯಾನದ ಕುರಿತು ಪ್ರತಿಕ್ರಿಯಿಸಿದ ಅವರು, ನಾನೊಬ್ಬ ಮುಸ್ಲಿಂನಾಗಿ ಈಗ ಉಪವಾಸವಿದ್ದು ಇಂದು ದೇವಸ್ಥಾನಕ್ಕೆ ಬಂದಿದ್ದೇನೆ. ಬೈಬಲ್, ಕುರಾನ್ ಎಲ್ಲವೂ ಒಂದೆ. ಸಂವಿಧಾನದ ಮೇಲೆ ನಮಗೆ ನಂಬಿಕೆ ಇದೆ. ಬಿಜೆಪಿ ಮಾತ್ರ ಕೋಮುವಾದ ಸೃಷ್ಟಿಸುತ್ತಿದೆ. ಇದಕ್ಕೆ ಈ ದೇಶದ ಜನ ಬೆಂಬಲಿಸಲ್ಲ ಎಂದರು.
ಕೊಲೆ ಪ್ರಕರಣವೊಂದನ್ನು ಹಿಂದು-ಮುಸ್ಲಿಂ ಗಲಭೆ ಎಂದು ಬಿಂಬಿಸಲು ಹೊರಟಿದ್ದಲ್ಲದೇ ತಪ್ಪೊಪ್ಪಿಕೊಂಡಿರುವ ಸಚಿವ ಆರಗ ಜ್ಞಾನೇಂದ್ರ ಬಗ್ಗೆ ಕಿಡಿ ಕಾರಿದ ಅವರು, ಆರಗ ಜ್ಞಾನೇಂದ್ರ ಅಲ್ಲ ಅವರು ಅರ್ಧ ಜ್ಞಾನ ಇರುವವರು. ಪೂರ್ತಿ ಜ್ಞಾನ ಇದ್ದರೆ ಹೀಗೆಲ್ಲ ಮಾತನಾಡುತ್ತಿರಲಿಲ್ಲ. ಕೂಡಲೇ ಅವರನ್ನು ಸಚಿವ ಸಂಪುಟ ದಿಂದ ಕೈಬಿಡಬೇಕೆಂದರಲ್ಲದೇ ಅವರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಲು ಸಿದ್ದತೆ ನಡೆದಿದೆ ಎಂದು ಪ್ರಶ್ನೆಯೊಂದಲ್ಲೆ ಅವರು ಪ್ರತಿಕ್ರಿಯಿಸಿದರು. ವಿವಿಧ ಮುಖಂಡರು ಪಾಲ್ಗೊಂಡಿದ್ದರು.