ಇಂಡಿ ನೂತನ ಡಿವೈಎಸ್‌ಪಿಗೆ ನೂರೆಂಟು ಸವಾಲು, ಚಂದ್ರಕಾಂತ ನಂದರಡ್ಡಿ ಆಗಮನ ಹೆಚ್ಚಿಸಿದ ನಿರೀಕ್ಷೆ, ಅಕ್ರಮಗಳಿಗೆ ಕಡಿವಾಣ ಹಾಕುವರೇ ಹೊಸ ಸಾಹೇಬ್ರು…?
ಇಂಡಿ: ಭೀಮಾತೀರ ಖ್ಯಾತಿಯ ಇಂಡಿ ವಿಭಾಗದ ನೂತನ ಡಿವೈಎಸ್‌ಪಿ ಆಗಿ ಚಂದ್ರಕಾಂತ ನಂದರಡ್ಡಿ ಆಗಮಿಸುತ್ತಿದ್ದು ಇವರ ಮುಂದೆ ಸಾಲು ಸಾಲು ಸವಾಲುಗಳಿವೆ.
ಈ ಮುಂಚೆ ಈ ಭಾಗದಲ್ಲಿ ಸಿಪಿಐ ಆಗಿ ಜನಸ್ನೇಹಿ ಆಡಳಿತ ನೀಡಿರುವ ಚಂದ್ರಕಾಂತ ನಂದರಡ್ಡಿ ಇದೀಗ ಡಿವೈಎಸ್‌ಪಿ ಆಗಿ ಬರುತ್ತಿರುವುದು ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಹೊಸ ಸಂಚಲನ ಮೂಡಿಸಿದೆ. ಅಕ್ರಮ ಚಟುವಟಿಕೆಗಳೇ ಹೆಚ್ಚಾಗಿರುವ ಇಂಡಿ ಭಾಗದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸುವ ನಿಟ್ಟಿನಲ್ಲಿ ಡಿವೈಎಸ್‌ಪಿ ಕ್ರಮ ವಹಿಸಬೇಕಿದೆ.
ಅಕ್ರಮ ಮರಳು ದಂಧೆ, ಶಸ್ತ್ರಾಸ್ತ್ರ ಸಾಗಾಟ, ಗಾಂಜಾ, ಅಫೀಮು ಮಾರಾಟ ಹೀಗೆ ಹಲವು ಕಾನೂನು ಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ. ಹಳ್ಳಿಗಳಲ್ಲಿ ಡಾಭಾಗಳ ಸಂಖ್ಯೆ ಹೆಚ್ಚಾಗಿದೆ. ಇಸೀಟ್ ಅಡ್ಡೆಗಳು ನಾಯಕೊಡೆಗಳಂತೆ ತಲೆ ಎತ್ತಿವೆ. ಮಟ್ಕಾ ದಂಧೆ ಜೋರಾಗಿದೆ. ಇವುಗಳಿಗೆ ಕಡಿವಾಣ ಹಾಕಬೇಕಿದೆ.
ಶಾಸಕರೇ ಪ್ರಶ್ನೆ ಮಾಡಿದ್ದಾರೆ:
ಇಂಡಿ ತಾಲೂಕಿನ ಡಾಭಾ, ಹೋಟೆಲ್‌ಗಳಲ್ಲಿ ಮಾದಕ ದ್ರವ್ಯಗಳು ಮಾರಾಟವಾಗುತ್ತಿರುವ ಬಗ್ಗೆ ಶಾಸಕ ಯಶವಂತರಾಯಗೌಡ ಪಾಟೀಲ ಅವರೇ ಸದನದಲ್ಲಿ ಗಮನ ಸೆಳೆದಿದ್ದರು. ಈ ವೇಳೆ ಸಂಬಂಧಿಸಿದ ಅಧಿಕಾರಿಗಳು ನೀಡಿದ ಮಾಹಿತಿ ಅನ್ವಯ, ಇಂಡಿಯ ಡಾಭಾ ಬಳಿ ನಿಲ್ಲಿಸಿದ ಒಂದು ಟ್ರಕ್‌ನಲ್ಲಿ ಮಾದಕ ದ್ರವ್ಯ ಸಿಕ್ಕಿದ್ದು, ಇತರೆ ಸ್ಥಳಗಳಲ್ಲಿ ಜರುಗಿದ 4 ಪ್ರಕರಣಗಳು ಶಾಸಕರ ಪ್ರಶ್ನೆಗೆ ಪುಷ್ಠಿ ನೀಡುವಂತಿದ್ದವು.
ಜನವರಿ 1, 2022ರಂದು ಹೋರ್ತಿ ಠಾಣೆ ವ್ಯಾಪ್ತಿಯ ಕೊಟ್ನಾಳ ಕ್ರಾಸ್ ಹತ್ತಿರ ಎನ್ ಎಚ್ 52 ರಸ್ತೆ ಪಶ್ಚಿಮ ಬದಿಗೆ ಇರುವ ಶರ್ಮಾ ಡಾಬಾದ ಆವರಣದಲ್ಲಿ ನಿಲ್ಲಿಸಿದ್ದ ಲಾರಿ ಮೇಲೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದರು. ಹಿಮಾಚಲ ಪ್ರದೇಶದ ಇಬ್ಬರು ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು 1.50ಲಕ್ಷ ರೂ. ಮೌಲ್ಯದ ಅಫೀಮು ವಶಕ್ಕೆ ಪಡೆದಿದ್ದರು. ಈ ಪ್ರಕರಣ ಇನ್ನೂ ತನಿಖೆಯಲ್ಲಿದೆ.
ಇದೇ ರೀತಿ ದೇಗಿನಾಳ ಗ್ರಾಮದ ಹದ್ದಿನಲ್ಲಿ ಬರುವ ಜಮೀನು, ಲೋಣಿ ಕೆಡಿ ಗ್ರಾಮದ ಜಮೀನು, ದೇವರನಿಂಬರಗಿ ಗ್ರಾಮದ ಜಮೀನಿನಲ್ಲಿ ಮಾದಕ ದ್ರವ್ಯ ಬೆಳೆಯುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿದ್ದು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿವೆ. ಇಂಡಿ ಪಟ್ಟಣದ ಮಹಾವೀರ ವೃತ್ತದ ಬಳಿ ಕಾರಿನಲ್ಲಿ ಮಾದಕ ದ್ರವ್ಯ ಸಿಕ್ಕಿದ್ದು 3 ಜನರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ನ್ಯಾಯಾಲಯದ ಮಟ್ಟದಲ್ಲಿ ವಿಚಾರಣೆ ಹಂತದಲ್ಲಿದೆ. ಹೀಗೆ ದಾಖಲಾದ ಹಲವು ಪ್ರಕರಣಗಳು ಇಂಡಿ ಭಾಗದಲ್ಲಿ ಮಾದಕ ದ್ರವ್ಯ ಮಾರಾಟ ಮತ್ತು ಸಾಗಾಟದ ಬಗ್ಗೆ ಸಾಕ್ಷ ಒದಗಿಸುತ್ತವೆ.
ಹೀಗೆ ಹಲವಾರು ಅಕ್ರಮ ಚಟುವಟಿಕೆಗಳಿಗೆ ನೂತನ ಡಿವೈಎಸ್‌ಪಿ ಚಂದ್ರಕಾಂತ ನಂದರಡ್ಡಿ ಕಡಿವಾಣ ಹಾಕುವರೆಂಬ ಭರವಸೆ ಸಾರ್ವಜನಿಕರಲ್ಲಿ ಮನೆ ಮಾಡಿದೆ.